
ಆಳವಾದ ಗುಂಡಿಗಳು, ಸವೆದುಹೋದ ಟಾರು... ಇದು ‘ಮುದ್ರಣಕಾಶಿ’ಯ ದುಃಸ್ಥಿತಿ
ಗದಗ: ಅಲ್ಲಲ್ಲಿ ಆಳವಾದ ಗುಂಡಿಗಳು, ಸಂಪೂರ್ಣ ಸವೆದುಹೋದ ಟಾರು, ಕೊಂಚ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಸ್ಥಿತಿ, ಇದು ನಗರದ ಪ್ರಮುಖ ರಸ್ತೆಗಳ ದುಃಸ್ಥಿತಿ.
ಗದಗ ಜಿಲ್ಲೆ ರಚನೆಯಾಗಿ 30 ವರ್ಷಗಳ ಪೂರ್ಣಗೊಂಡ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಆದರೆ, ಜಿಲ್ಲಾ ಕೇಂದ್ರವಾದ ಗದಗ ನಗರದ ಪ್ರಮುಖ ರಸ್ತೆಗಳೇ ಅಸ್ತಿಪಂಜರದಂತಾಗಿವೆ. ಇದು ವಾಹನ ಸವಾರರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಪ್ರಮುಖ ರಸ್ತೆಯು ರೋಟರಿ ವೃತ್ತ ಬಳಿ ಗುಂಡಿಗಳಿಂದ ಆವೃತವಾಗಿದೆ. ಈಚೆಗೆ, ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಗರಸಿನಿಂದ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಮಳೆಗೆ ಗರಸು ಕೊಚ್ಚಿಹೋಗಿದ್ದು, ಗುಂಡಿಗಳು ಮತ್ತೆ ಬಾಯ್ತೆರೆದಿವೆ. ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸಲು ಸವಾರರು ಪರದಾಡುವಂತಾಗಿದೆ.
ಹಳೇ ಡಿ.ಸಿ. ಕಚೇರಿ ವೃತ್ತದ ಬಳಿ ರಸ್ತೆಯ ಪಳೆಯುಳಿಕೆಯಷ್ಟೇ ಕಾಣಸಿಗುತ್ತದೆ. ಟಾರು ಮಾಯವಾಗಿ, ಒಳಗಿನ ಜಲ್ಲಿಕಲ್ಲುಗಳು ಮೇಲೇಳುತ್ತಿವೆ. ನಗರಕ್ಕೆ ಹೊಸದಾಗಿ ಬಂದವರು, ಇಲ್ಲವೇ ಧಾವಂತದಲ್ಲಿ ವಾಹನದಲ್ಲಿ ಸಾಗುತ್ತಿರುವವರು ಹದಗೆಟ್ಟ ರಸ್ತೆಯನ್ನು ಗಮನಿಸದೆ, ತಕ್ಷಣಕ್ಕೆ ಬ್ರೇಕ್ ಹಾಕಿದರೆ ಅಪಘಾತ ಕಟ್ಟಿಟ್ಟಬುತ್ತಿ ಎಂಬಂತಾಗಿದೆ.
ಇಲ್ಲಿಂದ ಗದುಗಿನ ಪ್ರಮುಖ ಆಕರ್ಷಣೆಯಾದ ಭೀಷ್ಮ ಕೆರೆ ಮುಂದಿನ ರಸ್ತೆಯಲ್ಲೂ ಗುಂಡಿಗಳು ಹೇರಳವಾಗಿವೆ. ಕೆರೆ ಕೊನೆಯಾಗುವಲ್ಲಿ ಟಾರು, ಜಲ್ಲಿಕಲ್ಲುಗಳ ಪುಡಿ ರಸ್ತೆಗೆ ಹರಡಿದ್ದು, ಬೈಕ್ ಸವಾರರು ಆಯತಪ್ಪಿ ಬೀಳುವ ಭಯದಲ್ಲೇ ಸಂಚರಿಸುವಂತಾಗಿದೆ. ಅಲ್ಲಲ್ಲಿ ಟಾರಿಗೆ ತೇಪೆ ಹಾಕಲಾಗಿದ್ದು, ಅದರಿಂದ ಉಬ್ಬು–ತಗ್ಗು ಸೃಷ್ಟಿಯಾಗಿದೆ.
ಮಹಾತ್ಮ ಗಾಂಧಿ ರಸ್ತೆಯಿಂದ ನಗರಸಭೆ ಮಾರ್ಗವಾಗಿ ಝೇಂಡಾ ವೃತ್ತ ತಲುಪುವ ಸಿ.ಸಿ ರಸ್ತೆಯೂ ಬಹುತೇಕ ಕಡೆಗಳಲ್ಲಿ ಬಿರುಕುಬಿಟ್ಟಿದೆ. ಸಮೀಪದ ರೈಲ್ವೆ ಕೆಳಸೇತುವೆಯ ರಸ್ತೆ ಸ್ಥಿತಿಯೂ ಉತ್ತಮವಾಗಿಲ್ಲ. ನಗರದ ಒಳರಸ್ತೆಗಳ ಸ್ಥಿತಿಯೂ ಹೀನಾಯವಾಗಿದ್ದು, ಎಷ್ಟೋ ಕಡೆ ರಸ್ತೆಗಳನ್ನು ನಿರ್ಮಿಸಿಲ್ಲ, ರಸ್ತೆಗಳಿದ್ದ ಕುರುಹು ಸಹ ಕಾಣುವುದಿಲ್ಲ.
ಗ್ರಾಮೀಣ ರಸ್ತೆಗಳ ಸುಧಾರಣೆಗೆ ಆಗ್ರಹ
‘ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳೂ ಹಾಳಾಗಿವೆ. ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ, ಹೊಲಗಳಿಗೆ ತೆರಳುವ ರಸ್ತೆಗಳು ತಗ್ಗು–ಗುಂಡಿಗಳಿಂದ ಕೂಡಿವೆ. ರಸ್ತೆ ಕಾಣದಂತೆ ಜಾಲಿಗಿಡಗಳು ಬೆಳೆದಿವೆ. ಹದಗೆಟ್ಟ ಹಾಗೂ ಮಣ್ಣಿನಿಂದ ಕೂಡಿದ ರಸ್ತೆಗಳಲ್ಲೇ ರೈತರು ಹೊಲಕ್ಕೆ ತೆರಳಬೇಕಿದೆ ಹಾಗೂ ಕೃಷಿ ಉತ್ಪನ್ನಗಳು ಪಟ್ಟಣಕ್ಕೆ ಸಾಗಿಸಬೇಕಿದೆ. ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ತುರ್ತಾಗಿ ಆಗಬೇಕು. ತಹಶೀಲ್ದಾರ್ ನೇತೃತ್ವದಲ್ಲಿ ಹೊಲದ ರಸ್ತೆ ನಿರ್ಮಿಸಬೇಕೆಂಬ ಸರ್ಕಾರ ಸುತ್ತೋಲೆಯನ್ನು ಪಾಲಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಯನಗೌಡ್ರ ಆಗ್ರಹಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-23-1639073443