
ಚಿತ್ರದುರ್ಗ: ಸಾಣೇಹಳ್ಳಿ ರಂಗದಾಸೋಹದಲ್ಲಿ ಅರಳಿದ ಚಂದ್ರಮ್ಮ
ಚಿತ್ರದುರ್ಗ: ಸಾಣೇಹಳ್ಳಿಯ ‘ಶಿವಸಂಚಾರ’ ರಂಗ ತಂಡದ ಕಲಾವಿದೆಯಾಗಿ, ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ)ದ ಪದವೀಧರೆಯಾಗಿ, ತಿರುಗಾಟದ ನಾಟಕಗಳ ನಟಿಯಾಗಿ, ನಿರ್ದೇಶಕಿಯಾಗಿ, ಗಾಯಕಿಯಾಗಿ ಭರವಸೆ ಮೂಡಿಸಿರುವ ಗ್ರಾಮೀಣ ಪ್ರತಿಭೆ ಚಂದ್ರಮ್ಮ ತಿರಗಾರ ಅವರು ರಂಗಭೂಮಿಯಲ್ಲಿ ಅಪಾರ ಭರವಸೆ ಮೂಡಿಸಿದ್ದಾರೆ.
ಸದ್ಯ ಸಾಣೇಹಳ್ಳಿಯ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗ ಶಿಕ್ಷಕಿಯಾಗಿರುವ ಅವರಿಗೆ ನಾಟಕ ಅಕಾಡೆಮಿಯ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ ಅರಸಿ ಬಂದಿದೆ.
ಹೊಳಲ್ಕೆರೆ ತಾಲ್ಲೂಕು ಆರ್.ನುಲೇನೂರು ಗ್ರಾಮದ ಚಂದ್ರಮ್ಮ ರಂಗಭೂಮಿಗೆ ಬಂದದ್ದೇ ಸೋಜಿಗದ ಸಂಗತಿ. ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ಕೇಳಿ ಚಂದ್ರಮ್ಮ ರಂಗಭೂಮಿಯತ್ತ ಆಕರ್ಷಿತರಾದರು. ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ಅವರಿಗೆ ರಂಗಭೂಮಿಯೇ ಮುಂದೆ ವಿಶ್ವವಿದ್ಯಾಲಯವಾಯಿತು. ನುಲೇನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಸ್ವಾಮೀಜಿ, ‘ನಾಟಕದಲ್ಲಿ ಆಸಕ್ತಿ ಇರುವವರು ಸಾಣೇಹಳ್ಳಿಗೆ ಬರಬಹುದು’ ಎಂಬ ಕರೆ ಕೊಟ್ಟಿದ್ದು ಇವರನ್ನು ಅತ್ತ ಸೆಳೆಯಿತು.
ಶ್ರೀಗಳ ಮಾತಿನಿಂದ ಪ್ರೇರಣೆಗೊಂಡ ಚಂದ್ರಮ್ಮ 2003ರಲ್ಲಿ ಸಾಣೇಹಳ್ಳಿ ಮಠದತ್ತ ಹೆಜ್ಜೆ ಹಾಕಿದರು. ಮೊದಲ ಪ್ರಯತ್ನದಲ್ಲೇ ಶಿವಸಂಚಾರ ನಾಟಕ ತಂಡದ ಕಲಾವಿದೆಯಾಗಿ ಆಯ್ಕೆಯಾದ ಇವರು, ‘ಬೆರಳ್‌ಗೆ ಕೊರಳ್’, ‘ವಿಶ್ವಬಂಧು ಮರಳುಸಿದ್ಧ’, ‘ಆಮ್ರಪಾಲಿ’ ನಾಟಕಗಳಲ್ಲಿ ಬಣ್ಣವನ್ನೂ ಹಚ್ಚಿದರು. ಹಿರಿಯ ನಟಿ ಮರಿಯಮ್ಮನಹಳ್ಳಿ ಹನುಮಕ್ಕ ಸೇರಿದಂತೆ ಹಿರಿಯರ ಮಾರ್ಗದರ್ಶನದಲ್ಲಿ ಚಂದ್ರಮ್ಮ ಅವರ ರಂಗಕಲೆಯ ನಂಟು ಗಾಢವಾಯಿತು.
ನಾಲ್ಕು ವರ್ಷ ಸಾಣೇಹಳ್ಳಿಯಲ್ಲೇ ಇದ್ದ ಇವರು, ಶಿವಸಂಚಾರ ತಿರುಗಾಟ ನಾಟಕಗಳಲ್ಲಿ ಅಭಿನಯಿಸಿದರು. ರಂಗಸಂಗೀತ ಸೇರಿದಂತೆ ರಂಗಭೂಮಿಯ ವಿವಿಧ ಆಯಾಮಗಳಲ್ಲಿ ದುಡಿದರು. ಈ ಹಂತದಲ್ಲಿ ಇವರಿಗೆ ಅನಾರೋಗ್ಯ ಕೂಡ ಜೊತೆಯಾಗಿತ್ತು. ಇದನ್ನರಿತ ಶ್ರೀಗಳು ಇವರಿಗೆ ಅಗತ್ಯ ಚಿಕಿತ್ಸೆ ಕೊಡಿಸಿದರು. 2007ರಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಇದರಿಂದ ಕೊಂಚವೂ ಕದಲದ ಚಂದ್ರಮ್ಮ ಗಟ್ಟಿಯಾಗಿ ಸವಾಲು ಎದುರಿಸಿದರು. ಕಷ್ಟದಲ್ಲಿ ನೆರವಾದ ಶ್ರೀಗಳನ್ನು ಚಂದ್ರಮ್ಮ ಸದಾ ನೆನೆಯುತ್ತಾರೆ.
ನೀನಾಸಂ ತಿರುಗಾಟ: ವಿಶ್ರಾಂತಿಯ ನಂತರ ಚಂದ್ರಮ್ಮ ಮತ್ತೆ ರಂಗಸ್ಥಳಕ್ಕೆ ಮರಳಿದರು. ನೀನಾಸಂನ ಮರು ತಿರುಗಾಟ ತಂಡಕ್ಕೆ ನಟಿಯಾಗಿ ಆಯ್ಕೆಯಾದರು. ಅವರ ಉತ್ಸಾಹ ಕಂಡ ಕೆ.ವಿ. ಅಕ್ಷರ 2008ರಲ್ಲಿ ರಂಗ ಡಿಪ್ಲೊಮಾ ಪ್ರವೇಶಕ್ಕೆ ಅವಕಾಶ ನೀಡಿದರು. 2015ರವರೆಗೂ ನೀನಾಸಂ ತಿರುಗಾಟದ ನಾಟಕಗಳಲ್ಲಿ ಅಭಿನಯಿಸಿದರು. ನೀನಾಸಂ ರಂಗ ಗುರು ಎಂ. ಗಣೇಶ್ ‘ಜನಮನದಾಟ’ ತಂಡದಲ್ಲೂ 3 ವರ್ಷ ಕೆಲಸ ಮಾಡಿದರು.
2015ರಲ್ಲಿ ಚಂದ್ರಮ್ಮ ಅವರು ತಮ್ಮ ಗೆಳೆಯ, ಧಾರವಾಡ ಜಿಲ್ಲೆಯ ಗುಳೇದಕೊಪ್ಪದ ಲಕ್ಷ್ಮಣ ತಿರಗಾರ ಅವರೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದು, ಇವರಿಗೆ ನಕುಲ್– ನಂದನ್ ಅವಳಿ ಮಕ್ಕಳಿದ್ದಾರೆ. ಪತಿ ಲಕ್ಷ್ಮಣ ಕೊಪ್ಪಳದಲ್ಲಿ ‘ರಂಗಧಾರ’ ರೆಪರ್ಟರಿ ಕಟ್ಟಿದ್ದು ಇಬ್ಬರೂ ಒಟ್ಟಾಗಿ ರಂಗಕಾಯಕ ಮಾಡಿದರು. ನಂತರ ಕೆಲಕಾಲ ವಿಸ್ತಾರ ರಂಗಶಾಲೆಯಲ್ಲೂ ಕೆಲಸ ಮಾಡಿದರು. ಜೊತೆಗೆ ಶಿವಮೊಗ್ಗ ರಂಗಾಯಣದ ತಿರುಗಾಟ, ಬೇಸಿಗೆ ಶಿಬಿರದಲ್ಲೂ ಕೆಲಸ ಮಾಡಿದರು. 2022ರಿಂದ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗ ಶಿಕ್ಷಕಿಯಾಗಿ ಕೆಲಸ ಮಡುತ್ತ ಮಕ್ಕಳಲ್ಲಿ ರಂಗೋತ್ಸಾಹ ಮೂಡಿಸುತ್ತಿದ್ದಾರೆ.
ರಂಗ ಗುರುವಿನ ಜೊತೆ ಗೌರವ
ರಂಗಕರ್ಮಿ ಎಂ.ಗಣೇಶ್ ಹೆಗ್ಗೋಡು ಅವರಿಗೂ ಈ ಬಾರಿಯ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಬಂದಿದ್ದು, ರಂಗಗುರುವಿನ ಜೊತೆ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದಕ್ಕೆ ಚಂದ್ರಮ್ಮ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
‘ನನ್ನ ರಂಗಭೂಮಿ ನಡಿಗೆಯಲ್ಲಿ ಪಂಡಿತಾರಾಧ್ಯ ಶ್ರೀಗಳ ಪ್ರೋತ್ಸಾಹ ಬಲು ದೊಡ್ಡದು. ಅವರು ನನ್ನೊಳಗಿದ್ದ ರಂಗಭೂಮಿ ಪ್ರತಿಭೆಯನ್ನು ಹೊರಗೆ ತಂದಿದ್ದಾರೆ. ಅವರ ರಂಗಕಾಯದಲ್ಲಿ ಬದುಕು ಕಟ್ಟಿಕೊಂಡ ಹಲವರಲ್ಲಿ ನಾನೂ ಒಬ್ಬಳು’ ಎಂದು ಚಂದ್ರಮ್ಮ ತಿರಗಾರ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-44-15343671