
ಶಿಡ್ಲಘಟ್ಟ: ರೇಷ್ಮೆ ಕಾರ್ಖಾನೆಯಲ್ಲಿ ಅರಳಿದ ಮಹಿಳೆಯರ ಶ್ರಮದ ಕಥೆ
ಶಿಡ್ಲಘಟ್ಟ: ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ ಮನೆಮನೆಗಳಲ್ಲಿ ಪೂಜೆ, ಹೂವು-ಹಣ್ಣುಗಳ ಸಂಭ್ರಮ. ಆದರೆ, ಪೂಜೆ ಗದ್ದುಗೆಯಲ್ಲಿ ಕುಳಿತ ಲಕ್ಷ್ಮಿಗಷ್ಟೇ ಅಲ್ಲ, ದುಡಿಮೆಯಿಂದ ಕುಟುಂಬಕ್ಕೆ ಆಸರೆಯಾಗುವ ಮನೆಯ ಹೆಣ್ಣುಮಗಳಿಗೂ ‘ಲಕ್ಷ್ಮಿ’ ಎಂಬ ಗೌರವ ಸಲ್ಲಬೇಕಲ್ಲವೇ? ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟರೆ, ಶಿಡ್ಲಘಟ್ಟ ತಾಲ್ಲೂಕಿನ ರೇಷ್ಮೆ ಉದ್ಯಮದ ಆರು ದಶಕಗಳ ಹಿಂದಿನ ಪುಟಗಳು ತೆರೆದುಕೊಳ್ಳುತ್ತವೆ.
ಬೆಳಗಿನ ಸೈರನ್, ಬದುಕಿನ ಹೊಸ ದಿಕ್ಕು: ಸುಮಾರು ಅರವತ್ತು ವರ್ಷಗಳ ಹಿಂದೆ ಪ್ರತಿದಿನ ಬೆಳಗ್ಗೆ ಎಂಟು ಗಂಟೆಗೆ ಮೊಳಗುತ್ತಿದ್ದ ಒಂದು ಸೈರನ್ ತಾಲ್ಲೂಕಿನ ಹಲವು ಗ್ರಾಮಗಳ ಮಹಿಳೆಯರ ಬದುಕಿನ ಗತಿಯನ್ನೇ ಬದಲಿಸಿತ್ತು. ಭಕ್ತರಹಳ್ಳಿ ಓಣಿಗಳಲ್ಲಿ ಬೆಳಗ್ಗಿನಿಂದಲೇ ಚಟುವಟಿಕೆ ಶುರುವಾಗುತ್ತಿತ್ತು. ಮನೆ ಕೆಲಸ ಮುಗಿಸಿಕೊಂಡ ಸೀರೆಯುಟ್ಟ ಮಹಿಳೆಯರು ಕಂಪನಿ ವಾಹನ ಏರಿ ಮೇಲೂರಿನ ಕಿಸಾನ್ ಸಿಲ್ಕ್ ಇಂಡಸ್ಟ್ರೀಸ್ ಗೆ ತೆರಳುತ್ತಿದ್ದರು. ಅಲ್ಲಿನ ಸೈರನ್ ಬರೀ ಕೆಲಸದ ಸಮಯ ಸೂಚಿಸುತ್ತಿರಲಿಲ್ಲ. ಹೊಸ ಬದುಕಿನ ಆರಂಭವನ್ನೇ ಸಾರುತ್ತಿತ್ತು.
ಗ್ರಾಮಕ್ಕೆ ಬಂದ ಕೈಗಾರಿಕೆ: ಗ್ರಾಮೀಣ ಉದ್ಯೋಗ ಸೃಷ್ಟಿಯಕನಸು ಹೊತ್ತಿದ್ದ ಭಾರತರತ್ನ ಸರ್. ಎಂ.ವಿಶ್ವೇಶ್ವರಯ್ಯ ಅವರಿಂದಾಗಿ ರೇಷ್ಮೆ ಕೃಷಿಗೆ ಪೂರಕವಾಗಿದ್ದ ಮೇಲೂರಿನಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರೀಸ್ ತಲೆ ಎತ್ತಿತು. ಸಂಸ್ಥೆಯ ಬೇರುಗಳು 1946ರಷ್ಟು ಹಿಂದಕ್ಕೆ ಹೋಗುತ್ತವೆ. ಆಗಲೇ ಮೇಲೂರಿನಲ್ಲಿ ನೋಂದಾಯಿತ ಕಚೇರಿಯೊಂದಿಗೆ ಸಂಸ್ಥೆ ನೋಂದಣಿಯಾಗಿತ್ತು. 1952ರಲ್ಲಿ ಮೇಲೂರು-ಕಂಬದಹಳ್ಳಿ ರಸ್ತೆಯಲ್ಲಿದ್ದ ಕಾರ್ಖಾನೆಯನ್ನು ಸ್ವತಃ ವಿಶ್ವೇಶ್ವರಯ್ಯನವರೇ ಉದ್ಘಾಟಿಸಿದ್ದರು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆರಂಭವಾದ ಮೊದಲ ಕೈಗಾರಿಕೆಗಳಲ್ಲಿ ಇದೂ ಒಂದೆಂದು ಸ್ಥಳೀಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ದಿನಕ್ಕೆ ಮೂರು ಸೈರನ್, ಹಳ್ಳಿಯ ಗಡಿಯಾರ: ದಿನಕ್ಕೆ ಮೂರು ಬಾರಿ ಮೊಳಗುತ್ತಿದ್ದ ಸೈರನ್ ಸುತ್ತಮುತ್ತಲಿನ ಹಳ್ಳಿಗಳ ಬದುಕಿನ ಗಡಿಯಾರವೇ ಆಗಿತ್ತೆಂದು ಆ ಕಾಲವನ್ನು ಕಂಡವರು ನೆನಪಿಸಿಕೊಳ್ಳುತ್ತಾರೆ. ಬೆಳಗ್ಗೆ ಎಂಟಕ್ಕೆ ಕೆಲಸ ಆರಂಭ, ಮಧ್ಯಾಹ್ನ ಹನ್ನೆರಡಕ್ಕೆ ಊಟದ ವಿರಾಮ, ಸಂಜೆ ನಾಲ್ಕಕ್ಕೆ ಕೆಲಸ ಮುಕ್ತಾಯ. ಕಾರ್ಮಿಕರಷ್ಟೇ ಅಲ್ಲ, ಸುತ್ತಮುತ್ತಲಿನ ರೈತರೂ ಸೈರನ್ ಧ್ವನಿಯನ್ನೇ ಸಮಯದ ಸೂಚನೆಯಾಗಿ ನೆಚ್ಚಿಕೊಂಡಿದ್ದರು. ಮಹಿಳೆಯರ ಪಾಲಿಗೆ ಆ ಸೈರನ್ ಇನ್ನೊಂದು ಅರ್ಥವನ್ನೂ ಹೊತ್ತಿತ್ತು. ಮನೆಯ ನಾಲ್ಕು ಗೋಡೆಗಳ ಆಚೆಗೆ ಹೆಜ್ಜೆ ಇಟ್ಟು, ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗುವ ಹೊಸ ಬದುಕಿನ ಶಿಸ್ತು.
ಗೂಡು ಬೇಯಿಸಿದ ಕೈಗಳು, ಗಟ್ಟಿಯಾದ ಆತ್ಮವಿಶ್ವಾಸ: ಗೂಡು ಕುದಿಸುವುದು, ನೂಲು ತೆಗೆಯುವುದು ಸೇರಿದಂತೆ ರೇಷ್ಮೆ ಉತ್ಪಾದನೆ ವಿವಿಧ ಹಂತಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದರು. ಕೃಷಿ ಕೂಲಿಯೊಂದೆ ಆದಾಯದ ಮೂಲವಾಗಿದ್ದ ಗ್ರಾಮೀಣ ಕುಟುಂಬಗಳಿಗೆ ಕಾರ್ಖಾನೆಯ ಕೆಲಸ ನಿಯಮಿತ ಸಂಬಳದ ಭರವಸೆ ತಂದು ಕೊಟ್ಟಿತು. ಮಹಿಳೆಯರ ಕೈಸೇರಿದ ಆ ಸಂಬಳ ಆರ್ಥಿಕತೆಗೆ ನೆರವಾದಷ್ಟೇ ಆತ್ಮವಿಶ್ವಾಸಕ್ಕೂ ಬಲ ತುಂಬಿತು.
ಭಕ್ತರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಗುಂಪು ಗುಂಪಾಗಿ ಕಾರ್ಖಾನೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಆ ಕಾಲದ ಗ್ರಾಮೀಣ ಬದುಕಿನ ಭಾಗವಾಗಿತ್ತೆಂದು ಭಕ್ತರಹಳ್ಳಿ ಸಂತೆ ನಾರಾಯಣಸ್ವಾಮಿ ನೆನಪಿಸಿಕೊಳ್ಳುತ್ತಾರೆ. ಮಹಿಳಾ ಕಾರ್ಮಿಕರಿಗಾಗಿಯೇ ಪ್ರತ್ಯೇಕ ಬಡಾವಣೆಯನ್ನೂ ಆರಂಭಿ. ರೇಷ್ಮೆ ಗೂಡು ಬೆಳೆಯುವ ರೈತರಿಗೆ ನೆರವು, ಮಕ್ಕಳ ಶಿಕ್ಷಣಕ್ಕೆ ಸಹಾಯ–ಹೀಗೆ ಸಂಸ್ಥೆ ಗ್ರಾಮದ ಬದುಕಿನ ಹಲವು ಎಳೆಗಳನ್ನು ಬೆಸೆದಿತ್ತು ಎಂದು ಅವರು ಹೇಳುತ್ತಾರೆ.
ಮೌನವಾದ ಸೈರನ್, ಉಳಿದ ಆತ್ಮಸ್ಥೈರ್ಯ: 1970ರ ದಶಕದಲ್ಲಿ ಸಂಸ್ಥೆ ಚಟುವಟಿಕೆಗಳಲ್ಲಿ ಬದಲಾವಣೆಯಾಗಿ ಗ್ರಾಮದ ಗಡಿಯಾರವಾಗಿದ್ದ ಆ ಸೈರನ್ ಮೊಳಗುವುದೇ ನಿಂತು ಹೋಯಿತು. ಕಿಸಾನ್ ಸಿಲ್ಕ್ ಇಂಡಸ್ಟ್ರೀಸ್ ಹೆಸರೂ ಹೊಸ ತಲೆಮಾರಿಗೆ ಅಪರಿಚಿತವಾಯಿತು. ಆದರೆ, ಆ ಕಾರ್ಖಾನೆ ಮಹಿಳೆಯರಲ್ಲಿ ಬಿತ್ತಿದ ದುಡಿಮೆಯ ಆತ್ಮವಿಶ್ವಾಸ ಮಾತ್ರ ಗ್ರಾಮೀಣ ಸಮಾಜದಲ್ಲಿ ಉಳಿದು ಕೊಂಡಿತು.
ವರಮಹಾಲಕ್ಷ್ಮಿ , ದುಡಿಯುವ ಕೈಗಳು
ಇಂದು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮನೆ ಮನೆಗಳಲ್ಲಿ ಲಕ್ಷ್ಮಿದೇವಿಯನ್ನು ಆರಾಧಿಸಿ, ಸಂಪತ್ತು-ಸೌಭಾಗ್ಯಕ್ಕಾಗಿ ಮಹಿಳೆಯರು ವ್ರತ ಆಚರಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಶಿಡ್ಲಘಟ್ಟದ ರೇಷ್ಮೆ ಇತಿಹಾಸದಲ್ಲಿ ದುಡಿದ ಆ ಸಾವಿರಾರು ಮಹಿಳೆಯರ ನೆನಪು ಅಷ್ಟೇ ಪ್ರಸ್ತುತ ಎನಿಸುತ್ತದೆ. ಏಕೆಂದರೆ ಕುಟುಂಬದ ಸಮೃದ್ಧಿಗೆ ಕೇವಲ ಪೂಜೆಯಷ್ಟೇ ಅಲ್ಲ, ಮಹಿಳೆಯ ಶ್ರಮವೂ ಅಷ್ಟೇ ಮುಖ್ಯ ಕಾರಣ. ಬೆಳಗ್ಗೆ ಸೈರನ್ ಮೊಳಗುತ್ತಿದ್ದಂತೆ ಕಾರ್ಖಾನೆಯತ್ತ ಹೆಜ್ಜೆ ಹಾಕುತ್ತಿದ್ದ ಆ ಮಹಿಳೆಯರು ಕುಟುಂಬಗಳ ಆರ್ಥಿಕ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದರು. ಅವರ ಕೈಗೆ ಬಂದ ಸಂಬಳ ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಅಗತ್ಯಗಳಿಗೆ ಆಸರೆಯಾಗುತ್ತಿತ್ತು.
ವರಮಹಾಲಕ್ಷ್ಮಿ ಹಬ್ಬದಲ್ಲಿ ಮಹಿಳೆಯನ್ನು ಮನೆ ಸೌಭಾಗ್ಯದ ಸಂಕೇತವಾಗಿ ಕಾಣುವ ಸಂಪ್ರದಾಯವಿದೆ. ಶಿಡ್ಲಘಟ್ಟದ ಈ ರೇಷ್ಮೆ ಇತಿಹಾಸ, ತನ್ನ ಶ್ರಮದಿಂದಲೇ ಕುಟುಂಬದ ಆರ್ಥಿಕತೆಯನ್ನು ಗಟ್ಟಿಗೊಳಿಸಿದ ದುಡಿಯುವ ಮಹಿಳೆಯ ಮುಖವನ್ನೂ ನೆನಪಿಸುತ್ತದೆ.ಸ್ವಸಹಾಯ ಸಂಘಗಳು, ಉದ್ಯಮಶೀಲತೆ ಚಟುವಟಿಕೆಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಯತ್ತ ಸಾಗುತ್ತಿದ್ದಾರೆ. ಈ ಪಯಣ ಹೊಸತೇನಲ್ಲ. ಮೇಲೂರಿನ ಕಿಸಾನ್ ಸಿಲ್ಕ್ ಇಂಡಸ್ಟ್ರೀಸ್ ನಲ್ಲಿ ಗೂಡು ಬೇಯಿಸಿ, ನೂಲು ತೆಗೆದು, ಬೆಳಿಗ್ಗೆ ಎಂಟರ ಸೈರನ್ ಗೆ ಸರಿಯಾಗಿ ಹಾಜರಾಗುತ್ತಿದ್ದ ಆ ಮಹಿಳೆಯರಲ್ಲೇ ಇದರ ಮೊದಲ ಹೆಜ್ಜೆಗಳನ್ನು ಕಾಣಬಹುದು. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿ ಆರಾಧನೆ ಜತೆ ಜತೆಗೆ ಶಿಡ್ಲಘಟ್ಟದ ಗ್ರಾಮೀಣ ಬದುಕಿಗೆ ಹೊಸ ದಿಕ್ಕು ತೋರಿದ ಆ ದುಡಿಯುವ ಮಹಿಳೆಯರನ್ನೂ ನೆನಪಿಸಿಕೊಳ್ಳಬೇಕಿದೆ. ಕುಟುಂಬಗಳ ಬದುಕಿಗೆ ಬೆಳಕು ತಂದ ಆ ಕೈಗಳ ಕಥೆಯೂ ಇತಿಹಾಸದಲ್ಲಿ ದಾಖಲಾಗಬೇಕಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-16-541427846