
ಶ್ರದ್ಧಾಕೇಂದ್ರ ರಾಘವೇಂದ್ರಸ್ವಾಮಿ ಮಠ: ಆರಾಧನಾ ಮಹೋತ್ಸವಕ್ಕೆ ಭರದ ಸಿದ್ಧತೆ
ಬಸವಕಲ್ಯಾಣ: ನಗರದಲ್ಲಿರುವ ರಾಘವೇಂದ್ರ ಸ್ವಾಮೀಜಿಯವರ ದೇವಸ್ಥಾನವು ಅನೇಕರ ಶ್ರದ್ಧೆಯ ಕೇಂದ್ರವಾಗಿದ್ದು, ಈಚೆಗೆ ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಇದೀಗ ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿ ಪರಿಗಣಿತವಾಗಿದ್ದು, ಆ.29ರಿಂದ 31ರವರೆಗೆ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಲ್ಲಿ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ.
ಮಧ್ವಾಚಾರ್ಯರ ಅನುಯಾಯಿಯಾಗಿದ್ದ ರಾಯರ ಮೂಲ ಬೃಂದಾವನವು ಆಂಧ್ರಪ್ರದೇಶದ ತುಂಗಭದ್ರಾ ನದಿ ತೀರದಲ್ಲಿರುವ ಮಂತ್ರಾಲಯದಲ್ಲಿದೆ. ಇವರು ವೇದ, ಉಪನಿಷತ್ತು ಕುರಿತಾಗಿ ಅನೇಕ ಗ್ರಂಥಗಳನ್ನು ಬರೆದಿದ್ದು, ಸುಳಾದಿ ಗೀತೆಗಳನ್ನು ಕೂಡ ರಚಿಸಿದ್ದಾರೆ. ನಗರದಲ್ಲಿನ ಅವರ ದೇವಸ್ಥಾನದ ಸ್ಥಳದಲ್ಲಿ ಸಹ 50 ವರ್ಷಗಳ ಹಿಂದಿನಿಂದ ಆರಾಧನೆ, ಭಜನೆ ನಡೆಯುತ್ತಿದೆ.
ದೇಶಪಾಂಡೆ ಓಣಿಯಲ್ಲಿ ಈ ಭಕ್ತಿಯ ತಾಣವಿದೆ. ಸುತ್ತಲಿನಲ್ಲಿ ಆವರಣಗೋಡೆ ಹಾಗೂ ಪ್ರವೇಶಕ್ಕೆ ಒಂದೇ ಮಹಾದ್ವಾರವಿರುವ ಕಾರಣ ಒಂದೇ ದೊಡ್ಡ ವಾಡೆಯಂತೆ ಈ ಓಣಿ ಗೋಚರಿಸುತ್ತದೆ. ಪಶ್ಚಿಮಾಭಿಮುಖವಾದ ವಾಡೆಯ ಮಹಾದ್ವಾರದಿಂದ ಒಳಹೋದರೆ ಉತ್ತರಾಭಿಮುಖವಾದ ದೇವಸ್ಥಾನ ಎದುರಾಗುತ್ತದೆ. ಇದರ ಒಳ ಭಾಗದಲ್ಲಿ ಬೃಂದಾವನ ಮಾದರಿಯಲ್ಲಿ ಪೂರ್ವಾಭಿಮುಖವಾದ ಗರ್ಭಗೃಹವಿದೆ.
ಮುಖ್ಯವೆಂದರೆ, ದೇವಸ್ಥಾನದ ದಕ್ಷಿಣದ ಗೋಡೆಯಲ್ಲಿ 10 ಅಡಿ ಎತ್ತರದ ರಾಘವೇಂದ್ರ ಸ್ವಾಮೀಜಿಯವರ ಭಿತ್ತಿಚಿತ್ರವಿದೆ. ಇದರಲ್ಲಿನ ಸ್ವಾಮೀಜಿಯವರ ಪ್ರಸನ್ನ ಮುಖಭಾವ ಹಾಗೂ ಬಣ್ಣದ ಉತ್ತಮ ಸಂಯೋಜನೆಯಿಂದಾಗಿ ಈ ಚಿತ್ರ ಎಂಥವರನ್ನೂ ತನ್ನೆಡೆಗೆ ಸೆಳೆಯುತ್ತದೆ. ಇತರೆಡೆಯೂ ವಿವಿಧ ಚಿತ್ರಗಳಿವೆ. ದೇವಸ್ಥಾನದಲ್ಲಿ ಇಡೀ ವರ್ಷ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೂ, ಆರಾಧನಾ ಮಹೋತ್ಸವಕ್ಕೆ ಹೆಚ್ಚಿನ ಮಹತ್ವವಿದೆ.
ಕಾರ್ಯಕ್ರಮ: ಆ.29 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಸುಪ್ರಭಾತದ ಮಂಗಳಸ್ತೋತ್ರ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಲಂಕಾರ ಹಾಗೂ ನೈವೇದ್ಯ, ಭಜನೆ, ಸ್ವಸ್ತಿವಾಚನ, ಮಂಗಳಾರತಿ ನಡೆಯಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮೀಜಿ ಭಕ್ತ ಮಂಡಳಿ ವತಿಯಿಂದ ತಿಳಿಸಲಾಗಿದೆ.
ಆ.30ರಂದು ನಿತ್ಯದ ಧಾರ್ಮಿಕ ವಿಧಿ ವಿಧಾನಗಳ ಜೊತೆಯಲ್ಲಿ ಮಧ್ಯಾಹ್ನ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗುತ್ತದೆ. 31ರಂದು ಕೂಡ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ಮಧ್ಯಾಹ್ನ ವಾದ್ಯ ಮೇಳಗಳೊಂದಿಗೆ ರಾಯರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಬಳಿಕ ಪ್ರಸಾದ ವಿತರಿಸಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-33-1087326100