
ಕೋಲಾರ | ರಾಗಿ ಬಿತ್ತನೆಗೆ 'ಬರ'ಸಿಡಿಲು: ರೈತರಿಗೆ ಸಂಕಟ
ಕೋಲಾರ: ಮುಂಗಾರು ಮಳೆ ವೈಫಲ್ಯದಿಂದಾಗಿ ಜಿಲ್ಲೆಯಲ್ಲಿ ರಾಗಿ ಬಿತ್ತನೆಗೆ ಭಾರಿ ಹಿನ್ನಡೆಯಾಗಿದ್ದು, ಈ ಬಾರಿ ರಾಗಿ ಉತ್ಪಾದನೆ ಕುಂಠಿತಗೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಇದು ರೈತರ ತಲೆಬಿಸಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಜಿಲ್ಲೆಯ ಆರು ತಾಲ್ಲೂಕುಗಳಿಂದ ಸೇರಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 61 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಬಿತ್ತನೆ ಅವಧಿಯೇ ಮುಗಿಯುತ್ತಾ ಬಂದಿದ್ದು ಕೇವಲ 6,582 ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿದೆ. ಅಂದರೆ ಕೇವಲ ಶೇ 10.79ರಷ್ಟು ಬಿತ್ತನೆ ನಡೆದಿದೆ. ಇಷ್ಟರಲ್ಲೂ ಫಸಲು ಕೈಗೆಟುಕುತ್ತದೆ ಎಂಬ ನಂಬಿಕೆ ಇಲ್ಲ. ಏಕೆಂದರೆ ಮೊಳಕೆ ಒಡೆದ ಸಾಲುಗಳು ಸುಡುಬಿಸಿಲಿಗೆ ಕಂಗೆಟ್ಟು ಒಣಗಿ ಹೋಗುತ್ತಿವೆ. ಇದರಿಂದ ರಾಗಿ ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟಾಗಿ ಜೀವನ ನಿರ್ವಹಣೆಯೂ ಕಷ್ಟವಾಗುವ ಸಂಭವವಿದೆ.
‘ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಗಿ ಸೇರಿದಂತೆ ವಿವಿಧ ಆಹಾರ ಧಾನ್ಯಗಳ ಕೊರತೆ ಉಂಟಾಗಲಿದೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಆಗಲಿದೆ’ ಎನ್ನುತ್ತಾರೆ ರೈತರು.
ಈ ವೇಳೆಗೆ 45 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ರಾಗಿ ಬಿತ್ತನೆ ಆಗಿರಬೇಕಿತ್ತು. ಜೂನ್, ಜುಲೈ ಹಾಗೂ ಈ ತಿಂಗಳು ಇಲ್ಲಿಯವರೆಗೆ ಮಳೆ ಕೊರತೆ ಉಂಟಾಗಿದ್ದು, ಬಿತ್ತನೆಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಮಳೆ ಬಂದರೆ ಜಿಲ್ಲೆಯಲ್ಲಿ ಸೆಪ್ಟೆಂಬರ್ ಮಧ್ಯಭಾಗದವರೆಗೆ ಬಿತ್ತನೆಗೆ ಅವಕಾಶವಿದೆ. ಆದರೆ, ಸದ್ಯದ ಬರ ಪರಿಸ್ಥಿತಿ ಗಮನಿಸಿದರೆ ರೈತರು ಬಿತ್ತನೆ ಸಾಹಸ ಮಾಡುವ ಸಾಧ್ಯತೆ ಕಡಿಮೆ. ಹೀಗಾಗಿ, ರಾಗಿ ಬೆಳೆ ಕಥೆ ಮುಗಿದಂತೆ. ನಷ್ಟದ ಆತಂಕದಿಂದ ಈಗಾಗಲೇ ರೈತರು ಈ ಬಾರಿ ದಾಖಲೆ ಪ್ರಮಾಣದಲ್ಲಿ ರಾಗಿ ವಿಮೆ ಮಾಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಆ.19ರವರೆಗೆ 102 ಮಿ.ಮೀ. ಮಳೆ ಆಗಿದೆ. ಈ ಸಂದರ್ಭದಲ್ಲಿ ವಾಡಿಕೆ ಮಳೆ 198 ಮಿ.ಮೀ ಆಗಬೇಕಿತ್ತು. ಶೇ 48 ರಷ್ಟು ಕೊರತೆ ಆಗಿದೆ. ಅದರಲ್ಲೂ ಜುಲೈನಲ್ಲಿ ಶೇ 87ರಷ್ಟು ಮಳೆ ಕೊರತೆ ಉಂಟಾಗಿತ್ತು.
ಕೋಲಾರ ತಾಲ್ಲೂಕಿನಲ್ಲೇ 13,300 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ ಈವರೆಗೆ ಕೇವಲ 995 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ 11,017 ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ ಪೈಕಿ 2,239 ಹೆಕ್ಟೇರ್‌ಗಳಲ್ಲಿ ಬಿತ್ತನೆ ಕಾರ್ಯ ನಡೆದಿದೆ.
ರಾಜ್ಯದಲ್ಲಿ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಕೋಲಾರ ಮುಂಚೂಣಿಯಲ್ಲಿದೆ. ಈ ಜಿಲ್ಲೆಯ ಪ್ರಮುಖ ಆಹಾರವೇ ರಾಗಿ. ಹಲವರ ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಮುದ್ದೆ ಊಟ ಶುರುವಾಗುತ್ತದೆ. ರೈತರು, ಕಾರ್ಮಿಕರು, ಉದ್ಯೋಗಿಗಳು ತಿಂಡಿಗಿಂತ ಮುದ್ದೆ ಊಟವನ್ನೇ ಇಷ್ಟಪಡುತ್ತಾರೆ.
ಕೋಲಾರವಲ್ಲದೇ; ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ.ರಾಜ್ಯದಲ್ಲಿ ಸುಮಾರು 8.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಸುಮಾರು 11.27 ಲಕ್ಷ ಟನ್‌ಗಳಷ್ಟು ರಾಗಿ ಬೆಳೆಯಲಾಗುತ್ತದೆ.
ಈ ವರ್ಷ ರಾಗಿ ಬಿತ್ತನೆ ಪ್ರಮಾಣ ಕಡಿಮೆ ಆಗಿರುವ ಕಾರಣ ಉತ್ಪಾದನೆಯಲ್ಲೂ ಕುಂಠಿತವಾಗಲಿದೆ. ಮುಂದಿನ ದಿನಗಳಲ್ಲಿ ರಾಗಿಗೆ ಬೇಡಿಕೆ ಹೆಚ್ಚಲಿದ್ದು, ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ.
‘ಇಷ್ಟು ಹೊತ್ತಿಗೆ ರಾಗಿ ಪೈರು ಎರಡು ಅಡಿ ಎತ್ತರ ಬೆಳೆದಿರಬೇಕಿತ್ತು. ಆದರೆ, ಒಮ್ಮೆ ಬಿತ್ತನೆ ಮಾಡಿದ್ದು, ಮಳೆ ಇಲ್ಲದೆ ಮೊಳಕೆಯಲ್ಲಿಯೇ ಒಣಗಿತು. ಸ್ವಲ್ಪ ಮಳೆ ಬಂತೆಂದು ಮತ್ತೆ ಬಿತ್ತನೆ ಮಾಡಿದೆವು. ಇದೇ ರೀತಿ ಮಳೆ ಕೈಕೊಟ್ಟರೆ ಮುಂದೆ ತುಂಬಾ ಕಷ್ಟವಾಗಲಿದೆ. ರಾಗಿ ಬಿತ್ತನೆ ಅವಧಿ ಬಹುತೇಕ ಮುಗಿದಿದ್ದು, ನಮಗೆ ಮುದ್ದೆ ಸಿಗಲ್ಲ; ಜಾನುವಾರುಗಳಿಗೆ ಮೇವು ಸಿಗಲ್ಲ’ ಎಂದು ರಾಗಿ ಬೆಳೆಗಾರರು ಸಂಕಷ್ಟ ಹೇಳಿಕೊಂಡರು.
ಜಿಲ್ಲೆಯಲ್ಲಿ ರಾಗಿ ಬಿತ್ತನೆ ಗುರಿ, ವಿಸ್ತೀರ್ಣ (ಹೆಕ್ಟೇರ್‌ಗಳಲ್ಲಿ)
ತಾಲ್ಲೂಕು;ಬಿತ್ತನೆ ಗುರಿ;ಬಿತ್ತನೆ ಪ್ರದೇಶ
ಬಂಗಾರಪೇಟೆ;11,017;,239
ಶ್ರೀನಿವಾಸಪುರ;9,005;828
ಮಳೆ ಇಲ್ಲದೆ ಬಿತ್ತಿದರೆ ಮೊಳಕೆ ವೈಫಲ್ಯ
ರಾಗಿ ಬಿತ್ತನೆಗೆ ಸಮರ್ಪಕ ಮಣ್ಣಿನ ತೇವಾಂಶ ಅಗತ್ಯವಿದೆ. ಆದ್ದರಿಂದ 50ರಿಂದ 75 ಮಿ.ಮೀ. ಪರಿಣಾಮಕಾರಿ ಮಳೆ ಬಂದ ನಂತರವೇ ಬಿತ್ತನೆ ಕೈಗೊಳ್ಳುವುದು ಸೂಕ್ತ. ಇಲ್ಲದಿದ್ದರೆ ಮೊಳಕೆಯಲ್ಲೇ ವೈಫಲ್ಯ, ಸಸಿಗಳ ಒಣಗುವಿಕೆ ಹಾಗೂ ಮರುಬಿತ್ತನೆಯ ಪರಿಸ್ಥಿತಿ ಉಂಟಾಗುತ್ತದೆ. ಮಳೆ ಇನ್ನಷ್ಟು ವಿಳಂಬವಾದಲ್ಲಿ ಅಲ್ಪಾವಧಿ ಹಾಗೂ ಬರ ಸಹಿಷ್ಣು ತಳಿ ಆಯ್ಕೆ ಮಾಡಿಕೊಂಡು ಕೃಷಿ ವಿಜ್ಞಾನ ಕೇಂದ್ರವು ಶಿಫಾರಸು ಮಾಡಿರುವ ಪರ್ಯಾಯ ಬೆಳೆ ಯೋಜನೆ ಅನುಸರಿಸುವುದು ಒಳಿತು
- ಶಿವಾನಂದ ಹೊಂಗಲ್, ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-18-630949065