
ಬೆಂಗಳೂರಿನಲ್ಲಿ ನಡೆಯಲಿದೆ ದೇಶದ ಅತಿದೊಡ್ಡ ಕಾಫಿ ಉತ್ಸವ
ಬೆಂಗಳೂರು: ದೇಶದ ಅತಿದೊಡ್ಡ ಕಾಫಿ ಉತ್ಸವವೆಂದು ಹೆಸರಾಗಿರುವ ‘ಇಂಡಿಯಾ ಇಂಟರ್‌ನ್ಯಾಷನಲ್ ಕಾಫಿ ಫೆಸ್ಟಿವಲ್’ (ಐಐಸಿಎಫ್) ಮುಂದಿನ ವರ್ಷ ಫೆಬ್ರುವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಕಾಫಿ ಬೋರ್ಡ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಕುರ್ಮಾ ರಾವ್ ಅವರು ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಸಿಎಐ) ಸಹಯೋಗದೊಂದಿಗೆ ಕಾಫಿ ಬೋರ್ಡ್ ಈ ಉತ್ಸವವನ್ನು ಆಯೋಜಿಸುತ್ತಿದೆ ಎಂದು ಹೇಳಿದ್ದಾರೆ.
ಮೂರು ದಿನಗಳ ಉತ್ಸವದಲ್ಲಿ 50ಕ್ಕೂ ಹೆಚ್ಚು ದೇಶಗಳ ಕಾಫಿ ಬೆಳೆಗಾರರು, ರೋಸ್ಟರ್‌ಗಳು, ಕೆಫೆ ಬ್ರ್ಯಾಂಡ್‌ಗಳು, ಉಪಕರಣ ತಯಾರಕರು, ಬಾರಿಸ್ತಾಗಳು ಹಾಗೂ ಕಾಫಿ ಪ್ರಿಯರು ಭಾಗವಹಿಸುವ ನಿರೀಕ್ಷೆಯಿದೆ. ಕಾಫಿ ಕ್ಷೇತ್ರದ ವಿವಿಧ ಭಾಗೀದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶವನ್ನು ಉತ್ಸವ ಹೊಂದಿದೆ.
‘ಫಾರ್ಮ್ ಟು ಕಪ್’ ಪರಿಕಲ್ಪನೆಯಡಿ ನಡೆಯಲಿರುವ ಈ ಉತ್ಸವದಲ್ಲಿ ಭಾರತದ ವಿವಿಧ ಕಾಫಿ ಬೆಳೆಯುವ ಪ್ರದೇಶಗಳ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುವುದು. ಅಲ್ಲದೆ, ಕಾಫಿಯ ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿದ ‘ಕಪ್ಪಿಂಗ್’ ಸೆಷನ್‌ಗಳು, ಬ್ರೂಯಿಂಗ್ ಕಾರ್ಯಾಗಾರಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಕಾಫಿಯ ಗುಣಮಟ್ಟ, ವೈವಿಧ್ಯತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಪರಿಚಯಿಸಲು ಈ ಉತ್ಸವ ವೇದಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.