
ಕೂಡ್ಲಿಗಿ, ಕೊಟ್ಟೂರು ಬರಪೀಡಿತ ತಾಲ್ಲೂಕಲ್ಲ ಎಂದು ಘೋಷಣೆ: ರೈತರ ಆಕ್ಷೇಪ
ಹೊಸಪೇಟೆ (ವಿಜಯನಗರ): ರಾಜ್ಯದ 89 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರ, ವಿಜಯನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಅದರಲ್ಲಿ ಸೇರಿಸಿದೆ. ಆದರೆ ಕೂಡ್ಲಿಗಿ ಮತ್ತು ಕೊಟ್ಟೂರು ತಾಲ್ಲೂಕುಗಳನ್ನು ಸೇರಿಸದೆ ಇರುವುದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಜೂನ್ 1ರಿಂದ ಆಗಸ್ಟ್ 12ರವರೆಗಿನ ಬರಪರಿಸ್ಥಿತಿ ಕುರಿತಂತೆ ಸಮಗ್ರ ಬರ ವಿಶ್ಲೇಷಣೆ ನಡೆಸಿದ ಮೇರೆಗೆ 2020ರ ಬರ ನಿರ್ವಹಣೆ ಮಾರ್ಗಸೂಚಿಯಂತೆ ಈ ಘೋಷಣೆ ಮಾಡಲಾಗಿದ್ದು, ಮೂರು ಹಂತಗಳಲ್ಲಿ ಬರ ಪರಿಸ್ಥಿತಿ ಅಂದಾಜಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಡೀ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮುಂಗಾರು ಮಳೆ ಕೊರತೆ ಎದುರಿಸಿದ ಜಿಲ್ಲೆ ವಿಜಯನಗರ. ಹೀಗಾಗಿ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳೂ ಮೊದಲ ಪಟ್ಟಿಯಲ್ಲೇ ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆಗೊಳ್ಳುತ್ತವೆ ಎಂಬ ರೈತರ ನಿರೀಕ್ಷೆ ಹುಸಿಯಾಗಿದ್ದು, ಕೂಡ್ಲಿಗಿ ಮತ್ತು ಕೊಟ್ಟೂರು ತಾಲ್ಲೂಕುಗಳು ‘ಸಾಧಾರಣ ಬರಪೀಡಿತ ತಾಲ್ಲೂಕು’ ಪಟ್ಟಿಯಲ್ಲಿ ಸಹ ಇಲ್ಲದಿರುವುದರಿಂದ ರೈತರು ಇನ್ನಷ್ಟು ಬೇಸರಗೊಡಿದ್ದಾರೆ.
‘ಈ ಎರಡೂ ತಾಲ್ಲೂಕುಗಳು ಬಹುತೇಕ ಮಳೆಯನ್ನೇ ಆಶ್ರಯಿಸಿರುವ ತಾಲ್ಲೂಕುಗಳು. ಕೆರೆಗಳು ಸಹ ಈ ಬಾರಿ ಮಳೆ ಇಲ್ಲದೆ ಬತ್ತಿ ಹೋಗಿವೆ, ಅಂತರ್ಜಲ ಬರಿದಾಗಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯನ್ನಷ್ಟೇ ಲೆಕ್ಕ ಹಾಕಿ ತಾಲ್ಲೂಕನ್ನು ತೀವ್ರ ಬರಪೀಡಿತ ಪಟ್ಟಿಯಿಂದ ಹೊರಗೆ ಇಟ್ಟಿರುವುದು ಅಕ್ಷಮ್ಯ. ಇದರಿಂದ ರೈತರಿಗೆ ತೀವ್ರ ಆಘಾತವಾಗಿದೆ’ ಎಂದು ಎರಡೂ ತಾಲ್ಲೂಕುಗಳ ರೈತ ಮುಖಂಡರಾದ ದೇವರಮನಿ ಮಹೇಶ್ ಮತ್ತು ಎನ್.ಭರಮಣ್ಣ ಹೇಳಿದರು.
ಮಾಹಿತಿ ನೀಡಿದ್ದೇವೆ: ‘ನಾವು ಎಲ್ಲಾ ತಾಲ್ಲೂಕುಗಳಲ್ಲೂ ತೀವ್ರ ಬರಗಾಲ ಪರಿಸ್ಥಿತಿ ಇರುವುದನ್ನು ತಿಳಿಸಿದ್ದೇವೆ. ವಿವಿಧೆಡೆ ಬೆಳೆ ನಾಶವಾಗಿರುವುದರ ಸಾಕ್ಷ್ಯವನ್ನೂ ನೀಡಿದ್ದೆವು. ಆದರೆ ಕೆಎಸ್‌ಎನ್‌ಡಿಎಂಸಿ ಉಪಗ್ರಹ ಆಧಾರಿತ ಸಮೀಕ್ಷೆ, ಒಟ್ಟಾರೆ ಮಳೆ ಪ್ರಮಾಣ ಸಹಿತ ಹಲವು ಮಾನದಂಡಗಳ ಆಧಾರದಲ್ಲಿ ತೀವ್ರ ಬರಪೀಡಿತ ತಾಲ್ಲೂಕು ಪಟ್ಟಿ ಪ್ರಕಟಿಸಿರಬಹುದು. ಅದರ ಬಗ್ಗೆ ನಿರ್ದಿಷ್ಟ ಕಾರಣ ತಿಳಿದಿಲ್ಲ. ಮುಂದೆ ಮತ್ತೊಮ್ಮೆ ಈ ಎರಡೂ ತಾಲ್ಲೂಕುಗಳ ಸೇರ್ಪಡೆಗೆ ನಮ್ಮ ಪ್ರಯತ್ನ ಮಾಡಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯದ 176 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ, ಮೊದಲ ಹಂತದಲ್ಲಿ 101 ತಾಲ್ಲೂಕುಗಳ ಬರ ಘೋಷಣೆ ಆಗಿದೆ. ಮುಂಗಾರು ಋತು ಮುಗಿಯುವ ತನಕ ಪ್ರತಿ ವಾರ ಅಧಿಕಾರಿಗಳು ಬರ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಲೇ ಇರಬೇಕು, ನಿಗದಿತ ಪ್ರಮಾಣದಲ್ಲಿ ಮಳೆ ಸುರಿಯದೆ ಬೆಳೆ ನಾಶವಾಗುವ ಸ್ಥಿತಿ ಇದ್ದರೆ ಖಂಡಿತ ಬರ ಪೀಡಿತ ಪ್ರದೇಶದ ಘೋಷಣೆ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಪರಿಹಾರ ಆಯುಕ್ತ ಮನೋಜ್ ಕುಮಾರ್ ಮೀನಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದ್ದು, ಸದ್ಯ ಇದುವೇ ಭರವಸೆಯ ಬೆಳಕಿನಂತಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-25-1402758634