
ಅಸಮಾಧಾನಿತರಿಗೆ ಅವಕಾಶ ಕಲ್ಪಿಸಲು ಕೆಲ ಸಚಿವರಿಗೆ ಖಾತೆ ಹಂಚಿಕೆಗೆ ಮುನ್ನವೇ ಕೊಕ್?
ಬೆಂಗಳೂರು: ಸಚಿವ ಸ್ಥಾನಕ್ಕೆ ಸಿಗದ ಕಾರಣಕ್ಕೆ ಮುನಿಸಿಕೊಂಡಿರುವ ಶಾಸಕರ ಮನವೊಲಿಕೆಗೆ ಮುಂದಾಗಿರುವ ಕಾಂಗ್ರೆಸ್ ನಾಯಕರು, ಹೊಸ ಸಚಿವರಿಗೆ ಖಾತೆ ಹಂಚಿಕೆಗೆ ಮುನ್ನವೇ ಕೆಲವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಕಲ್ಪಿಸುವ ಆಲೋಚನೆಯಲ್ಲಿದ್ದಾರೆ.
ಶಾಸಕರ ಜತೆಗೆ, ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯ ಸಿದ್ದರಾಮಯ್ಯ ಅವರೂ ತಮ್ಮ ಗಮನಕ್ಕೆ ಬಾರದೆ ಕೆಲವರನ್ನು ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಗೆ ಸೇರ್ಪಡೆ ಮಾಡಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದಾರೆ. ಅವರ ನಿವಾಸಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿದ ಶಿವಕುಮಾರ್ ಅವರು, ಸಚಿವರ ಬದಲಾವಣೆ ಹಾಗೂ ಖಾತೆ ಹಂಚಿಕೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ಅದಾದ ಬಳಿಕವಷ್ಟೇ, ಪಕ್ಷದ ವರಿಷ್ಠರ ಜತೆ ಶಿವಕುಮಾರ್ ಅವರು ಚರ್ಚೆ ನಡೆಸಿ, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ಶಿವಕುಮಾರ್ ಅವರು ಜೂನ್ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರ ಜತೆಗೇ 13 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವ ಸ್ಥಾನಕ್ಕೆ ಪರಿಗಣಿಸಿದ್ದ 20 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಏಕೈಕ ಮಹಿಳೆ ಗಾಯತ್ರಿ ಶಾಂತೇಗೌಡ (ವಿಧಾನಪರಿಷತ್ ಸದಸ್ಯೆ) ಅವರನ್ನು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿತ್ತು.
ಸಂಪುಟ ವಿಸ್ತರಣೆ ಬೆನ್ನಿಗೆ ಗದಗ ಶಾಸಕ ಎಚ್.ಕೆ.ಪಾಟೀಲ, ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್ ಸೇರಿದಂತೆ 15ಕ್ಕೂ ಹೆಚ್ಚು ಹಿರಿಯ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಶಿವಕುಮಾರ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹಲವು ಶಾಸಕರ ಮನೆಗೇ ತೆರಳಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೂ, ಹಲವರು ಸಚಿವ ಸ್ಥಾನಕ್ಕೆ ಬಿಗಿಪಟ್ಟು ಮುಂದುವರಿಸಿದ್ದಾರೆ.
‘ಸಚಿವರಾದ ಕೆ.ಎಚ್. ಮುನಿಯಪ್ಪ ಅಥವಾ ಬಿ. ನಾಗೇಂದ್ರ ಹಾಗೂ ಎಚ್.ಸಿ. ಬಾಲಕೃಷ್ಣ ಅವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆದಿದೆ. ಹಾಗಾದಲ್ಲಿ, ಮುನಿಯಪ್ಪ ಅವರ ಪುತ್ರಿ ಎಂ. ರೂಪಕಲಾ, ಎಂ.ಕೃಷ್ಣಪ್ಪ ಹಾಗೂ ಸಿದ್ದರಾಮಯ್ಯ ಶಿಫಾರಸು ಮಾಡಿದ್ದ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಅವರಿಗೆ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಮೂಲಗಳ ಹೇಳಿವೆ.
ಸಚಿವ ಸ್ಥಾನಕ್ಕೆ ಕೃಷ್ಣಪ್ಪ ಬಿಗಿಪಟ್ಟು
‘ಸಚಿವ ಸ್ಥಾನದ ಬೇಡಿಕೆಯಿಂದ ಹಿಂದೆ ಸರಿಯುವ, ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ. ಹೇಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ’ ಎಂದು ಶಾಸಕ ಎಂ. ಕೃಷ್ಣಪ್ಪ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. 2023ರ ಚುನಾವಣೆಯಲ್ಲಿ ಪುತ್ರ ಪ್ರಿಯಕೃಷ್ಣ ಸೇರಿ ಇಬ್ಬರೂ ಆಯ್ಕೆ ಯಾಗಿದ್ದೇವೆ. ಹಿಂದೆ ಒಂದೂವರೆ ವರ್ಷ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೆ. ಸಿದ್ದರಾಮಯ್ಯ ಅವರೇ ಸದನದಲ್ಲಿ ನನ್ನ ಕಾರ್ಯ ಹೊಗಳಿದ್ದರು. ಸಚಿವ ಸ್ಥಾನದ ಬೇಡಿಕೆಯ ನಿಲುವು ಬದಲಿಸುವುದಿಲ್ಲ’ ಎಂದರು.
‘ಹಿರಿಯರಿಗೆ ಜವಾಬ್ದಾರಿ ನೀಡಬೇಕಿದೆ’
‘ಕೃಷ್ಣಪ್ಪ ಅವರು ಸಚಿವ ಸ್ಥಾನ ಬೇಕೇಬೇಕು ಎಂದು ಕೇಳುವುದರಲ್ಲಿ ತಪ್ಪೇನಿಲ್ಲ, ಕೆಲವು ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಬೇಕಾಗುತ್ತದೆ. ಎಲ್ಲ ಸಮಸ್ಯೆಯನ್ನೂ ಬಗೆಹರಿಸುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಯಾವ ಶಾಸಕರಿಗೂ ಅಸಮಾಧಾನ ಇಲ್ಲ. ಮಹಿಳೆಯೊಬ್ಬರು ಶೀಘ್ರ ಪ್ರಮಣವಚನ ಸ್ವೀಕರಿಸುವರು. ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸುವ ಅಗತ್ಯವಿಲ್ಲ’ ಎಂದರು. ‘ಸಂಪುಟದಲ್ಲಿ ಸಣ್ಣ ಸರ್ಜರಿಯಾಗುತ್ತದೆ ಎಂಬ ಚರ್ಚೆ ಇದೆಯಲ್ಲ ಎಂಬ ಪ್ರಶ್ನೆಗೆ ‘ಸದ್ಯಕ್ಕೆ ಮಾಧ್ಯಮಗಳಿಗೆ ಸರ್ಜರಿ ಮಾಡಬೇಕು ಎಂದುಕೊಂಡಿದ್ದೇವೆ’ ಎಂದು ನಗುತ್ತಲೇ ಹೇಳಿದರು.
ಮಗಳಿಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರ. ಖಾತೆ ಬದಲಾವಣೆಗೆ ಮನವಿ ಮಾಡಿದ್ದೇನೆ. ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದಾರೆ
ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-51-342355457