ಗೋಕರ್ಣ | ಅಳಿವೆ ದಾಖಲು ಆತಂಕ: ಅತಂತ್ರ ಸ್ಥಿತಿಯಲ್ಲಿ ತದಡಿ ಮೀನುಗಾರರು

ಗೋಕರ್ಣ | ಅಳಿವೆ ದಾಖಲು ಆತಂಕ: ಅತಂತ್ರ ಸ್ಥಿತಿಯಲ್ಲಿ ತದಡಿ ಮೀನುಗಾರರು

ಗೋಕರ್ಣ | ಅಳಿವೆ ದಾಖಲು ಆತಂಕ: ಅತಂತ್ರ ಸ್ಥಿತಿಯಲ್ಲಿ ತದಡಿ ಮೀನುಗಾರರು

ಗೋಕರ್ಣ: ಸಮೀಪದ ತದಡಿ ಬಂದರಿನಲ್ಲಿ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾಗಿ ತಿಂಗಳು ಸಮೀಪಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಮೀನು ಸಿಗುತ್ತಿಲ್ಲ ಎಂಬ ಕೊರಗು ಮೀನುಗಾರರನ್ನು ಕಾಡುತ್ತಿದೆ. ಇನ್ನೊಂದೆಡೆ ಅಳಿವೆಯಲ್ಲಿ ಹೂಳಿನಿಂದ ದೋಣಿಗಳು ಸಮುದ್ರದತ್ತ ಸಾಗಲು ಹಿಂಜರಿಯುವಂತಾಗಿದೆ.

ಜನವರಿಯಲ್ಲಿ ತದಡಿ ಬಂದರಿನ ಅಳಿವೆಯಲ್ಲಿ ಸುಮಾರು ₹2.65 ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲಾಗಿತ್ತು. ಆದರೆ, ಈಗಲೂ ಹೂಳು ತುಂಬಿಕೊಂಡಿದ್ದು, ಇದೇ ಕಾರಣದಿಂದ ಕಳೆದ ಎರಡು ವಾರದ ಅವಧಿಯಲ್ಲಿ ಎರಡು ದೋಣಿಗಳು ಅವಘಡಕ್ಕೆ ತುತ್ತಾಗಿವೆ ಎಂಬುದು ಮೀನುಗಾರರ ದೂರು.

‘ಹೂಳು ತೆರವುಗೊಳಿಸುವ ಗುತ್ತಿಗೆ ಪಡೆದಿದ್ದ ಕೇರಳ ಮೂಲದ ಸಂಸ್ಥೆಯು ಕಾಟಾಚಾರಕ್ಕೆ ಕಾಮಗಾರಿ ನಡೆಸಿರುವ ಶಂಕೆ ಇದೆ. ಅಳಿವೆಯಲ್ಲಿ ದೋಣಿ ಮುಳುಗಡೆಯಾಗಲು, ಹೂಳೆತ್ತುವ ಕಾಮಗಾರಿ ಸಮರ್ಪಕವಾಗಿ ನಡೆಯದಿರುವುದೇ ಕಾರಣ. ಹೂಳೆತ್ತುವ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಎದು ಆರಂಭದಲ್ಲೇ ಪ್ರತಿಭಟಿಸಿ, ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಮೀನುಗಾರರಲ್ಲಿ ಅಭದ್ರತೆಯ ಸ್ಥಿತಿ ಉಂಟಾಗಿದೆ’ ಎಂಬುದು ತದಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಅವರ ಆರೋಪ.

‘ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಾಗ ಪರ್ಸಿನ್ ದೋಣಿಗಳಿಗೆ ತಕ್ಕ ಮಟ್ಟದಲ್ಲಿ ಮೀನು ಸಿಕ್ಕಿದೆ. ಅವರು ಮೊದಲು ಬಂಗಡೆ ಬಲೆಯೊಂದಿಗೆ ಸಮುದ್ರಕ್ಕೆ ಇಳಿದಿದ್ದರು. ಆದರೆ ಮೀನು ಸಿಗದೇ, ತೋರಿ ಬಲೆ ಉಪಯೋಗಿಸುತ್ತಿದ್ದಾರೆ. ಆ ಬಲೆಯಲ್ಲಿ ಮೀನು ಸಿಗುತ್ತಿದ್ದು ಕೆಲವರಿಗೆ ಮಾತ್ರ ಲಾಭವಾಗಿದೆ. ಕೆಲವು ದಿನಗಳಿಂದ ಬಂಗಡೆಯಂತಹ ದುಬಾರಿ ಮೀನು ಸಿಗುತ್ತಿದೆ. ಆದರೆ ಅದೂ ನಿರೀಕ್ಷಿತ ಮಟ್ಟದಲ್ಲಿಲ್ಲ’ ಎಂಬುದು ಮೀನುಗಾರರ ಅಭಿಪ್ರಾಯ.

‘ಟ್ರಾಲರ್ ದೋಣಿಗಳ ಸ್ಥಿತಿ ಮಾತ್ರ ಹೇಳತೀರದಾಗಿದೆ. ರಭಸದ ಗಾಳಿ, ಇನ್ನಿತರ ಕಾರಣಗಳಿಂದ ನೀರಿಗೆ ಇಳಿದಿದ್ದೇ ತಡವಾಗಿದೆ. ಕಳೆದೊಂದು ವಾರದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ನೀರಿಗೆ ಇಳಿದ ದೋಣಿಗಳು ಹಿಂದಿರುತ್ತಿವೆ’ ಎಂದು ಸ್ಥಳಿಯ ಮೀನುಗಾರರು ಹೇಳಿದರು.

‘ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ, ಕಾಲ ಕಾಲಕ್ಕೆ ಎಲ್ಲಾ ಸೌಲಭ್ಯವನ್ನೂ ನೀಡಲಾಗುತ್ತಿದೆ. ಮೀನುಗಾರಿಕೆ ಇನ್ನೂ ವೇಗ ಪಡೆದಿಲ್ಲ. ಕಳೆದ ವರ್ಷವೂ ಸಹ ಹೀಗೆಯೇ ಆಗಿತ್ತು. ಪ್ರಾರಂಭದಲ್ಲಿ ಮೀನುಗಾರಿಕೆ ಇದೇ ರೀತಿ ಇತ್ತು. ಆಮೇಲೆ ಚೆನ್ನಾಗಿ ಆಗಿದೆ’ ಎಂದು ಸ್ಥಳೀಯ ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಲ್ಲೆಯ ಉಳಿದ ಬಂದರುಗಳಿಗೆ ಹೋಲಿಸಿದರೆ ತದಡಿ ಬಂದರು ತೀರಾ ಹಿಂದುಳಿದಿದೆ. ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. 1984 ನಂತರ ಬಂದರು ಯಾವುದೇ ಅಭಿವೃದ್ಧಿ ಹೊಂದಿಲ್ಲ. ಆವಾಗ ಡೆನ್ಮಾರ್ಕ್ ಕಂಪನಿ ಗುತ್ತಿಗೆ ಪಡೆದಿತ್ತು. ಅವರು ಮಾಡಿದ ಅಭಿವೃದ್ಧಿ ಬಿಟ್ಟರೆ ಮತ್ತೆ ಯಾವ ಸರ್ಕಾರವೂ ಅಭಿವೃದ್ಧಿಯ ಬಗ್ಗೆ ಶ್ರಮಿಸಿಲ್ಲ’ ಎಂದು ಮೀನುಗಾರರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹೇಶ ನಾಯ್ಕ ತದಡಿ ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-20-185428641

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ