
ಮಹಾಲಿಂಗಪುರದಲ್ಲಿ ಕ್ವಿಂಟಲ್ ಬೆಲ್ಲ ₹7,200ಕ್ಕೆ ಹರಾಜು, ಸಾರ್ವಕಾಲಿಕ ದಾಖಲೆ
ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ಸಕ್ಕರೆ ದರ ಏರಿಕೆಯ ನೇರ ಪರಿಣಾಮ ಬೆಲ್ಲದ ಮಾರುಕಟ್ಟೆಯ ಮೇಲಾಗಿದೆ. ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಬೆಲ್ಲದ ದರ ದಿಢೀರ್ ಏರಿಕೆ ಕಂಡಿದ್ದು, ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಹರಾಜಾಗುತ್ತಿದೆ.
ಸಾಮಾನ್ಯವಾಗಿ ಪ್ರತಿ ಕ್ವಿಂಟಲ್ ಬೆಲ್ಲದ ದರ ₹4,500 ಇರುತ್ತಿತ್ತು. ಆದರೆ, ಕಳೆದ ನಾಲ್ಕು ದಿನಗಳಲ್ಲಿ ₹2,700 ಏರಿಕೆಯಾಗಿದ್ದು ಪ್ರಸ್ತುತ ಕ್ವಿಂಟಲ್ ಬೆಲ್ಲ ₹6 ಸಾವಿರದಿಂದ ₹7,200ಕ್ಕೆ ಹರಾಜಾಗುತ್ತಿದೆ.
‘ಸಾಮಾನ್ಯವಾಗಿ ಹಬ್ಬಗಳ ಋತುವಿನಲ್ಲಿ ಬೆಲ್ಲದ ದರ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ದರ ಏರಿಕೆ ಆಗಿರಲಿಲ್ಲ’ ಎನ್ನುತ್ತಾರೆ ಬೆಲ್ಲದ ವ್ಯಾಪಾರಸ್ಥರು.
‘ಈ ಹಿಂದೆ ಮಹಾಲಿಂಗಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ಅಡತ್ ಅಂಗಡಿಗಳಿಂದ ಪ್ರತಿ ದಿನ 15 ರಿಂದ 20 ಲಾರಿಯಷ್ಟು ಬೆಲ್ಲ ಹೊರರಾಜ್ಯಗಳಿಗೆ ರಫ್ತಾಗುತ್ತಿತ್ತು. ಈಗ ದಿನಕ್ಕೆ ಒಂದು ಅಥವಾ ಎರಡು ಲಾರಿಗಳಷ್ಟೇ ಹೋಗುತ್ತಿವೆ. ಹಬ್ಬಗಳಲ್ಲಿ ತಯಾರಿಸುವ ಸಿಹಿ ತಿಂಡಿಗಳಿಗೆ ಹೆಚ್ಚಾಗಿ ಬೆಲ್ಲವನ್ನೇ ಬಳಸಲಾಗುತ್ತಿದ್ದು, ಬೇಡಿಕೆ ಹೆಚ್ಚಿದೆ. ಆದರೆ, ಮಾರುಕಟ್ಟೆಗೆ ಬರುವ ಬೆಲ್ಲದ ಪ್ರಮಾಣ ತೀವ್ರ ಕುಸಿತ ಕಂಡಿದೆ’ ಎಂದು ವ್ಯಾಪಾರಿಗಳು ತಿಳಿಸಿದರು.
‘ಸಕ್ಕರೆ ಬಳಸಿ ಬೆಲ್ಲ ತಯಾರಿಸುವವರು ಈಗ ಸಕ್ಕರೆ ದರ ಏರಿಕೆಯಾಗಿದ್ದರಿಂದ ಬೆಲ್ಲದ ತಯಾರಿಕೆಯಿಂದಲೇ ಹಿಂದೆ ಸರಿದಿದ್ದಾರೆ. ರೈತರು ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುತ್ತಿರುವ ಪರಿಣಾಮ ಬೆಲ್ಲ ತಯಾರಿಕೆಯ ಗಾಣಗಳ ಸಂಖ್ಯೆ ಕಡಿಮೆಯಾಗಿವೆ. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾದ ಪರಿಣಾಮ ಬೆಲ್ಲದ ದರ ದಾಖಲೆ ಮಟ್ಟಕ್ಕೆ ತಲುಪಿದೆ’ ಎಂದರು.
ಹಬ್ಬಗಳು ಇರುವುದರಿಂದ ಬೆಲ್ಲಕ್ಕೆ ಬೇಡಿಕೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಇಲ್ಲ. ಹಲವು ಕಾರಣದಿಂದ ಬೆಲ್ಲದ ಉತ್ಪಾದನೆ ಕುಂಠಿತಗೊಂಡಿದ್ದು ದರ ಏರಿಕೆಯಾಗಿದೆ. ದೀಪಾವಳಿ ಹಬ್ಬದವರೆಗೂ ಬೆಲ್ಲಕ್ಕೆ ಬೇಡಿಕೆ ಇರುತ್ತದೆ ಧನರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ, ಎಪಿಎಂಸಿ ಮಹಾಲಿಂಗಪುರ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-19-1859045231