
ಜ್ಞಾನದೆಡೆಗೆ ಒಯ್ದ ತತ್ವಜ್ಞಾನಿ ನಾರಾಯಣ ಗುರು: ಡಿ.ಕೆ. ಶಿವಕುಮಾರ್
ಬೆಂಗಳೂರು: ನಾರಾಯಣ ಗುರುಗಳು ಜನರನ್ನು ಬೆಳಕಿನ ಕಡೆಗೆ, ಜ್ಞಾನದ ಕಡೆಗೆ, ವಿದ್ಯೆಯ ಕಡೆಗೆ ಒಯ್ದ ತತ್ವಜ್ಞಾನಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣ ಗುರುಗಳು ಸಾರಿದ್ದರು. ಅದೇ ಮಾದರಿಯಲ್ಲಿ ನಮ್ಮ ಸರ್ಕಾರ ಕೂಡ ಕಾರ್ಯನಿರ್ವಹಿಸುತ್ತಿದೆ. ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಸಹಿತ ಎಲ್ಲ ಯೋಜನೆಗಳು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಲ್ಲ. ಎಲ್ಲ ಸಮುದಾಯದ ಬಡವರ ಕಲ್ಯಾಣಕ್ಕಾಗಿ ರೂಪಿಸಿದ ಕಾರ್ಯಕ್ರಮಗಳು’ ಎಂದು ವಿವರಿಸಿದರು.
‘ಬಂಗಾರಪ್ಪನವರ ಕಾಲದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ರೂಪಿಸಿದರು. ಈಗಲೂ ಯೋಜನೆ ಮುಂದುವರಿದಿದ್ದು, ಅದಕ್ಕಾಗಿ ಸರ್ಕಾರ ವರ್ಷಕ್ಕೆ ₹ 20 ಸಾವಿರ ಕೋಟಿ ವ್ಯಯ ಮಾಡುತ್ತಿದೆ. ಬಂಗಾರಪ್ಪ ಅವರು ‘ಆರಾಧನಾ’ ಸ್ಕೀಂ ತರುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಎಲ್ಲ ಸಣ್ಣ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಿದ್ದರು’ ಎಂದು ಹೇಳಿದರು.
‘ಒಂದು ಕಾಲದಲ್ಲಿ ಬಿಲ್ಲವ–ಈಡಿಗ ಸಮುದಾಯದಿಂದ 7–8 ಸಂಸದರು ಇರುತ್ತಿದ್ದರು. ಈಗ ಕಡಿಮೆ ಯಾಕಾಯಿತು ಎಂದು ಯೋಚಿಸಬೇಕು. ಇದು ನಿಮ್ಮ ಸರ್ಕಾರ. ನಾವು ನಿಮ್ಮೊಂದಿಗೆ ಇರುತ್ತೇವೆ. ನೀವು ನಮ್ಮೊಂದಿಗೆ ಇರಬೇಕು’ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ‘ಹುಟ್ಟಿನಿಂದ ಯಾರೂ ದೊಡ್ಡವರಲ್ಲ. ಸಾಧನೆಯಿಂದ ಮಾತ್ರ ದೊಡ್ಡವರಾಗುತ್ತಾರೆ. ಮನುಷ್ಯ ಮನುಷ್ಯನನ್ನು ಗೌರವಿಸಬೇಕು. ಸರ್ವಪ್ರಾಣಿಗಳಲ್ಲೂ ದಯೆ ತೋರಬೇಕು ಎಂಬ ಶ್ರೇಷ್ಠ ಸಿದ್ಧಾಂತವನ್ನು ಬೋಧಿಸಿ, ಅದರಂತೆ ನಾರಾಯಣ ಗುರುಗಳು ಬದುಕಿದ್ದರು’ ಎಂದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, ‘ಜಯಂತಿ ಕಾರ್ಯಕ್ರಮ ಔಪಾಚಾರಿಕವಾಗಿ ನಡೆದರೆ ಸಾಲದು. ನಾರಾಯಣ ಗುರುಗಳ ಚಿಂತನೆಯನ್ನು ಪಸರಿಸಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವರಿಗೆ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಸಂದರ್ಭದಲ್ಲಿ ಕೇರಳದಿಂದ ಬಂದು ಮಂಗಳೂರಿನಲ್ಲಿ ದೇವಸ್ಥಾನ ಕಟ್ಟಿದ್ದರು. ಈಗ ಅವರ ಶಿಷ್ಯರೆಂದು ಹೇಳಿಕೊಳ್ಳುವವರು ಗುರುಗಳ ಸಿದ್ಧಾಂತಕ್ಕೆ ವಿರುದ್ಧವಾಗಿರುವವರೊಂದಿಗೆ ಸೇರಿ ಜೈಲು ಪಾಲಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಯೋಗೀಶ್ ಕೈರೋಡಿ ಅವರು ಗುರು ಸಂದೇಶ ನೀಡಿದರು.
‘ ಪ್ರಬಲರ ತ್ಯಾಗಕ್ಕೆ ಮಾತ್ರ ಬೆಲೆ’
‘ಕೋಮುದ್ವೇಷದ ಸಂಘರ್ಷದಲ್ಲಿ ಕರ್ನಾಟಕದಲ್ಲಿ ಬಿಲ್ಲವ/ಈಡಿಗ ಸಮುದಾಯದ 17 ಮಂದಿ, ಕೇರಳದಲ್ಲಿ 234 ಮಂದಿ ಜೀವ ಕಳೆದುಕೊಂಡಿದ್ದಾರೆ. ಆ ಜೀವಗಳಿಗೆ ಬೆಲೆ ಸಿಕ್ಕಿಲ್ಲ. ಆದರೆ, ಕೇರಳದಲ್ಲಿ ಮೇಲ್ಜಾತಿಯ ಒಬ್ಬರೇ ಒಬ್ಬರು ಈ ಸಂಘರ್ಷದಲ್ಲಿ ಕಾಲು ಕಳೆದುಕೊಂಡರು. ಅವರನ್ನು ಈಗ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿದೆ. ನಾನು ರಾಜಕೀಯ ಮಾತನಾಡುತ್ತಿಲ್ಲ. ಮೇಲ್ಜಾತಿಯವರ ತ್ಯಾಗಕ್ಕೆ ಮಾತ್ರ ಬೆಲೆ ಎಂಬುದನ್ನಷ್ಟೇ ಹೇಳುತ್ತಿದ್ದೇನೆ’ ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-51-1521675989