
ತಾರಿಕ್ ರೆಹಮಾನ್ ಭಾರತ ಭೇಟಿ ಕುರಿತು ಗೊಂದಲ: ಪ್ರಕಟಣೆ ಹಿಂಪಡೆದ ರಾಷ್ಟ್ರಪತಿ ಭವನ
ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರ ಭಾರತ ಭೇಟಿ ಕುರಿತು ಅನಿಶ್ಚಿತತೆ ಮುಂದುವರಿದಿದೆ. ಈ ವಾರಾಂತ್ಯದಲ್ಲಿ ರಹಮಾನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳ ನಡುವೆಯೇ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಈ ವಿಷಯದಲ್ಲಿ ಸದ್ಯಕ್ಕೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಶನಿವಾರ ನಡೆಯಬೇಕಿದ್ದ ‘ಚೇಂಜ್ ಆಫ್ ಗಾರ್ಡ್’ ಸಮಾರಂಭವನ್ನು ರದ್ದುಪಡಿಸಲಾಗಿದೆ ಎಂದು ಶುಕ್ರವಾರ ರಾಷ್ಟ್ರಪತಿ ಭವನ ಪ್ರಕಟಣೆ ಹೊರಡಿಸಿತ್ತು. ತಾರಿಕ್ ರೆಹಮಾನ್ ಅವರ ಔಪಚಾರಿಕ ಸ್ವಾಗತದ ಪೂರ್ವಾಭ್ಯಾಸಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಈ ಪ್ರಕಟಣೆಯಿಂದ ರೆಹಮಾನ್ ಅವರ ಭಾರತ ಭೇಟಿ ಖಚಿತವಾಗಿದೆ ಎಂಬ ಭಾವನೆ ಮೂಡಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಪ್ರಕಟಣೆ ಹಿಂಪಡೆದ ರಾಷ್ಟ್ರಪತಿ ಭವನ ಹೊಸ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ, ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ್ದ ಪ್ರಕಟಣೆಯನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಪ್ರತಿ ಶನಿವಾರ ಬೆಳಿಗ್ಗೆ ರಾಷ್ಟ್ರಪತಿ ಭವನದ ಮುಂಭಾಗದ ಪ್ರಾಂಗಣದಲ್ಲಿ 30 ನಿಮಿಷಗಳ ಕಾಲ ‘ಚೇಂಜ್ ಆಫ್ ಗಾರ್ಡ್’ ಸಮಾರಂಭ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಸಮಾರಂಭವನ್ನು ರದ್ದುಪಡಿಸಲಾಗುತ್ತದೆ.
ತಾರಿಕ್ ರೆಹಮಾನ್ ಅವರು ಆಗಸ್ಟ್ 23 ಮತ್ತು 24ರಂದು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಭಾರತವು ಶೇಖ್ ಹಸೀನಾ ಅವರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸುವವರೆಗೂ ಈ ಭೇಟಿ ಸಾಧ್ಯವಿಲ್ಲ ಎಂದು ಢಾಕಾ ಸ್ಪಷ್ಟಪಡಿಸಿದೆ.