ಉತ್ತರ ಕನ್ನಡ | ಪಡಿತರದಾರರ ದೃಢತೆಗೆ 'ಸರ್ವರ್' ಸಂಕಷ್ಟ

ಉತ್ತರ ಕನ್ನಡ | ಪಡಿತರದಾರರ ದೃಢತೆಗೆ 'ಸರ್ವರ್' ಸಂಕಷ್ಟ

ಉತ್ತರ ಕನ್ನಡ | ಪಡಿತರದಾರರ ದೃಢತೆಗೆ 'ಸರ್ವರ್' ಸಂಕಷ್ಟ

ಕಾರವಾರ: ಪಡಿತರ ಚೀಟಿದಾರರ ಖಚಿತತೆಗೆ ಇ–ಕೆವೈಸಿ ನಡೆಸುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕ್ರಮಕ್ಕೆ ಜಿಲ್ಲೆಯಲ್ಲಿ ತಾಂತ್ರಿಕ ಸವಾಲು ಎದುರಾಗುತ್ತಿದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬ ಸದಸ್ಯರೆಲ್ಲರೂ ನ್ಯಾಯಬೆಲೆ ಅಂಗಡಿಗಳ ಎದುರು ದಿನವಿಡೀ ಕಾದು ಸುಸ್ತಾಗುತ್ತಿದ್ದಾರೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಹಂಚಿಕೆ ಆರಂಭಗೊಂಡ ಹೊತ್ತಲ್ಲೇ ಇ–ಕೆವೈಸಿ ಪ್ರಕ್ರಿಯೆ ಆರಂಭಗೊಂಡಿದ್ದರಿಂದ ಒಂದೆಡೆ ಪಡಿತರ ವಿತರಣೆ, ಇನ್ನೊಂದೆಡೆ ಕೆವೈಸಿ ಪ್ರಕ್ರಿಯೆ ನಡೆಸುವ ಒತ್ತಡ ಉಂಟಾಗಿದೆ. ಇದು ನ್ಯಾಯಬೆಲೆ ಅಂಗಡಿಕಾರರು, ಗ್ರಾಹಕರಿಬ್ಬರಿಗೂ ತೊಂದರೆ ತಂದಿದೆ. ಹೀಗಾಗಿ, ಸದ್ಯಕ್ಕೆ ಕೆವೈಸಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು, ಸೆ.1ರಿಂದ ಪುನಃ ಪ್ರಕ್ರಿಯೆ ಆರಂಭಗೊಳ್ಳಲಿದೆ.

‘ಅಂತ್ಯೋದಯ ಅನ್ನ ಯೋಜನೆಯ ಲಾಭ ಪಡೆಯುವ 31,053 ಮತ್ತು ಬಿಪಿಎಲ್ ಸೌಲಭ್ಯ ಹೊಂದಿರುವ 5,37,991 ಮಂದಿ ಸೇರಿದಂತೆ 5,69,044 ಮಂದಿ ಕೆವೈಸಿ ಪ್ರಕ್ರಿಯೆಗೆ ಒಳಪಡಬೇಕಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೆವೈಸಿ ಮಾಡಿಸುವುದು ಕಡ್ಡಾಯ. ಕಳೆದ ಎರಡು ವಾರ ಕೆವೈಸಿ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆಯಿತು. ಆದರೆ, ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಇಲ್ಲದೆ, ಸರ್ವರ್ ಅಡಚಣೆಯಿಂದ ಕೇವಲ ಶೇ 3.50ರಷ್ಟು ಮಾತ್ರ ಕೆವೈಸಿ ಪೂರ್ಣವಾಗಿದೆ’ ಎಂದು ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಹೇಳಿದರು.

ಶಿರಸಿ ತಾಲ್ಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡುವ ಪ್ರಕ್ರಿಯೆ ವಿಳಂಬ ಆಗಿದೆ. ಶ್ರಮದಾಯಕ ಕೆಲಸ ಮಾಡುವವರಿಗೆ ದಿನದ ಕೂಲಿ ಬಿಟ್ಟು ಇ–ಕೆವೈಸಿಗಾಗಿ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕಾರ್ಮಿಕರು, ರೈತರು, ಮರಗೆಲಸ ಮಾಡುವವರು, ಪಾತ್ರೆ ತೊಳೆಯುವ, ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಶ್ರಮದಾಯಕ ಕೆಲಸ ನಿರ್ವಹಿಸುವವರ ಬೆರಳಚ್ಚು ಸರಿಯಾಗಿ ಮೂಡುತ್ತಿಲ್ಲ. ಇದರಿಂದ ಇ ಕೆವೈಸಿ ಪ್ರಕ್ರಿಯೆ ಕಷ್ಟ ಆಗುತ್ತಿದೆ.

ಭಟ್ಕಳ ತಾಲ್ಲೂಕಿನಲ್ಲಿಯೂ ಇ–ಕೆವೈಸಿ ಮಾಡಿಸಲು ಸರ್ವರ್ ಸಮಸ್ಯೆಯಿಂದಾಗಿ ಜನರು ರೇಷನ್‌ ಅಂಗಡಿ ಮುಂದೆ ದಿನವಿಡೀ ಕಾಯಬೇಕಾದ ಸ್ಥಿತಿ ಉಂಟಾಯಿತು. ನ್ಯಾಯಬೆಲೆ ಅಂಗಡಿಯವರು ಜನರಿಗೆ ಸೈಬರ್‌ ಸೆಂಟರ್‌ಗೆ ತೆರಳಿ ಇ–ಕೆವೈಸಿ ಮಾಡಿಸಿಕೊಳ್ಳಲು ಸೂಚಿಸಿದ ದೂರುಗಳು ಕೇಳಿಬಂದವು.

‘ಸೈಬರ್‌ ಸೆಂಟರ್‌ನವರು ಅತ್ತಿಂದ ಇತ್ತ ಸುತ್ತಾಟ ನಡೆಸುತ್ತಿದ್ದಾರೆ. ಉದ್ಯೋಗ ನಿಮಿತ್ತ ಹೊರಗೆ ನೆಲೆಸಿರುವವರು ಇ–ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎನ್ನುತ್ತಿದ್ದಾರೆ. ಅದರ ಸಲುವಾಗಿಯೆ ಕೆಲಸ ಬಿಟ್ಟು ಊರಿಗೆ ಬಂದರೆ ಸರ್ವರ್ ಸಮಸ್ಯೆಯಿಂದಾಗಿ ಊರಿನಲ್ಲಿಯೆ ಉಳಿಯುವಂತಾಗಿದೆ’ ಎಂಬುದು ಜನರ ದೂರು.

ಮುಂಡಗೋಡ ತಾಲ್ಲೂಕಿನ ಬಹುತೇಕ ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಪ್ರಕ್ರಿಯೆಗೆ ತೊಂದರೆಯಾಗಿದೆ. ಆರಂಭಿಕ ದಿನಗಳಲ್ಲಿ ದಿನಕ್ಕೆ 20ರಿಂದ 25 ಜನರ ಇ-ಕೆವೈಸಿ ಮಾಡಲಾಗುತ್ತಿತ್ತು. ಆದರೆ, ತಿಂಗಳ ಮಧ್ಯಭಾಗದಲ್ಲಿ ಪಡಿತರ ವಿತರಣೆ ಆರಂಭವಾಗಿರುವುದರಿಂದ ಇ-ಕೆವೈಸಿ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ.

‘ಪಡಿತರ ಒಯ್ಯಲು ಬರುವರು, ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೇ ಪಡಿತರ ಅಂಗಡಿಗಳ ಎದುರು ಕುಳಿತುಕೊಳ್ಳುವಂತ ಪರಿಸ್ಥಿತಿ ಇದೆ’ ಎಂದು ಪಡಿತರದಾರ ಫಕ್ಕೀರಪ್ಪ ಅಂತೋಜಿ ಹೇಳಿದರು.

ಗೋಕರ್ಣ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಕೆವೈಸಿ ಪ್ರಕ್ರಿಯೆಗೆ ಸರ್ವರ್ ಸಮಸ್ಯೆಯಾಗಿದೆ. ತಡರಾತ್ರಿಯವರೆಗೂ ಕಾರ್ಯ ನಿರ್ವಹಿಸಿದ ಪ್ರಮೇಯವೂ ಬಂದಿತ್ತು. ಒಂದು ಪಡಿತರ ಕಾರ್ಡ್ ಕೆವೈಸಿ ಮಾಡಲು ಕನಿಷ್ಠ 15 ರಿಂದ 20 ನಿಮಿಷ ಸಮಯ ಬೇಕಿತ್ತು. ಇದರಿಂದ ಗ್ರಾಹಕರೂ ತೊಂದರೆ ಅನುಭವಿಸಿದ್ದರು ಎಂದು ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿ ತಿಳಿಸಿದ್ದಾರೆ.

‘ಪಡಿತರ ಅಂಗಡಿಯಲ್ಲಿ ಕೆವೈಸಿ ಮಾಡಿಸಲು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ಸರ್ವರ್ ಕಾಟ ನಮ್ಮ ಸಮಯವನ್ನೂ ಕಾಡುತ್ತಿದೆ’ ಎಂದು ಬಿಜ್ಜೂರಿನ ಲಕ್ಷ್ಮಿ ಗೌಡ ಬೇಸರ ವ್ಯಕ್ತಪಡಿಸಿದರು.

ಹೊನ್ನಾವರ ತಾಲ್ಲೂಕಿನ ನ್ಯಾಯಬೆಲೆ ಅಂಗಡಿ, ಅನಿಲ ಸಿಲಿಂಡರ್ ಪೂರೈಕೆ ಕೇಂದ್ರಗಳು ಸೇರಿದಂತೆ ಇ ಕೆವೈಸಿ ನೀಡಬೇಕಾದ ಕೇಂದ್ರಗಳಲ್ಲಿ ದಿನನಿತ್ಯ ಜನರ ಉದ್ದ ಸಾಲು ಕಂಡುಬರುತ್ತಿದೆ. ಸರ್ವರ್ ಸಮಸ್ಯೆಯ ಕಾರಣ ಒಟಿಪಿ ಬರದೆ ದಿನನಿತ್ಯ ಅಲೆದಾಡುವಂತಾಗಿದೆ ಎಂಬುದು ಸಾರ್ವಜನಿಕರ ದೂರು.

‘ಹಣಕೊಟ್ಟು ಇ–ಕೆವೈಸಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಗ್ರಾಮ ಒನ್ ಕೇಂದ್ರಗಳಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆ ಖಾಸಗಿ ಆನ್ ಲೈನ್ ಕೇಂದ್ರಗಳಲ್ಲಿ ಇರುವುದಿಲ್ಲವೇ?’ ಎಂದು ಹಡಿನಬಾಳದ ಹನುಮಂತ ಗೌಡ ಪ್ರಶ್ನಿಸಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ಅಜಿತ್ ನಾಯಕ.

ದಾಂಡೇಲಿಯಲ್ಲಿ ಆ.17ರಿಂದ ಪಡಿತರ ವಿತರಣೆಗಾಗಿ ಇ ಕೆವೈಸಿ ಸ್ಥಗಿತ ಮಾಡಲಾಗಿದೆ. ಕರ್ನಾಟಕ ಒನ್ ಸೆಂಟರ್ ಮಾಲೀಕರ ಜೊತೆಗೆ ಸಭೆ ಮಾಡಿ ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ತೆಗೆದುಕೊಳ್ಳಲು ತಿಳಿಸಲಾಗಿದೆ. ಆದಷ್ಟು ಪಡಿತರ ವಿತರಣೆ ಅಂಗಡಿಯಲ್ಲಿಯೇ ಇ–ಕೆವೈಸಿ ಮಾಡಲು ಪಡಿತರ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ಆಹಾರ ನಿರೀಕ್ಷಕ ಗೋಪಿ ಚೌಹಾಣ್ ತಿಳಿಸಿದ್ದಾರೆ. ‘ಪಡಿತರ ಇ ಕೆವೈಸಿ ಸಂಬಂಧಿಸಿದಂತೆ ಪಡಿತರ ಅಂಗಡಿಯಲ್ಲಿಯೇ ಆಗಬೇಕು. ಇದಕ್ಕೆ ಸೈಬರ್ ಸೆಂಟರ್‌‍ಗಳು ಬಡವರಿಂದ ನೂರಾರು ರೂಪಾಯಿ ವಸೂಲಿ ಮಾಡುತ್ತಿವೆ. ಸರ್ಕಾರ ಯೋಜನೆಯನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲು ಬಡವರ ಮೇಲೆ ಹೊರೆ ಹಾಕುವುದು ಸರಿಯಲ್ಲ’ ಎಂದು ಬಿಜೆಪಿ ಮುಖಂಡ ಬುದವಂತ ಗೌಡ ಪಾಟೀಲ ದೂರಿದ್ದಾರೆ.

ದಿನನಿತ್ಯದ ಕಾರ್ಯಚಟುವಟಿಕೆಗೆ ಅಡ್ಡಿ

ಅಂಕೋಲಾ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ದಿನಕ್ಕೆ ಕನಿಷ್ಠ ಹತ್ತು ಪಡಿತರ ಚೀಟಿದಾರರ ಇ-ಕೆವೈಸಿ ಮಾಡುವುದೂ ಕಷ್ಟಕರವಾಗಿದೆ ಎಂದು ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಬೆಳಿಗ್ಗೆ ನೆಟ್‌ವರ್ಕ್ ನಿಧಾನವಾಗಿರುತ್ತದೆ. ಮಧ್ಯಾಹ್ನದ ನಂತರ ನೆಟ್‌ವರ್ಕ್ ಲಭ್ಯವಾದರೂ ಕೆಲವೇ ಪಡಿತರ ಚೀಟಿಗಳ ಇ-ಕೆವೈಸಿ ಮಾಡಲು ಸಾಧ್ಯವಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳ ನಿತ್ಯದ ಕಾರ್ಯಚಟುವಟಿಕೆಗಳಿಗೆ ಅಡಚಣೆಯಾಗುತ್ತಿದೆ ಎಂದು ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿಯೊಬ್ಬರು ಹೇಳಿದರು.

‘ನ್ಯಾಯಬೆಲೆ ಅಂಗಡಿಗಳ ಜೊತೆಗೆ ಖಾಸಗಿ ಆನ್‌ಲೈನ್ ಕೇಂದ್ರಗಳಲ್ಲಿಯೂ ಇ-ಕೆವೈಸಿ ಮಾಡಲು ಅವಕಾಶ ನೀಡಿದರೆ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳುವುದರ ಜೊತೆಗೆ ಸಾರ್ವಜನಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ್ ಭಾವಿಕೇರಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-20-895997613

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ