ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ

ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ

ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಭೀತಿ ನಡುವೆ ವರ್ಷದಿಂದ ವರ್ಷಕ್ಕೆ ಬೆಳೆ ವಿಸ್ತಾರಗೊಳ್ಳುತ್ತಿದೆ. ಸರ್ಕಾರವೇ ಗುಟ್ಕಾ ನಿಷೇಧಕ್ಕೆ ಮುಂದಾಗಿದೆ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಾದಗಳ ನಡುವೆ ಅಡಿಕೆ ಧಾರಣೆ ಕುಸಿತ ಕಂಡಿದೆ.

ಎಲೆಚುಕ್ಕಿ ರೋಗ, ಹಳದಿ ಎಲೆ ರೋಗಗಳಿಂದ ಮಲೆನಾಡಿನಲ್ಲಿ ಅಡಿಕೆ ಬೆಳೆ ಈಗಾಗಲೇ ಅವನತಿಯ ಹಾದಿ ಹಿಡಿದಿದೆ. ಮಲೆನಾಡಿನಲ್ಲಿ ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಅಡಿಕೆ ಬೆಳೆ ಹವಾಮಾನ ವೈಪರೀತ್ಯದಿಂದ ಹಾಳಾಗಿದೆ. ತೋಟಗಳಲ್ಲಿ ಅಡಿಕೆ ಮರಗಳು ಮಾತ್ರ ಉಳಿದಿದ್ದು, ಫಸಲು ಮಾತ್ರ ಇಲ್ಲವಾಗಿದೆ.

ಇದರಿಂದ ಅಡಿಕೆ ತೋಟಗಳನ್ನು ಬಿಟ್ಟು ಊರನ್ನೇ ಖಾಲಿ ಮಾಡಿರುವ ಉದಾಹರಣೆಗಳಿವೆ. ಇದೆಲ್ಲದರ ನಡುವೆ ಅಲ್ಲಲ್ಲಿ ಉಳಿದಿರುವ ಅಡಿಕೆ ಬೆಳೆಗಾರರು ಕೂಡ ಈಗ ಬೆಲೆ ಕುಸಿತದ ಭೀತಿಯಲ್ಲಿದ್ದಾರೆ. ಇನ್ನೊಂದೆಡೆ ಬಯಲು ಸೀಮೆಯಲ್ಲಿ ಅಡಿಕೆ ಬೆಳೆ ದಿನದಿಂದ ದಿನಕ್ಕೆ ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದೆ.

ರಾಗಿ, ಜೋಳದ ಬೆಳೆಯಿಂದ ಲಾಭ ಕಾಣದ ರೈತರು ಅಡಿಕೆ ಬೆಳೆಯತ್ತ ಹೆಚ್ಚು ಒಲವು ತೋರಿಸಿದ್ದಾರೆ. ತರೀಕೆರೆ, ಅಜ್ಜಂಪುರ, ಕಡೂರು ತಾಲ್ಲೂಕಿನಲ್ಲಿ ಅಡಿಕೆ ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬಯಲು ಸೀಮೆಯಲ್ಲಿ ರೋಗ ಕಾಟ ಕಡಿಮೆಯಿದ್ದು, ರೈತರ ಆರ್ಥಿಕ ಸ್ಥಿತಿ ಕೂಡ ಸುಧಾರಣೆಯಾಗುತ್ತಿದೆ.

ಗುಟ್ಕಾ ನಿಷೇಧ ಮಾಡಿದರೆ ಈ ಆರ್ಥಿಕ ಮುನ್ನಡೆಗೆ ಹೊಡೆತ ಬೀಳಲಿದೆ ಎಂಬ ಆತಂಕದ ನಡುವೆ ಈಗ ಸರ್ಕಾರ ಗುಟ್ಕಾ ನಿಷೇಧದ ನಿರ್ಧಾರ ಮಾಡಿದೆ. ಬೆಳೆಗಾರರಿಂದ ಆಕ್ಷೇಪ ವ್ಯಕ್ತವಾದ ಬಳಿಕ ಆದೇಶ ಹಿಂಪಡೆಯುವುದಾಗಿ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಬೆಳೆಯುವ ಅಡಿಕೆ ಬಹುತೇಕ ಹೊರ ರಾಜ್ಯಗಳಿಗೆ ಹೋಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದರೂ ತೊಂದರೆಯಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಈ ಬೆಳವಣಿಗೆಗಳ ಬಳಿಕ ಅಡಿಕೆ ಧಾರಣೆ ಸಾಕಷ್ಟು ಕುಸಿತವಾಗಿದೆ. ಕೆಂಪು ಅಡಿಕೆ ಧಾರಣೆ ಪ್ರತಿ ಕ್ವಿಂಟಾಲಿಗೆ ₹3 ಸಾವಿರ ಕಡಿಮೆಯಾಗಿದೆ. ಇದು ಬೆಳೆಗಾರರಲ್ಲಿ ಮತ್ತು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.

ಪೂರಕ ಮಾಹಿತಿ: ಸತೀಶ್ ಜೈನ್, ರವಿ ಕೆಳಂಗಡಿ, ಕೆ.ಎನ್. ರಾಘವೇಂದ್ರ, ಕೆ. ನಾಗರಾಜ್, ಕೆ.ವಿ. ನಾಗರಾಜ್, ಎನ್. ಸೋಮಶೇಖರ್

‘ನಿಕೋಟಿನ್ ನಿಷೇಧಿಸಿ, ಅಡಿಕೆ ಬೆಳೆಗಾರರನ್ನು ಉಳಿಸಿ’

ಶೃಂಗೇರಿ: ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕ್ಷೇತ್ರ ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ಹೇಳಿದರು.

ಮದ್ಯಪಾನ, ಸಿಗರೇಟ್ ಮತ್ತು ಗುಟ್ಕಾಕ್ಕೆ ಹಾಕುವ ನಿಕೋಟಿನ್‌ ನಿಷೇಧ ಮಾಡಬೇಕು. ಇದರಿಂದ ಲಿವರ್, ಕರಳು, ಶ್ವಾಸಕೋಶಕ್ಕೆ ಹಾನಿಯಾಗಲಿದೆ. ಆದ್ದರಿಂದ ಅದನ್ನು ನಿಷೇಧ ಮಾಡಬೇಕು. ಅಡಿಕೆ ತಿನ್ನುವುದರಿಂದ ಯಾವುದೇ ಪ್ರಾಣ ಹಾನಿಯಾಗುವುದಿಲ್ಲ ಎಂದರು. ಮಲೆನಾಡಿನಲ್ಲಿ ಈಗಾಗಲೇ ಅಡಿಕೆಗೆ ಹಳದಿ ಎಲೆ ರೋಗ ಮತ್ತು ಎಲೆಚುಕ್ಕಿ ರೋಗ ವ್ಯಾಪಿಸಿರುವುದರಿಂದ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಮಾರಕ ಅರಣ್ಯ ಕಾಯ್ದೆಗಳಿಂದ ರೈತರು ಆತಂಕದಲ್ಲಿದ್ದಾರೆ. ಆದರಿಂದ ಅಲ್ಪಸ್ವಲ್ಪ ಉಳಿದ ಅಡಿಕೆ ಬೆಳೆಗಳಿಗೆ ಸರ್ಕಾರ ಉತ್ತಮ ಬೆಲೆ ನೀಡಿ ರೈತರನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಅಡಿಕೆ ಬೆಲೆ ಮೇಲೆ ಪರಿಣಾಮ ಬೀರದು

ನರಸಿಂಹರಾಜಪುರ: ಪ್ರಸ್ತುತ ಗುಟ್ಕಾ ನಿಷೇಧ ಬಗ್ಗೆ ಬಹು ಚರ್ಚಿತವಾಗುತ್ತಿರುವ ವಿಷಯವಾಗಿದೆ. ಗುಟ್ಕಾ ನಿಷೇಧವಾದರೆ ಅಡಿಕೆ ಬೆಲೆಯ ಮೇಲೆ ಪರಿಣಾಮ ಬೀರದು ಎಂಬುದು ಬಹುತೇಕ ಬೆಳೆಗಾರರ ಅಭಿಪ್ರಾಯ.

ತಾಲ್ಲೂಕಿನ ವ್ಯಾಪ್ತಿಯಲ್ಲಿ 7,994 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಮತ್ತು ರಾಸಾಯನಿಕಯುಕ್ತ ಗುಟ್ಕಾ ಸೇರಿದಾಗ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಹೊರತು ಕೇವಲ ಅಡಿಕೆ ಸೇವನೆಯಿಂದ ಏನು ಆಗುವುದಿಲ್ಲ ಎಂಬುದು ರೈತರ ಅಭಿಪ್ರಾಯ.

ಕಳಸ: ಎರಡು ದಶಕದಿಂದಲೂ ಗುಟ್ಕಾ ನಿಷೇಧದ ಗುಮ್ಮ ಅಡಿಕೆ ಬೆಳೆಗಾರರನ್ನು ಕಂಗೆಡಿಸುತ್ತಲೇ ಇದೆ. ಪ್ರತಿ ಬಾರಿ ಅಡಿಕೆ ಧಾರಣೆ ಏರುಮುಖದಲ್ಲಿ ಇರುವಾಗಲೇ ಈ ನಿಷೇಧದ ಗುಮ್ಮ ಮಾರುಕಟ್ಟೆಯಲ್ಲಿ ತನ್ನ ಪ್ರಭಾವ ತೋರುತ್ತದೆ. ಆದರೆ, ವಾಸ್ತವದಲ್ಲಿ ಗುಟ್ಕಾ ನಿಷೇಧದ ಅಪಾಯದ ನಡುವೆಯೂ ಅಡಿಕೆ ಬೆಳೆ ಪ್ರದೇಶ ವಿಸ್ತಾರವಾಗುತ್ತಲೇ ಇದೆ. 2 ವಾರದ ಹಿಂದೆ ಗುಟ್ಕಾ ನಿಷೇಧದ ಪ್ರಕಟಣೆ ಹೊರಟ ಕೂಡಲೇ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಕೆಂಪು ಅಡಿಕೆಯ ಧಾರಣೆ ಪ್ರತಿ ಕ್ವಿಂಟಲ್‌ಗೆ ₹3 ಸಾವಿರ ಕಡಿಮೆಯಾಗಿದೆ. ಜತೆಗೆ ಬೆಳೆಗಾರರಲ್ಲಿ ಮತ್ತು ವ್ಯಾಪಾರಿಗಳಲ್ಲಿ ಅಡಿಕೆ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.

ಈಗಾಗಲೇ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಅನಿಶ್ಚಿತತೆ ಮೂಡಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಅಡಿಕೆ ನಿಷೇಧದ ಕೂಗು ಬಲವಾಗಿದೆ. ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಕಾಫಿ ಮತ್ತು ಕಾಳುಮೆಣಸು ಬೆಳೆಯುವ ಪ್ರಯತ್ನ ಹೆಚ್ಚಾಗಿದೆ.

ಈಗಾಗಲೇ ಲಕ್ಷಗಟ್ಟಲೆ ಕಾಫಿ, ಮೆಣಸಿನ ಗಿಡಗಳನ್ನು ನಾಟಿ ಮಾಡಲಾಗುತ್ತಿದೆ. ವಿಪರ್ಯಾಸ ಎಂದರೆ ಗುಟ್ಕಾ ನಿಷೇಧದ ಭೀತಿಯಿದ್ದರೂ ಅಡಿಕೆ ಸಸಿಗಳು ಯಾವುದೇ ನರ್ಸರಿಯಲ್ಲಿ ಸಿಗುತ್ತಿಲ್ಲ. ಅಷ್ಟರಮಟ್ಟಿಗೆ ಅಡಿಕೆ ಸಸಿಗೆ ಈಗಲೂ ಬೇಡಿಕೆ ಇದೆ.

ಭೀತಿಯಲ್ಲಿ ಬಯಲು ಸೀಮೆ ರೈತರು

ಕಡೂರು: ಗುಟ್ಕಾ ನಿಷೇಧದ ಭೀತಿಯಿಂದಾಗಿ ಅಡಿಕೆ ಧಾರಣೆ ಯಾವುದೇ ಆತಂಕ ಎದುರಿಸುವ ಸ್ಥಿತಿ ಇಲ್ಲವಾಗಿದ್ದರೂ, ಮುಂದಿನ ದಿನಗಳಲ್ಲಿ ಧಾರಣೆ ಕುಸಿದರೆ ಏನು ಮಾಡುವುದು ಎನ್ನುವ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ ಮದಗದಕೆರೆ ಮತ್ತು ಅಯ್ಯನಕೆರೆಗಳು ಹಾಗೂ ಅವುಗಳ ಸರಣಿ ಕೆರೆಗಳನ್ನು ಆಶ್ರಯಿಸಿ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಒಂದೆಡೆ ವರುಣನ ಅವಕೃಪೆಯಿಂದ ಕೆರೆಗಳು ತುಂಬದೇ ಅಡಿಕೆ ತೋಟಗಳು ಒಣಗುವ ಸ್ಥಿತಿ ಉದ್ಭವಿಸುತ್ತಿದ್ದರೆ, ಇನ್ನೊಂದಡೆ ಸರ್ಕಾರ ಗುಟ್ಕಾ ನಿಷೇಧ ಮಾಡಿದರೆ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ.

ತರೀಕೆರೆ: ಇತ್ತೀಚೆಗೆ ಸರ್ಕಾರ ಹೊರಡಿಸುವ ತಂಬಾಕು ಮತ್ತು ಗುಟ್ಕಾ ನಿಷೇಧದ ಆದೇಶಗಳು ಹಾಗೂ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ) ತಂದಿರುವ ಪ್ಯಾಕೇಜಿಂಗ್ ನಿಯಮಗಳ ಬದಲಾವಣೆಗಳಿಂದ ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ.

ಇದರಿಂದ ತಾಲ್ಲೂಕಿನಲ್ಲಿ ಬಹುಪಾಲು ರೈತರು ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಿಂದಲೇ ತಮ್ಮ ಜೀವನ ಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ. ಗುಟ್ಕಾ ನಿಷೇದವಾದರೆ ತಾಲ್ಲೂಕಿನ ಸಾವಿರಾರು ರೈತರು ಬದುಕು ಬೀದಿಗೆ ಬೀಳಲಿದೆ.

‘ಗುಟ್ಕಾ ನಿಷೇಧದ ಆದೇಶಗಳು ಉದ್ಯಮದ ಸುಧಾರಣೆಗೆ ಹೊರತು, ಅಡಿಕೆ ಕೃಷಿಯನ್ನು ಮುಗಿಸುವುದಕ್ಕೆ ಅಲ್ಲ. ಮಾರುಕಟ್ಟೆಯಲ್ಲಿ ಕೃತಕ ಆತಂಕ ಸೃಷ್ಟಿಸಿ ಕಡಿಮೆ ದರಕ್ಕೆ ಅಡಿಕೆ ಖರೀದಿಸಲು ಯತ್ನಿಸುವ ದಲ್ಲಾಳಿಗಳ ವದಂತಿಗಳಿಗೆ ಬೆಳೆಗಾರರು ಕಿವಿಗೊಡಬಾರದು. ಅಡಿಕೆಯ ಮೂಲ ಬೇಡಿಕೆ ಶಕ್ತಿಯುತವಾಗಿದ್ದು, ಬೆಳೆಗಾರರು ಧೈರ್ಯವಾಗಿ ಇರಬಹುದು’ ಎಂದು ಎಪಿಎಂಸಿ ಮಾಜಿ ಸದಸ್ಯ ಟಿ.ಆರ್. ಶ್ರೀಧರ್ ತಿಳಿಸಿದ್ದಾರೆ.

ಮಾರುಕಟ್ಟೆ ಮೇಲೆ ಕರಿನೆರಳು

ಬಾಳೆಹೊನ್ನೂರು: ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿ ಹೊರಡಿಸಿದ ಆದೇಶದಿಂದ ಅಡಿಕೆ ಮಾರುಕಟ್ಟೆ ತಲ್ಲಣಗೊಂಡಿದ್ದು, ವಾರದಲ್ಲೇ ಹಸ, ಬೆಟ್ಟೆಗೆ ₹6 ಸಾವಿರದಷ್ಟು ಧಾರಣಿ ಕುಸಿದಿದ್ದು ಬೆಳೆಗಾರರು ಆತಂಕದಲ್ಲಿದ್ದಾರೆ. ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದಂತೆ ಬೆಳೆಯ ಪ್ರದೇಶ 18 ಜಿಲ್ಲೆಗಳಿಗೆ ವ್ಯಾಪಿಸಿದ್ದು, ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಅಡಿಕೆ ವ್ಯವಹಾರದಿಂದ ವಾರ್ಷಿಕ ₹2 ಸಾವಿರ ಕೋಟಿಗೂ ಅಧಿಕ ತೆರಿಗೆ ಸರ್ಕಾರದ ಖಜಾನೆಗೆ ಸೇರುತ್ತಿದೆ. ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದಿಂದಾಗಿ ಶೇ 50ಕ್ಕೂ ಅಧಿಕ ಫಸಲು, ಬೆಳೆ ನಾಶವಾಗಿ ಆದಾಯ ಕುಸಿತಗೊಂಡಿದೆ. ಇದ್ದ ತೋಟದಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ವೇಳೇಯಲ್ಲೇ ಗುಟ್ಕಾ ನಿಷೇದ ಬೆಳೆಗಾರರನ್ನು ಚಿಂತೆಗೆ ದೂಡಿದೆ. ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಶೇ 50ಕ್ಕೂ ಅಧಿಕ ಫಸಲು ನಷ್ಟವಾದರೂ ಸರ್ಕಾರ ಸ್ಪಂದಿಸಿಲ್ಲ ಎಂಬ ನೋವು ಬೆಳೆಗಾರರಲ್ಲಿದೆ. ಒಂದಡೆ ಗುಟ್ಕಾ ನಿಷೇದಿಸಿರುವ ಸರ್ಕಾರ, ಇನ್ನೊಂದಡೆ ಬಯಲು ಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಿಸಲು ಸಹಾಯಧನ ನೀಡುವ ಮೂಲಕ ದ್ವಂದ್ವ ನಿಲುವು ಹೊಂದಿದೆ ಎಂಬುದು ಬೆಳೆಗಾರರ ಆಕ್ಷೇಪ. ಅಡಿಕೆಯ ಬಹುಪಾಲು ಗುಟ್ಕಾ ತಯಾರಿಕೆಗೆ ಬಳಕೆಯಾಗುತ್ತಿದೆ ಎಂಬ ಮಾತಿದೆಯಾದರೂ ಸ್ಪಷ್ಟವಾಗುತ್ತಿಲ್ಲ. ಅಡಿಕೆ ಹಾನಿಕಾರಕವೇ ಅಥವಾ ಅಲ್ಲವೇ ಎಂಬ ಕುರಿತು ಸಂಶೋಧನೆಗಳು ಮುಂದುವರೆದಿದ್ದು, ಅಂತಿಮ ವರದಿಗೂ ಮುನ್ನ ನಿಷೇಧ ಸರಿಯಲ್ಲ ಎನ್ನುವುದು ಹಲವರ ಅಭಿಪ್ರಾಯ. ‘ನಮ್ಮ ಉತ್ಪನ್ನದಿಂದ ಬೇರೆಯವರ ಬದುಕು ಹಾಳಾಗುವುದು ಬೇಡ ಎಂಬ ಪರಿಕಲ್ಪನೆ ಅಡಿಕೆ ಬೆಳೆಗಾರರಲ್ಲಿದೆ. ಗುಟ್ಕಾದಲ್ಲಿರುವ ಹಾನಿಕಾರಕ ಅಂಶಗಳನ್ನು ಸರ್ಕಾರ ನಿಷೇಧಿಸಲಿ. ಅದು ಬಿಟ್ಟು ಗುಟ್ಕಾದೊಂದಿಗಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಡಿಕೆಯೂ ನಿಷೇಧದ ಪಟ್ಟಿಗೆ ಸೇರಿಸುವುದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧವಿದೆ. ಈ ಬಗ್ಗೆ ನಮ್ಮ ನಿಯೋಗ ಶೀಘ್ರದಲ್ಲೇ ರಾಜ್ಯ ಮತ್ತು ಕೇಂದ್ರದ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು’ ಎನ್ನುತ್ತಾರೆ ಮಲೆ ನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-126-242786664

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ