
ಅಧಿವೇಶನ ನಡೆಸಲು ಅವಕಾಶ ನೀಡದೆ ಬಿಜೆಪಿಯಿಂದ ರಾಜ್ಯದ ಜನರಿಗೆ ವಂಚನೆ: ಖಾದರ್
ಮಂಗಳೂರು: ವಿಧಾನಸಭೆ ಅಧಿವೇಶನ ನಡೆಸಲು ಅವಕಾಶ ನೀಡದೆ, ಸಮಯ ವ್ಯರ್ಥ ಮಾಡುತ್ತಿರುವ ಪ್ರತಿಪಕ್ಷ ಬಿಜೆಪಿಯು, ರಾಜ್ಯದ ಜನರಿಗೆ ವಂಚನೆ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ, ವಿಧಾನ ಪರಿಷತ್ ಅಧಿವೇಶನಗಳು ರಾಜಕೀಯ ವೇದಿಕೆ ಆಗಬಾರದು. ರಾಜ್ಯದ ಜನರು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅಧಿವೇಶನ ನಡೆಸಲಾಗುತ್ತದೆ. ಆದರೆ, ಜನರ ಸಮಸ್ಯೆ ಚರ್ಚಿಸಲು ಅವಕಾಶ ನೀಡದೆ ಗದ್ದಲ ಮಾಡುತ್ತಿರುವ ಬಿಜೆಪಿಯವರನ್ನು ಜನರು ಕ್ಷಮಿಸುವುದಿಲ್ಲ ಎಂದರು.
ಬಿಜೆಪಿಯವರ ಗದ್ದಲದ ಹಿಂದೆ ದುರದ್ದೇಶ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ನಿಜವಾದ ಕಾಳಜಿ ಇದ್ದರೆ ಬಿಜೆಪಿಯರು ನಿಯಮದ ಪ್ರಕಾರ ನೋಟಿಸ್ ನೀಡಿ, ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಸದನದಲ್ಲಿ ಪ್ರಶ್ನಿಸಬಹುದಾಗಿತ್ತು ಎಂದು ಹೇಳಿದರು.
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದ ಆರೋಪ ಬಂದಾಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎರಡು ವರ್ಷ ದೂರ ಉಳಿದು, ತನಿಖೆ ಎದುರಿಸಿದ್ದಾರೆ. ಅಧಿಕಾರಿಗಳು ಅಥವಾ ಇನ್ನಾರದೋ ತಪ್ಪಿನಿಂದ ಹಣ ವರ್ಗಾವಣೆ ಆಗಿರಬಹುದು, ಪ್ರಸ್ತುತ ಶೇ99.5 ಹಣ ಸರ್ಕಾರಕ್ಕೆ ವಾಪಸ್ ಬಂದಿದೆ. ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇವೆಲ್ಲದರ ಅರಿವಿದ್ದೂ, ಬಿಜೆಪಿ ಶಾಸಕರು ಅಧಿವೇಶನ ನಡೆಸಲು ಅವಕಾಶ ನೀಡದಿರುವುದು ಸರಿಯಲ್ಲ ಎಂದು ಆರೋಪಿಸಿದರು.
ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸುವಾಗ, ಎಲ್ಲ ವೂ ಕಾನೂನುಬದ್ಧವಾಗಿದೆಯೇ ಎಂದು ಪರಿಶೀಲಿಸಿಯೇ ಪ್ರತಿಜ್ಞೆ ಬೋಧಿಸಿರುತ್ತಾರೆ. ಸಿಬಿಐ ತನಿಖೆ ಎದುರಿಸುತ್ತಿರುವ ಎಷ್ಟೋ ಮಂದಿ ಬಿಜೆಪಿಯಲ್ಲಿ ಅಧಿಕಾರದಲ್ಲಿದ್ದಾರೆ, ಹಿಂದೆ ಮುಖ್ಯಮಂತ್ರಿ, ಸಚಿವರೂ ಆಗಿದ್ದಾರೆ. ಆಗ ಅವರಿಗೆ ನಿಯಮಗಳು ಅನ್ವಯ ಆಗಿಲ್ಲವೇ ಎಂದು ಪ್ರಶ್ನಿಸಿದರು.