
NCERT 6ನೇ ತರಗತಿ ಸಾಮಾನ್ಯ ಜ್ಞಾನ ಪುಸ್ತಕದಲ್ಲಿ ಜಾರ್ಜಿಯಾ ಮೆಲೊನಿ ಪಾಠವಿದೆಯೇ?
ಬೆಂಗಳೂರು: 6ನೇ ತರಗತಿಯ ಸಾಮಾನ್ಯ ಜ್ಞಾನ ಪಠ್ಯದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಕುರಿತ ಪಾಠವನ್ನು ಸೇರಿಸಲಾಗಿದೆ ಎಂಬ ವಿಡಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸ್ಮೃತಿ ಶರ್ಮಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮೊದಲು ಮಾಹಿತಿ ನೀಡಿದ್ದರು. ಮೆಲೊನಿ ಕುರಿತು ಮಾಹಿತಿ ಇರುವ ಪುಸ್ತಕದ ಪುಟವನ್ನು ತೋರಿಸಿರುವ ಅವರು 6ನೇ ತರಗತಿ ಸಾಮಾನ್ಯ ಜ್ಞಾನ ಪುಸ್ತಕದಲ್ಲಿ ಮೆಲೊನಿ ಪಾಠ ಸೇರಿಸಲಾಗಿದೆ ಎಂದು ಹೇಳಿದ್ದರು. ಆದರೆ, ಅದು ಎನ್‌ಸಿಇಆರ್‌ಟಿ ಪ್ರಕಟಿತ ಪುಸ್ತಕವೇ? ಅಥವಾ ಖಾಸಗಿ ಸಂಸ್ಥೆ ಪ್ರಕಟಿಸಿದ ಪುಸ್ತಕವೇ? ಎಂಬ ಬಗ್ಗೆ ಅವರು ಮಾಹಿತಿ ನೀಡಿರಲಿಲ್ಲ.
ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಶರವೇಗದಲ್ಲಿ ಹರಡಿದ್ದು, ಎನ್‌ಸಿಇಆರ್‌ಟಿಯು ಮೆಲೊನಿ ಬಗ್ಗೆ ಪಾಠವೊಂದನ್ನು ಸೇರಿಸಿದೆ ಎಂದು ಸುದ್ದಿಯಾಗಿತ್ತು. ಇದು ರಾಜಕೀಯ ಚರ್ಚೆಗೂ ಕಾರಣವಾಗಿತ್ತು.
ಆರನೇ ತರಗತಿ ಸಾಮಾನ್ಯ ಜ್ಞಾನ ಪುಸ್ತಕದಲ್ಲಿ ಮೆಲೊನಿ ಅವರ ಕುರಿತು ಪಾಠವಿರುವುದು ನಿಜವಾದರೂ ಅದನ್ನು ಎನ್‌ಸಿಇಆರ್‌ಟಿ ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪುಸ್ತಕವನ್ನು ಖಾಸಗಿ ಪ್ರಕಾಶಿತ ಸಂಸ್ಥೆಯೊಂದು ಪ್ರಕಟಿಸಿದ್ದು, ಆದರೆ ಅವರ ಗುರುತು ಪತ್ತೆಯಾಗಿಲ್ಲ.
6ನೇ ತರಗತಿಯ ಸಾಮಾನ್ಯ ಜ್ಞಾನ ಪುಸ್ತಕದಲ್ಲಿ ಅವರ ಉಲ್ಲೇಖವು ಯಾವುದೇ ರಾಜಕೀಯ ಪ್ರಚಾರ ಅಥವಾ ವಿಶೇಷ ಪಾಠದ ಭಾಗವಾಗಿಲ್ಲ. ಬದಲಾಗಿ, ವಿಶ್ವದ ಪ್ರಮುಖ ವ್ಯಕ್ತಿತ್ವಗಳು, ದೇಶಗಳು ಮತ್ತು ಸಮಕಾಲೀನ ಘಟನೆಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ನೀಡುವ ಉದ್ದೇಶದಿಂದ ಸೇರಿಸಲಾಗಿದೆ ಎಂದು ಶಾಲಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
2022ರ ಅಕ್ಟೋಬರ್‌ನಲ್ಲಿ ಇಟಲಿಯ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಜಾರ್ಜಿಯಾ ಮೆಲೊನಿ ಅವರು ಅಧಿಕಾರ ಸ್ವೀಕರಿಸಿದ್ದರು. ಇಟಲಿಯ ರಾಜಕೀಯ ಇತಿಹಾಸದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿತ್ತು. ಈ ಕಾರಣದಿಂದಲೇ ಅವರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು.