
ಶಿರ್ವ: ಸಂಪೂರ್ಣ ಹದಗೆಟ್ಟ ಕಟಪಾಡಿ– ಮಟ್ಟು ಸಂಪರ್ಕ ರಸ್ತೆ
ಶಿರ್ವ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಟಪಾಡಿ ಗ್ರಾಮ ಪಂಚಾಯಿತಿ ಮತ್ತು ಕೋಟೆ ಗ್ರಾಮ ಪಂಚಾಯಿತಿಯನ್ನು ಜೋಡಿಸುವ ಪ್ರಮುಖ ರಸ್ತೆಯಾಗಿರುವ ಕಟಪಾಡಿ– ಮಟ್ಟು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಸುಮಾರು ಎರಡು ಕಿ.ಮೀ. ಮೀನುಗಾರಿಕಾ ರಸ್ತೆಯಲ್ಲಿ ಗುಂಡಿಗಳು ತುಂಬಿದ್ದು, ಮಳೆಗಾಲದಲ್ಲಿ ಈ ರಸ್ತೆಗೆ ಮತ್ತಷ್ಟು ಹಾನಿ ಉಂಟಾಗಿದೆ.
ಕಟಪಾಡಿ ಪೇಟೆಯಿಂದ ಮಟ್ಟು ಗ್ರಾಮ ಹಾಗೂ ಮಟ್ಟು ಬೀಚ್‌ಗೆ ಮತ್ತು ಶಿರ್ವಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇಂದು ಹೊಂಡಮಯವಾಗಿ ಮಾರ್ಪಟ್ಟಿದೆ. ಈ ರಸ್ತೆಯ ಹಲವು ಭಾಗಗಳಲ್ಲಿ ಡಾಂಬರ್ ಸಂಪೂರ್ಣ ಕಿತ್ತುಹೋಗಿದ್ದು, ವಾಹನ ಸವಾರರು ಜೀವ ಕ್ಯೆಯಲ್ಲಿ ಹಿಡಿದು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಟಪಾಡಿ ಗ್ರಾಮ ಪಂಚಾಯಿತಿ ಹಾಗೂ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಸಾರ್ವಜನಿಕರಿಗೆ ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ನಿತ್ಯ ಶಾಲಾ– ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಮೀನುಗಾರರು, ಗ್ರಾಮಸ್ಥರು ಹಾಗೂ ಪ್ರವಾಸಿಗರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆಯು ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಮಳೆ ಬಂದರೆ ಹೊಂಡವೇ ಕಾಣದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಳೆ ಬಂದಾಗ ಈ ಹೊಂಡಗಳಲ್ಲಿ ನೀರು ತುಂಬಿ ರಸ್ತೆಯ ಸಮತಟ್ಟಾದ ಭಾಗ ಮತ್ತು ಹೊಂಡಗಳ ನಡುವಿನ ವ್ಯತ್ಯಾಸವೇ ಕಾಣದಂತಾಗುತ್ತದೆ. ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರು ಅಪಘಾತದ ಭೀತಿಯಲ್ಲೇ ಸಂಚರಿಸುವಂತಾಗಿದೆ.
ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲೂ ಇದೇ ರಸ್ತೆ ಬಳಸಬೇಕಾಗಿರುವುದರಿಂದ ಪೋಷಕರ ಆತಂಕ ಹೆಚ್ಚಾಗಿದೆ. ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೂ ರಸ್ತೆ ದುಸ್ಥಿತಿ ದೊಡ್ಡ ಸವಾಲಾಗಿದೆ. ಈ ರಸ್ತೆ ಮೀನುಗಾರಿಕಾ ಇಲಾಖೆಗೆ ಸಂಬಂಧಿಸಿದ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಕರಾವಳಿ ಭಾಗದ ಜನಜೀವನಕ್ಕೆ ಮಹತ್ವದ್ದಾಗಿದೆ.
ಈ ರಸ್ತೆ ಕಟಪಾಡಿಯಿಂದ ಮಟ್ಟು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಮಟ್ಟು ಸೇತುವೆ ಮೂಲಕ ಮಟ್ಟು ಬೀಚ್‌ಗೆ ತಲುಪಲು ಅನುಕೂಲವಾಗುತ್ತದೆ.
ಮಟ್ಟು ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ಈ ರಸ್ತೆಯ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಇದೇ ಮಾರ್ಗದ ಮೂಲಕ ಕಾಪು, ಮಲ್ಪೆ ಸೇರಿದಂತೆ ಕರಾವಳಿಯ ವಿವಿಧ ಪ್ರವಾಸಿ ತಾಣಗಳಿಗೂ ಸಂಪರ್ಕ ಕಲ್ಪಿಸಲಾಗಿದೆ.
ಕಟಪಾಡಿ ಪೇಟೆ ಬೆಟ್ಟುವಿನಿಂದ ಮುಂದೆ ಸಾಗಿದಂತೆ ಪಂಚಮಿ ಬಾರ್ ಬಳಿಯ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು, ಕೆನರಾ ಬ್ಯಾಂಕ್ ಸಮೀಪ ಹಾಗೂ ಮಟ್ಟು ಭಾಗದಲ್ಲಿಯೂ ರಸ್ತೆ ತನ್ನ ನಿಜಸ್ವರೂಪವನ್ನು ಕಳೆದುಕೊಂಡಿದೆ. ರಸ್ತೆ ಕೆಲವೆಡೆ ಕಿತ್ತುಹೋಗಿ, ಉಳಿದಿರುವುದು ಬರೀ ಜಲ್ಲಿ ಮಾತ್ರ.
ಪ್ರತಿ ಮಳೆಗಾಲದಲ್ಲೂ ರಸ್ತೆ ಹದಗೆಡುವ ಸಮಸ್ಯೆ ಎದುರಾಗುತ್ತಿದ್ದರೂ, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮರ್ಪಕ ಕಾಮಗಾರಿ ನಡೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ. ಈ ಬಾರಿ ರಸ್ತೆಯ ತೇಪೆ ಕಾರ್ಯವಾಗಲಿ, ತುರ್ತು ದುರಸ್ತಿಯಾಗಲಿ ಸಮರ್ಪಕವಾಗಿ ನಡೆದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
‘ಶೀಘ್ರ ರಸ್ತೆ ದುರಸ್ತಿ ಮಾಡಿ’
‘ನಾನು ಪ್ರತಿದಿನ ಇದೇ ರಸ್ತೆಯ ಮೂಲಕ ಶಾಲೆಗೆ ಸಂಚರಿಸುತ್ತೇನೆ. ಮಳೆ ಬಂದಾಗ ರಸ್ತೆಯ ಹೊಂಡಗಳು ಕಾಣುವುದೇ ಇಲ್ಲ. ವಿದ್ಯಾರ್ಥಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತುಂಬಾ ಅಪಾಯಕರಿಯಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರವಾಗಿ ಈ ರಸ್ತೆಯನ್ನು ದುರಸ್ತಿ ಮಾಡಬೇಕು’ ಎಂದು ವಿದ್ಯಾರ್ಥಿನಿ ಸೃಷ್ಟಿ ಕಟಪಾಡಿ ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-28-217938980