
ಸೊಮಾಲಿಯಾ ಕಡಲ್ಗಳ್ಳರು 4 ದಿನಗಳಲ್ಲಿ ಅಪಹರಿಸಿದ 2 ಹಡಗುಗಳಲ್ಲಿದ್ದಾರೆ 6 ಭಾರತೀಯರು
ಮೊಗಾದಿಶು: ಪಶ್ಚಿಮ ಏಷ್ಯಾದ ಸಾಗರ ವಲಯದಲ್ಲಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಸೊಮಾಲಿಯಾ ಕಡಲ್ಗಳ್ಳರು ಕೇವಲ ನಾಲ್ಕು ದಿನಗಳ ಅಂತರದಲ್ಲಿ ಎರಡು ಹಡಗುಗಳನ್ನು ಅಪಹರಿಸಿದ್ದಾರೆ.
ಸೊಮಾಲಿಯಾದ 'ಪುಂಟ್‌ಲ್ಯಾಂಡ್' ಕರಾವಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಕ್ಯಾಮರೂನ್ ಮೂಲದ ಸರಕು ಹಡಗು ಮತ್ತು ಯೆಮೆನ್ ಕರಾವಳಿಯಲ್ಲಿದ್ದ ಇರಾನ್ ಮೂಲದ್ದು ಎಂದು ಶಂಕಿಸಲಾದ 'ಶ್ಯಾಡೋ ಫ್ಲೀಟ್' (ಗುಪ್ತ ಕಾರ್ಯಾಚರಣೆಯ ನೌಕಾಪಡೆ) ತೈಲ ಟ್ಯಾಂಕರ್ ಅನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ.
ಕ್ಯಾಮರೂನ್ ಮೂಲದ ಹಡಗಿನಲ್ಲಿದ್ದ ಒಟ್ಟು ಹತ್ತು ಮಂದಿ ಸಿಬ್ಬಂದಿಯ ಪೈಕಿ ಆರು ಮಂದಿ ಭಾರತೀಯರು ಇದ್ದಾರೆ.
ಟರ್ಕಿಯ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಎಂ/ವಿ ಲುಟುಫ್ ಎಂಬ ಹಡಗನ್ನು ಪುಂಟ್‌ಲ್ಯಾಂಡ್‌ನ ಐಲ್ ಬಳಿಯ ಕರಾವಳಿಯಿಂದ ಸುಮಾರು ಮೂರೂವರೆ ನಾಟಿಕಲ್ ಮೈಲಿ ದೂರದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆ ನಂತರ ಕನಿಷ್ಠ ಎಂಟು ಮಂದಿ ಕಡಲ್ಗಳ್ಳರು ಅದನ್ನು ನುಗಾಲ್ ಕರಾವಳಿಗೆ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕ ತೈಲ ಸಾಗಣೆಯ ಮೇಲ್ವಿಚಾರಣೆ ಮಾಡುವ ‘ಟ್ಯಾಂಕರ್ ಟ್ರ್ಯಾಕರ್.ಕಾಮ್’ ಸಂಸ್ಥೆಯ ಪ್ರಕಾರ, ಕಡಲ್ಗಳ್ಳರು ಅಪಹರಿಸಿರುವ ಎಸ್‌ಐಬಿಯು–1 ಹಡಗು, ಪ್ರಪಂಚದಾದ್ಯಂತ ತೈಲವನ್ನು ರಫ್ತು ಮಾಡುವ ಇರಾನ್‌ನ 'ಶ್ಯಾಡೋ ಫ್ಲೀಟ್' ಭಾಗವಾಗಿರುವ ಸಾಧ್ಯತೆಯಿದೆ. ಈ ಟ್ಯಾಂಕರ್ ನಿಯಮಿತವಾಗಿ ಯೆಮೆನ್‌ನ ರಾಸ್ ಇಸಾ ಬಂದರಿನಲ್ಲಿರುವ ತೈಲ ಟರ್ಮಿನಲ್‌ಗೆ ಇಂಧನವನ್ನು ಸಾಗಿಸುತ್ತಿತ್ತು. ಈ ಬಂದರು ಇರಾನ್ ಬೆಂಬಲಿತ ಹೂಥಿ ಬಂಡಾಯಗಾರರ ನಿಯಂತ್ರಣದಲ್ಲಿದೆ ಎಂದು ಹೇಳಿದೆ.
ಯೆಮೆನ್ ಕರಾವಳಿಯಿಂದ ಸುಮಾರು 130 ಮೈಲುಗಳಷ್ಟು ದೂರದಲ್ಲಿ ಏಳು ಮಂದಿ ಸಶಸ್ತ್ರ ಕಡಲ್ಗಳ್ಳರು ಎಸ್‌ಐಬಿಯು–1 ಹಡಗನ್ನು ವಶಪಡಿಸಿಕೊಂಡು, ಅದನ್ನು ಸೊಮಾಲಿಯಾ ಜಲಪ್ರದೇಶದತ್ತ ತಿರುಗಿಸಿದರು ಎಂದು ಅಲ್ಲಿನ ಹಿರಿಯ ಭದ್ರತಾ ಅಧಿಕಾರಿ ಕರ್ನಲ್ ಮೊಹಮ್ಮದ್ ಜಮಾ ಹೇಳಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
2026ರ ಮೊದಲ 5 ತಿಂಗಳಲ್ಲಿ ಸೊಮಾಲಿಯಾದ ಕಡಲಲ್ಲಿ 17ಕ್ಕೂ ಅಧಿಕ ಹಡಗುಗಳನ್ನು ಅಪಹರಿಸಲಾಗಿದೆ.