
ಕರ್ನಾಟಕ ಸಂಪುಟ ವಿಸ್ತರಣೆ: ದಿಲ್ಲಿಯಲ್ಲಿ ಹೈವೋಲ್ಟೇಜ್ ಸಭೆ ಅಂತ್ಯ, ಇವತ್ತಾದರೂ ಪ್ರಕಟವಾಗುತ್ತಾ ಸಚಿವರ ಪಟ್ಟಿ?
ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಮಹತ್ವದ ಹೈವೋಲ್ಟೇಜ್ ಸಭೆಗಳು ಅಂತ್ಯಗೊಂಡಿದೆ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್‌ನ ಅಂತಿಮ ಪಟ್ಟಿಗಾಗಿ ಕಾಯಲಾಗುತ್ತಿದೆ. ಇಂದು ಅಂತಿಮ ಪಟ್ಟಿ ಬಂದರೆ ಸಂಜೆ 4 ಗಂಟೆ ವೇಳೆಗೆ ಪ್ರಮಾಣವಚನ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೆ ಇಡೀ ದಿನವನ್ನು ಕಾಯ್ದಿರಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ ಸಿ ವೇಣುಗೋಪಾಲ್, ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಸೇರಿದಂತೆ ಹಲವು ನಾಯಕರ ನಡುವಿನ ಸಭೆಯಲ್ಲಿ ಯಾರಿಗೆ ಮಂತ್ರಿಪಟ್ಟವನ್ನ ನೀಡಬೇಕು ಎಂಬ ಕುರಿತು ಚರ್ಚೆ ನಡೆದಿದ್ದು, ಅಲ್ಲದೇ ಖಾತೆ ಹಂಚಿಕೆ ಹಾಗೂ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಸೇರಿದಂತೆ ಹಲವು ಪ್ರಮುಖ ವಿಷಯಗಳು ಪ್ರಸ್ತಾಪಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಸಭೆ ಅಂತ್ಯಗೊಂಡಿದ್ದು, ಹೊಸ ಸಚಿವರ ಪಟ್ಟಿಯ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಇವತ್ತಾದರೂ ಅಂತಿಮ ಪಟ್ಟಿ ಪ್ರಕಟವಾಗುತ್ತದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.
ಇನ್ನೂ ರಾಜ್ಯ ಸಂಪುಟ ವಿಸ್ತರಣೆಯ ಮೂಲಕ ಯಾರಿಗೆ ಸಚಿವ ಸ್ಥಾನ ಸಿಗಲಿದೆ, ಯಾರಿಗೆ ನಿರಾಸೆಯಾಗಲಿದೆ ಎಂಬ ಚರ್ಚೆಗಳು ಜೋರಾಗಿವೆ. ಹಲವು ಶಾಸಕರ ಹೆಸರುಗಳು ಕೇಳಿಬರುತ್ತಿದ್ದರೂ, ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದ ಬಳಿಕವೇ ಪ್ರಕಟಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಪ್ರತಿನಿಧಿತ್ವ, ಜಾತಿ ಸಮೀಕರಣ ಹಾಗೂ ಪಕ್ಷದ ಸಂಘಟನೆಗೆ ನೀಡಿದ ಕೊಡುಗೆಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಇದೇ ಕಾರಣದಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸದ್ಯ ಅಧಿಕೃತ ಘೋಷಣೆ ಹೊರಬರದ ಹಿನ್ನೆಲೆಯಲ್ಲಿ ಸಚಿವ ಸ್ಥಾನಾಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ದೆಹಲಿಯ ಬೆಳವಣಿಗೆಗಳತ್ತ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ನಾಯಕರು ರಾಜ್ಯಕ್ಕೆ ಆಗಮಿಸಿ ಪಟ್ಟಿಯನ್ನು ನೀಡುತ್ತಾರೆಯೇ ಅಥವಾ ದೆಹಲಿಯಿಂದಲೇ ಅಂತಿಮ ಪಟ್ಟಿ ಕಳುಹಿಸಲಾಗುತ್ತದೆಯೇ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.
ಈ 10 ಜನರಿಗೆ ಮಂತ್ರಿ ಭಾಗ್ಯ
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹಲವು ಸುತ್ತಿನ ಮಾತುಕತೆ ನಡೆಸಿದ್ದು, 10 ಜನ ಹಿರಿಯ ಶಾಸಕರಿಗೆ ಮಂತ್ರಿ ಭಾಗ್ಯ ನೀಡಲು ಮುಂದಾಗಿದೆ. ಹೈಕಮಾಂಡ್ ಅಂತಿಮಗೊಳಿಸಿದ ಸಂಭಾವ್ಯ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ರುದ್ರಪ್ಪ ಲಮಾಣಿ, ಎ.ಎಸ್. ಪೊನ್ನಣ್ಣ, ಟಿ. ರಘುಮೂರ್ತಿ, ಅನ್ನಪೂರ್ಣ ತುಕಾರಾಂ, ಕೆ.ಎಸ್. ಬಸವಂತಪ್ಪ ಹಾಗೂ ಶರತ್ ಬಚ್ಚೇಗೌಡ ಅವರ ಹೆಸರುಗಳು ಕೇಳಿಬರುತ್ತಿವೆ.