
12 ಗಂಟೆಯಲ್ಲಿ ಎತ್ತುಗಳಿಂದ 24 ಎಕರೆ ಉಳುಮೆ ಮಾಡಿದ ಮಾಳನೂರು ರೈತ
ಹುಣಸಗಿ: ಗ್ರಾಮೀಣ ಭಾಗದಲ್ಲಿ ಶ್ರಾವಣ ಮಾಸವು ಮಹಿಳೆಯರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸುವ ಮಾಸವಾಗಿದ್ದರೆ, ಪುರುಷರಿಗೆ ಜಿದ್ದು ಮತ್ತು ಕಸುವಿನ ಕೆಲಸದ ಹಬ್ಬವಾಗಿದೆ.
ಹುಣಸಗಿ ತಾಲ್ಲೂಕಿನ ಮಾಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಲಬಾವಿ ಗ್ರಾಮದಲ್ಲಿ ರೈತರೊಬ್ಬರು ಬೆಳಗಿನಿಂದ ಮಧ್ಯಾಹ್ನದವರೆಗೂ 24 ಎಕರೆ ತೊಗರಿ ಹೊಲದಲ್ಲಿ ಗಳೆ ಹೊಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೌದು.. ಮಾರಲಬಾವಿ ಗ್ರಾಮದ ರೈತ ಹಣಮಂತ್ರಾಯಗೌಡ ಪಾಟೀಲ ಅವರು ಈ ಸಾಧನೆ ಮಾಡಿದ್ದು, ಸಹಾಯಕನಾಗಿ ನಿಂಗಣ್ಣ ಪ್ರಧಾನಿ ಕಾರ್ಯನಿರ್ವಹಿಸಿದ್ದು, ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ.
ಮಾರಲಬಾವಿ ಗ್ರಾಮದ ನಂದನಗೌಡ ಶಿವನಂದಪ್ಪಗೌಡ ಪಾಟೀಲ ಅವರ ಅಣಿ ಮೇಲಿರುವ 24 ಎಕರೆ ಕಪ್ಪುಮಣ್ಣಿನ ಎರಿ ಹೊಲದಲ್ಲಿ ಭಾನುವಾರ ಬೆಳಗಿನ ಜಾವ 3 ಗಂಟೆಯಿಂದ ಗಳೆ ಹೊಡೆಯಲು ಪ್ರಾರಂಭಿಸಿದ್ದು, ನಿರಂತರ 12 ತಾಸು ಮಧ್ಯಾಹ್ನ ನಾಲ್ಕು ಗಂಟೆ ವರೆಗೂ ಎಡೆಬಿಡದೇ ಗಳೆ ಹೊಡೆದು ಗುರಿ ಸಾಧಿಸಿದ್ದಾರೆ.
‘ಈ ಸಾಧನೆ ಮಾಡಬೇಕು ಎನ್ನುವುದು ನಮ್ಮ ಬಹುದಿನಗಳ ಕನಸಾಗಿತ್ತು. ಏನಾದರೂ ಆಗಲಿ ನೋಡೋಣ ಎಂದು ಆರಂಭಿಸಿದೆ’ ಎಂದು ಹಣಮಂತ್ರಾಯಗೌಡ ಪಾಟೀಲ ತಿಳಿಸಿದರು.
‘ಆರು ವರ್ಷಗಳ ಹಿಂದೆಯೇ ಈ ಎತ್ತುಗಳನ್ನು ತಂದಿದ್ದು, ಆಗಾಗ ಗಳೆ ಹೊಡೆಯುತ್ತಿದ್ದೇವು. ಆದರೆ ನಿರಂತರವಾಗಿ ಈ ರೀತಿ ನಿಲ್ಲದೇ ಎತ್ತುಗಳು ಗಳೆ ಹೊಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ರೈತ ಎಂದು ನಿಂಗಣ್ಣ ಬೂದಿಹಾಳ ಅಭಿಪ್ರಾಯ.
ಈ ಸುದ್ದಿ ಗ್ರಾಮೀಣ ಭಾಗದಲ್ಲಿ ಹರಿದಾಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಾದ ಮಾಳನೂರು, ಗುಳಬಾಳ, ತೀರ್ಥ, ಕೊಡೇಕಲ್ಲ, ಹಗರಟಗಿ ಹಾಗೂ ನೆರೆಯ ವಿಜಯಪುರ ಜಿಲ್ಲೆ ಸಾಲವಾಡಗಿ ಗ್ರಾಮದ ರೈತರು ಕೂಡಾ ಬಂದು ನೋಡಿ ರೈತನಿಗೆ ಬೆನ್ನು ತಟ್ಟಿದ್ದಾರೆ. ಇನ್ನು ಹೊಲದ ಸರಹದ್ದು ಅಳತೆಯಲ್ಲಿ ಕಡಿಮೆ ಇರಬಹುದು ಎಂದು ಮೊಬೈಲ್‌ನಲ್ಲಿಯೇ ಅಳತೆ ಮಾಡಿದ್ದಾರೆ ಎಂದು ಸಾಯಬಣ್ಣ ಹೊಸಮನಿ ತಿಳಿಸಿದರು.
‘ರೈತನಿಗೆ ಎತ್ತುಗಳೇ ಜೀವಂತ ದೇವರು, ರೈತರಿಗೆ ಹೆಗಲು ಕೊಟ್ಟು ಈ ಸಾಧನೆ ಮಾಡಲು ಸಾಧ್ಯವಾಗಿರುವ ಎತ್ತುಗಳ ಕಾರ್ಯ ಎಂಥವರನ್ನು ಮಂತ್ರಮುಗ್ದರನ್ನಾಗಿಸುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಹುಣಸಗಿಯ ಪ್ರಗತಿಪರ ರೈತ ಬಸವರಾಜಸ್ವಾಮಿ ಸ್ಥಾವರಮಠ ಸಂತಸ ವ್ಯಕ್ತಪಡಿಸಿ ರೈತರು ಹಾಗೂ ಎತ್ತುಗಳಿಗೆ ಗೌರವಿಸಿದರು.
‘ಎಷ್ಟೇ ವಿದ್ಯೆ ಕಲಿತರೂ ಮುಂದಿನ ದಿನಗಳಲ್ಲಿ ರೈತ ಕುಲಕ್ಕೆ ದೊಡ್ಡ ಗೌರವ ಸಿಗುವಂತೂ ನಿಶ್ಚಿತವಾಗಿದ್ದು, ನಮ್ಮ ಪರಂಪರೆಯನ್ನು ಯಾವುದೇ ರೈತರು ಕೀಳಾಗಿ ನೋಡಬಾರದು’ ಎಂದು ಕಿವಿ ಮಾತು ಹೇಳಿದರು.
ಮಾರಲಬಾವಿ ಗ್ರಾಮದಲ್ಲಿ ಸಂಜೆ ಭಾಜಾ ಭಜಂತ್ರಿಯೊಂದಿಗೆ ರೈತರು ಗಳೆ ಹೊಡೆದ ಎತ್ತುಗಳನ್ನು ಮೆರವಣಿ ಮಾಡಲಾಯಿತು. ಬಳಿಕ ಆ ರೈತರಿಗೆ ಬಸವಂತ್ರಾಯ ಭೀಮಣ್ಣ ಗೊಲ್ಲರ ಅವರು ಬೆಳ್ಳಿಯ ಕಡಗ ಬಹುಮಾನವಾಗಿ ನೀಡಿದರು.
ಹಿರಿಯರಾದ ಬಸವರಾಜ ಬಂಡೋಳ್ಳಿ, ಅಲ್ಲಾಬಕ್ಷ, ಗ್ರಾಮದ ವಿಠ್ಠಲ ಸುಬೇದಾರ್, ಗೌಡಪ್ಪ, ನಿಂಗಪ್ಪ ಕಲ್ಯಾಣಿ, ಶ್ರೀಕಾಂತ ಪಾಟೀಲ, ದೇವಿಂದ್ರ ಬಡಿಗೇರ, ದೇವಿಂದ್ರ ಬಿರಾದಾರ, ದೇವು ಯಾದವ, ದ್ಯಾಮಣ್ಣ ಯಾದವ, ಸಿದ್ದು ಪಾಟೀಲ, ನಿಂಗಣ್ಣ ವಜ್ಜಲ, ಪರಶು ಬಾಲಗೌಡರ ಇತರರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-30-2027133645