
ಹೇಮಾವತಿ ಜಲಾಶಯ ಭರ್ತಿಗೆ ಇನ್ನೂ 7.7 ಅಡಿ ಬಾಕಿ: ರೈತರಲ್ಲಿ ಆತಂಕ
ಹಾಸನ: ಪ್ರತಿ ಬಾರಿಯೂ ಭರ್ತಿಯಾಗಿ ಬಾಗಿನಕ್ಕೆ ಕಾಯುತ್ತಿದ್ದ ಹೇಮಾವತಿಯ ಒಡಲು ಈ ಬಾರಿ ಇನ್ನೂ ಭರ್ತಿಯಾಗಿಲ್ಲ. ಜಿಲ್ಲೆಯ ಪ್ರಮುಖ ಜಲಮೂಲವಾಗಿರುವ ಗೊರೂರಿನ ಹೇಮಾವತಿ ಜಲಾಶಯ ಈ ಬಾರಿ ಪೂರ್ಣ ಭರ್ತಿಯಾಗುವುದೇ ಎಂಬ ಅನುಮಾನ ಮೂಡಿದೆ.
ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ್ದರಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದರೂ, ಗ್ರಾಮೀಣ ಭಾಗದ ಕೆರೆ-ಕಟ್ಟೆಗಳಿಗೆ ಸಮರ್ಪಕವಾಗಿ ನೀರು ತಲುಪದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಜಲಾಶಯದ ನೀರನ್ನು ಮುಖ್ಯವಾಗಿ ನಾಲೆಗಳ ಮೂಲಕ ಹರಿಸಲಾಗುತ್ತಿದ್ದು, ಇದರಿಂದ ಕೆಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುತ್ತಿದ್ದರೂ, ಎಲ್ಲ ಕೆರೆಕಟ್ಟೆಗಳು ತುಂಬುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಹೀಗಾಗಿ ಕೆರೆಗಳನ್ನು ಅವಲಂಬಿಸಿರುವ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ ಸವಾಲಾಗುವ ಸಾಧ್ಯತೆ ಇದೆ. ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹ ಆಗದಿದ್ದರೆ ಮುಂದಿನ ದಿನಗಳಲ್ಲಿ ಕೃಷಿಗೂ ನೀರಿನ ಸಮಸ್ಯೆ ಉಂಟಾಗಬಹುದು ಎಂಬ ಆತಂಕ ರೈತರಲ್ಲಿದೆ.
30.381 ಟಿಎಂಸಿ ನೀರು ಸಂಗ್ರಹ: ಆ.27ರ ಬೆಳಿಗ್ಗೆ 6 ಗಂಟೆಯವರೆಗೆ ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,922 ಅಡಿಗಳಾಗಿದ್ದು, ಪ್ರಸ್ತುತ 2,914.30 ಅಡಿ ಇದೆ. 37.103 ಟಿಎಂಸಿ ಒಟ್ಟು ಸಾಮರ್ಥ್ಯದ ಜಲಾಶಯದಲ್ಲಿ 30.092 ಟಿಎಂಸಿ ನೀರು ಸಂಗ್ರಹವಾಗಿದೆ. ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 25.720 ಟಿಎಂಸಿ ಇದೆ.
ಜಲಾಶಯ ಪೂರ್ಣ ಭರ್ತಿಯಾಗಲು ಇನ್ನೂ 7.7 ಅಡಿ ನೀರು ಅಗತ್ಯವಿದೆ. ಸದ್ಯದ ಒಳಹರಿವಿನ ಪ್ರಮಾಣವನ್ನು ಗಮನಿಸಿದರೆ ಈ ಬಾರಿ ಜಲಾಶಯ ಭರ್ತಿ ಯಾಗುವುದು ದುಸ್ತರಎನ್ನುವಂತಾಗಿದೆ.
ಜಲಾಶಯಕ್ಕೆ ಪ್ರಸ್ತುತ 2210 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷದ ಇದೇ ದಿನ 7005 ಕ್ಯುಸೆಕ್ ಒಳಹರಿವು ಇತ್ತು. ಅಂದರೆ ಈ ಬಾರಿ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ.
ಜಲಾಶಯದಿಂದ ಒಟ್ಟು 5,500 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮುಖ್ಯ ನದಿಗೆ 1,800 ಕ್ಯುಸೆಕ್, ಎಡದಂಡೆ ನಾಲೆಗೆ (ಎಲ್‌ಬಿಸಿ) 3,000 ಕ್ಯುಸೆಕ್, ಬಲದಂಡೆ ನಾಲೆಗೆ (ಆರ್‌ಬಿಸಿ) 300 ಕ್ಯುಸೆಕ್ ಹಾಗೂ ಎಚ್‌ಆರ್‌ಬಿಎಚ್‌ಎಲ್‌ಸಿಗೆ 400 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಎಲ್‌ಐಎಸ್‌ಗೆ ನೀರು ಬಿಡುಗಡೆ ಆಗುತ್ತಿಲ್ಲ.
ಮಳೆಗಾಗಿ ರೈತರ ನಿರೀಕ್ಷೆ: ಸಕಲೇಶಪುರ, ಮೂಡಿಗೆರೆ ಸೇರಿದಂತೆ ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯದ ಒಳಹರಿವು ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ಅದರ ನೇರ ಪರಿಣಾಮ ಗೊರೂರು ಜಲಾಶಯದ ನೀರಿನ ಮಟ್ಟದ ಮೇಲೆ ಬೀಳಲಿದೆ.
ಹೇಮಾವತಿ ಜಲಾಶಯವು ಜಿಲ್ಲೆಯ ನೀರಾವರಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ಪ್ರವಾಸೋದ್ಯಮ ಮಾಹಿತಿಯಲ್ಲಿಯೂ ಜಲಾಶಯವನ್ನು ನೀರಾವರಿ, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ಪ್ರಮುಖ ಮೂಲವೆಂದು ವಿವರಿಸಲಾಗಿದೆ.
ಕಳೆದ ವರ್ಷ ಭರ್ತಿಯಾಗಿದ್ದ ಜಲಾಶಯ
2025ರ ಆ.26ರಂದು ಜಲಾಶಯದ ನೀರಿನ ಮಟ್ಟ 2,921.85 ಅಡಿ ಇತ್ತು. ಒಟ್ಟು ನೀರಿನ ಸಂಗ್ರಹ 36.958 ಟಿಎಂಸಿ ಹಾಗೂ ಬಳಕೆಗೆ ಲಭ್ಯ ನೀರು 32.586 ಟಿಎಂಸಿ ಇತ್ತು.
ಅಂದು ಜಲಾಶಯಕ್ಕೆ 7,788 ಕ್ಯುಸೆಕ್ ಒಳಹರಿವು ಇದ್ದರೆ, ಒಟ್ಟು 7,675 ಕ್ಯುಸೆಕ್ ನೀರನ್ನು ನದಿ ಹಾಗೂ ವಿವಿಧ ನಾಲೆಗಳಿಗೆ ಹರಿಸಲಾಗುತ್ತಿತ್ತು. ಈ ಬಾರಿ ಸಂಗ್ರಹವೂ ಕಡಿಮೆಯಾಗಿದ್ದು, ಒಳಹರಿವಿನ ಪ್ರಮಾಣವೂ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದೆ. ಜುಲೈನಲ್ಲಿ ಉತ್ತಮ ಮಳೆಯಾದ ಸಂದರ್ಭದಲ್ಲಿ ಹೇಮಾವತಿ ಜಲಾಶಯದ ಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಜುಲೈ 8ರಂದು ಜಲಾಶಯಕ್ಕೆ 16,593 ಕ್ಯುಸೆಕ್ ಒಳಹರಿವು ದಾಖಲಾಗಿದ್ದ ಉದಾಹರಣೆಯೂ ಇದೆ.
ಕೆರೆ-ಕಟ್ಟೆ ತುಂಬದಿದ್ದರೆಕೃಷಿಗೆ ಹೊಡೆತ
ಹೇಮಾವತಿ ಜಲಾಶಯ ದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದರೂ, ಕೆರೆ–ಕಟ್ಟೆಗಳನ್ನು ತುಂಬಿಸುವ ವ್ಯವಸ್ಥೆ ಸಮರ್ಪಕವಾಗಿ ಆಗದಿದ್ದರೆ, ಅದರ ನೇರ ಪರಿಣಾಮ ಕೃಷಿ ಮೇಲೆ ಬೀಳಲಿದೆ. ಕೆರೆಗಳು ತುಂಬಿದರೆ ಮಾತ್ರ ಸುತ್ತಲಿನ ಗ್ರಾಮಗಳಲ್ಲಿನ ಕೊಳವೆಬಾವಿ, ತೆರೆದ ಬಾವಿ ಹಾಗೂ ಇತರ ಜಲಮೂಲಗಳಿಗೆ ಅಂತರ್ಜಲ ಮರುಪೂರಣವಾಗಲು ಅನುಕೂಲ ಆಗುತ್ತದೆ ಎನ್ನುತ್ತಾರೆ ಕೃಷಿಕರು.
ಈ ಬಾರಿ ಮಳೆ ಕೊರತೆಯಿಂದ ಹಲವು ಭಾಗಗಳಲ್ಲಿ ಅಂತರ್ಜಲದ ಮೇಲೂ ಒತ್ತಡ ಹೆಚ್ಚಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹವಾಗದೆ ಹೋದರೆ ಕುಡಿಯುವ ನೀರಿನ ಜತೆಗೆ ಜಾನುವಾರುಗಳಿಗೆ ನೀರು, ಬೆಳೆಗಳಿಗೆ ನೀರು ಒದಗಿಸುವುದು ಕಷ್ಟವಾಗಲಿದೆ. ಹೀಗಾಗಿ ಜಲಾಶಯದಿಂದ ನೀರು ಬಿಡುಗಡೆ ಮಾಡುವಾಗ ಪ್ರಮುಖ ನಾಲೆಗಳು, ಕೆರೆ–ಕಟ್ಟೆಗಳಿಗೂ ನೀರು ತಲುಪಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.
ಯಗಚಿ ನೀರಿಗೆ ರೈತ ಸಂಘ ಒತ್ತಾಯ
ಈ ನಡುವೆ ಕ್ಯಾತನಹಳ್ಳಿ ಹಾಗೂ ಲಕ್ಷ್ಮಿಪುರ ಏತ ನೀರಾವರಿ ಯೋಜನೆಗಳಿಗೆ ಯಗಚಿ ಜಲಾಶಯದಿಂದ ನೀರು ಹರಿಸಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಹೇಮಾವತಿ ಜಲಾಶಯದ ನೀರಿನ ಲಭ್ಯತೆ ಹಾಗೂ ಒಳಹರಿವಿನ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು, ಯಗಚಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಕ್ಯಾತನಹಳ್ಳಿ ಹಾಗೂ ಲಕ್ಷ್ಮಿಪುರ ಭಾಗದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಸಂಘ ಆಗ್ರಹಿಸಿದೆ. ಇದರಿಂದ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರು ಲಭ್ಯವಾಗಲಿದೆ. ಈ ಕುರಿತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-36-1576601463