
ಕೊಡಗು | ಕಾಡಾನೆ ದಾಳಿ: ಏರುತ್ತಲೇ ಇದೆ ಸಾವಿನ ಸಂಖ್ಯೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತಿದೆ. ಸೋಮವಾರ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ತೋಟದಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕ ಗೋಪಾಲ್ ಬೌರಿ (34) ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕ ಜದವಿ ಬವೂರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಈ ವರ್ಷ 10ಕ್ಕೆ ಏರಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ 8 ದಿನಗಳಲ್ಲಿ ಇಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಂತಾಗಿದೆ. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವನ್ಯಜೀವಿ ಹಾಗೂ ಮಾನವ ಸಂಘರ್ಷದ ಕುರಿತು ವಿಧಾನಸಭೆಯ ಸದನದಲ್ಲಿ ಶೂನ್ಯ ವೆಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಇದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ಮೃತಪಡುವವರಲ್ಲಿ ಬಹುತೇಕ ತೋಟದ ಕಾರ್ಮಿಕರೇ ಆಗಿದ್ದು, ಕಾರ್ಮಿಕರು ತೋಟಗಳಲ್ಲಿ ಭಯದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವು ತೋಟಗಳಲ್ಲಿ ಎಷ್ಟೇ ಕೂಲಿ ಕೊಟ್ಟರೂ ಕೆಲಸ ಮಾಡಲು ಕಾರ್ಮಿಕರು ಒಪ್ಪದಂತಹ ಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕರು ಮತ್ತು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಆತಂಕಕ್ಕೆ ಎಡೆ ಮಾಡಿದೆ. ಮೃತಪಟ್ಟ 10 ಮಂದಿಯಲ್ಲಿ ನಾಲ್ವರು ಮಹಿಳೆಯರೇ ಆಗಿದ್ದಾರೆ. ಉಳಿದವರಲ್ಲಿ ಬಹುತೇಕರು ಕಾರ್ಮಿಕರಾಗಿದ್ದಾರೆ.
ಜನವರಿ 1ರಂದೇ ಶನಿವಾರಸಂತೆ ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗಯ್ಯನಪುರದಲ್ಲಿ ಪೊನ್ನಪ್ಪ (61) ಮೃತಪಟ್ಟರು. ಆ ಬಳಿಕ ಕಾಡಾನೆ ದಾಳಿಗೆ ಸಿಲುಕುತ್ತಿರುವವ ಸಂಖ್ಯೆ ಹೆಚ್ಚುತ್ತಲೇ ಇದೆ.
ಮಾರ್ಚ್‌ನಲ್ಲಿ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಪಿಯು ವಿದ್ಯಾರ್ಥಿನಿ ಪೂಜ್ಯಾ (17) ಹಾಗೂ ಕುಶಾಲನಗರ ತಾಲ್ಲೂಕಿನ ವಾಲ್ಲೂರು ಗ್ರಾಮದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಲಜಾಕ್ಷಿ (55) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಮೇ 18ರಂದು ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಎರಡು ಸಾಕಾನೆಗಳ ನಡುವಿನ ಕಾಳಗದಲ್ಲಿ ಸಿಲುಕಿ ಮೃತಪಟ್ಟಿದ್ದರು. ನಂತರ ಜೂನ್ 9ರಂದು ತಿತಿಮತಿ ಸಮೀಪ ತೋಟದಲ್ಲಿದ್ದ ಕಾಡಾನೆ ದಾಳಿಗೆ ಸಿಲುಕಿ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ಸಂಧ್ಯಾ ಅಚ್ಚಯ್ಯ ಮೃತಪಟ್ಟರು.
ಈ ಎಲ್ಲ ಘಟನೆಗಳು ಜಿಲ್ಲೆಯ ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಕಾಡಾನೆ ಹಾವಳಿ ತಡೆಗೆ ಒತ್ತಾಯಿಸಿದ್ದಾರೆ.
3 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಬಂದಿದ್ದರು!
ಸಿದ್ದಾಪುರ: ಕಾಡಾನೆ ದಾಳಿಗೆ ಸಿಲುಕಿ ಸೋಮವಾರ ಮೃತಪಟ್ಟ ಪಶ್ಚಿಮ ಬಂಗಾಳದ ನಿವಾಸಿ ಕಾರ್ಮಿಕ ಗೋಪಾಲ್ ಬವೂರಿ (34) ಕುಟುಂಬ ಮೂರು ತಿಂಗಳ ಹಿಂದೆಯಷ್ಟೇ ತೋಟದ ಕೆಲಸಕ್ಕೆ ಬಂದಿತ್ತು.
ಪಶ್ಚಿಮ ಬಂಗಾಳದಿಂದ ಕೆಲಸಕ್ಕಾಗಿ ಜಿಲ್ಲೆಗೆ ಬಂದು ಪತಿಯನ್ನು ಕಳೆದುಕೊಂಡ ಪತ್ನಿಯ ರೋದನ ಮುಗಿಲು ಮುಟ್ಟಿತ್ತು. ಗೋಪಾಲ್ ಬವೂರಿ ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಘಟನೆ ವಿವರ: ಘಟ್ಟದಳ ಸಮೀಪದ ಶಿಲ್ಪಿ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆಯೊಂದು ಏಕಾಏಕಿ ಕಾರ್ಮಿಕರ ಮೇಲೆ ದಾಳಿಗೆ ಮುಂದಾಗಿದ್ದು, ಕಾರ್ಮಿಕರನ್ನು ಅಟ್ಟಾಡಿಸಿಕೊಂಡು ಓಡಿಸಿದೆ. ಗೋಪಾಲ್ ಬವೂರಿ ಅವರನ್ನು ಅಟ್ಟಾಡಿಸಿ ಓಡಿಸಿದ್ದು, ಬಳಿಕ ಕಾಲಿನಿಂದ ತುಳಿದಿದೆ. ಇದಾದ ಬಳಿಕ ಕಾಡಾನೆ ಕಾರ್ಮಿಕ ಜದವಿ ಬವೂರಿ ಮೇಲೆ ದಾಳಿ ನಡೆಸಿದೆ. ಅವರ ಸೊಂಟ ಹಾಗೂ ಕೈಗೆ ಗಾಯವಾಗಿದ್ದು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಗೋಪಾಲ್ ಬವೂರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಿರಾಜಪೇಟೆ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೀತಾ ಚವಾಣ್, ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದರು.
ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಸಂಚಾರ ತಡೆದು ಪ್ರತಿಭಟನೆ
ಸಿದ್ದಾಪುರ: ಕಾಡಾನೆ ದಾಳಿಯಿಂದ ಕಾರ್ಮಿಕ ಮೃತಪಟ್ಟ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸಿದ ಕಾರ್ಮಿಕರು ಇಲಾಖೆ ಹಾಗೂ ಸಂಸ್ಥೆ ಕಾಡಾನೆಯನ್ನು ವೀಕ್ಷಿಸಲು ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಸಿದ್ದಾಪುರ ಠಾಣಾಧಿಕಾರಿ ಕಾರ್ಮಿಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಬಳಿಕ ಸಿದ್ದಾಪುರದಲ್ಲಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ನಡೆಯಿತು. ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾರ್ಮಿಕ ಮುಖಂಡ ಪಿ.ಆರ್ ಭರತ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಇದ್ದು, ಕಾರ್ಮಿಕರು ಭಯದಿಂದ ಕೆಲಸ ಮಾಡುವ ಸ್ಥಿತಿ ಇದೆ. ಇತ್ತೀಚೆಗೆ ಕಣ್ಣಂಗಾಲ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾಗಿದ್ದು, ಘಟನೆ ಮಾಸುವ ಮುನ್ನವೇ ಮೊತ್ತೊಬ್ಬರು ಬಲಿಯಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಮಹದೇವ್, ಕೆಲಸದ ವೇಳೆ ಕಾರ್ಮಿಕರ ರಕ್ಷಣೆಗಾಗಿ ಸಿಬ್ಬಂದಿಯನ್ನು ನೇಮಿಸಬೇಕು. ಮೃತ ಕಾರ್ಮಿಕನ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಎಲ್ಲಾ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಕಾಡಾನೆ ಹಾವಳಿ ತಡೆಗೆ ಒತ್ತಾಯಿಸಿ ಶೀಘ್ರದಲ್ಲಿ ಕೊಡಗು ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಠಾಣಾಧಿಕಾರಿ ಮನವೊಲಿಕೆ ಬಳಿಕ ಪ್ರತಿಭಟನೆ ಕೈ ಬಿಟ್ಟರು.
ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪನ್, ಎಚ್.ಬಿ ರಮೇಶ್, ಅನಿಲ್ ಎನ್.ಕೆ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-51-945896016