
ಮಣ್ಣಿನಲ್ಲಿ ಬೆರೆತು, ನೋವು ಮರೆತರು; ಕೃಷಿಯಲ್ಲೇ ಬದುಕು ಕಟ್ಟಿಕೊಂಡ ಕೃಷ್ಣಾಬಾಯಿ
ಗಂಡನ ಮಾನಸಿಕ ಅಸ್ವಸ್ಥತೆ ಬದುಕನ್ನು ಹೈರಾಣಾಗಿಸಿತು. ಮಕ್ಕಳೂ ಇರಲಿಲ್ಲ. ಬದುಕು ಸಂಕಷ್ಟವನ್ನೇ ಕೊಟ್ಟಾಗ ತವರು ಮನೆಗೆ ಮರಳಿದ ಕೃಷ್ಣಾಬಾಯಿ ಅವರ ಕೈಹಿಡಿದಿದ್ದು ಕೃಷಿ. ಮಣ್ಣಿನಲ್ಲಿ ಬೆರೆತು ನೋವು ಮರೆತರು; ಕೃಷಿಯೇ ಬದುಕಿಗೆ ನೆಮ್ಮದಿ ನೀಡಿತು. ಇಂದು ಅವರ ಜಮೀನು ರೈತರು ಹಾಗೂ ಕೃಷಿ ತಜ್ಞರಿಗೆ ಕಲಿಕೆಯ ತಾಣವಾಗಿದೆ.
ಮದುವೆಯಾಗಿ ನಾಲ್ಕೇ ವರ್ಷಗಳಾಗಿದ್ದವು. ಹೊಸ ಸಂಸಾರದ ಕನಸುಗಳು ಚಿಗುರಬೇಕಿದ್ದ ಸಮಯದಲ್ಲಿ ಕೃಷ್ಣಾಬಾಯಿ ಬಿರಾದಾರ ಪಾಟೀಲ ಅವರ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಪತಿ ಕೇಸುಗೌಡ ಅವರಿಗೆ ಮಾನಸಿಕ ಅಸ್ವಸ್ಥತೆ ಕಾಣಿಸಿಕೊಂಡಿತು. ಶಿವಮೊಗ್ಗ, ಬೆಂಗಳೂರು, ಧಾರವಾಡ ಸೇರಿದಂತೆ ಹಲವೆಡೆ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಕಡಿಮೆಯಾಗಲಿಲ್ಲ. ಮನೆ ಬದಲಿಸಿದರೆ ಸುಧಾರಣೆಯಾಗಬಹುದೆಂಬ ನಿರೀಕ್ಷೆಯಿಂದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತವರೂರಾದ ಅಮ್ಮಲಝರಿಗೆ ಮರಳಿದರು. ಮಕ್ಕಳೂ ಇರಲಿಲ್ಲ. ಬದುಕಿನ ಭಾರವನ್ನು ಒಬ್ಬಳೇ ಹೊರುವ ಪರಿಸ್ಥಿತಿ ಎದುರಾಯಿತು.
ಅಂತಹ ಸಂದರ್ಭದಲ್ಲಿ ಕೃಷ್ಣಾಬಾಯಿ ಬದುಕಿನ ಮೇಲೆ ಸಿಟ್ಟಾಗಲಿಲ್ಲ; ಮಣ್ಣಿನ ಮೇಲೆ ಪ್ರೀತಿಯನ್ನು ಹೆಚ್ಚಿಸಿಕೊಂಡರು. ಕಣ್ಣೀರಿಗೆ ಬದಲಾಗಿ ಹೊಲವನ್ನು ಆರಿಸಿಕೊಂಡರು. ಆ ನಿರ್ಧಾರವೇ ಇಂದು ಅವರನ್ನು ಸಾಧಕ ಮಹಿಳಾ ರೈತರ ಸಾಲಿನಲ್ಲಿ ನಿಲ್ಲಿಸಿದೆ. ಅವರ ಹೊಲದಲ್ಲಿ ಸುಮಾರು ಎಂಟು ಅಡಿ ಎತ್ತರಕ್ಕೆ ಬೆಳೆದಿರುವ ಮೆಣಸಿನಕಾಯಿ ಗಿಡಗಳು ಅವರ ಕೃಷಿ ಸಾಧನೆಯಷ್ಟೇ ಅಲ್ಲ, ಬದುಕಿನ ಸಂಕಷ್ಟಗಳನ್ನೂ ಮೀರಿ ನಿಂತ ಆತ್ಮವಿಶ್ವಾಸದ ಪ್ರತಿರೂಪವಾಗಿದೆ.
ಎಂಟನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ಕೃಷ್ಣಾಬಾಯಿ ಅವರಿಗೆ ಕೃಷಿಯ ಪರಿಚಯ ಬಾಲ್ಯದಿಂದಲೇ ಇತ್ತು. ತಂದೆ-ತಾಯಿಯೊಂದಿಗೆ ಬೀಜ ಬಿತ್ತುವುದು, ಸಸಿ ನೆಡುವುದು, ಕಳೆ ತೆಗೆಯುವುದು, ಕೊಯ್ಲು ಮಾಡುವುದು, ಜಾನುವಾರುಗಳ ಆರೈಕೆ ಹೀಗೆ ಕೃಷಿಯ ಪ್ರತಿಯೊಂದು ಕೆಲಸದಲ್ಲೂ ಕೈಜೋಡಿಸುತ್ತಾ ಮಣ್ಣಿನ ಸ್ವಭಾವ ಅರಿತು ಬೆಳೆದವರು. ಔಪಚಾರಿಕ ಶಿಕ್ಷಣ ಕಡಿಮೆಯಿದ್ದರೂ, ಅನುಭವವೇ ಅವರಿಗೆ ದೊಡ್ಡ ಪಾಠಶಾಲೆ ಆಯಿತು.
ಮದುವೆಯ ನಂತರವೂ ಕೃಷಿಯನ್ನೇ ಬದುಕಿನ ಆಧಾರವನ್ನಾಗಿ ಮಾಡಿಕೊಂಡರು. ಪತಿಯ ಅನಾರೋಗ್ಯದಿಂದ ಕುಟುಂಬದ ಹೊಣೆಗಾರಿಕೆ ಸಂಪೂರ್ಣವಾಗಿ ಅವರ ಹೆಗಲಿಗೆ ಬಂತು. ಮಗಳ ನೋವನ್ನು ಕಂಡ ತವರು ಮನೆಯವರು ಐದು ಎಕರೆ ಜಮೀನನ್ನು ಬಳುವಳಿಯಾಗಿ ನೀಡಿದರು. ಅದನ್ನೇ ಬದುಕಿನ ಹೊಸ ಆರಂಭವನ್ನಾಗಿ ಮಾಡಿಕೊಂಡ ಕೃಷ್ಣಾಬಾಯಿ, ಕಳೆದ ಮೂರು ದಶಕಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಬ್ಬು, ಗೋವಿನಜೋಳ, ಸಿರಿಧಾನ್ಯಗಳು, ಹತ್ತಿ ಬೀಜೋತ್ಪಾದನೆ, ಕುಂಬಳಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾ ಅನುಭವ ವಿಸ್ತರಿಸಿಕೊಂಡರು. ಗುಣಮಟ್ಟದ ಕುಂಬಳಕಾಯಿಯನ್ನು ಹೊರರಾಜ್ಯ
ಗಳಿಗೆ ಪೂರೈಸಿ ಉತ್ತಮ ಆದಾಯ ಗಳಿಸಿದರು. ಯಶಸ್ವಿ ರೈತರ ಕಥೆಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದರು; ಅವಕಾಶ ಸಿಕ್ಕಾಗ ಅವರ ಹೊಲಗಳಿಗೆ ಭೇಟಿ ನೀಡಿ ಹೊಸ ವಿಧಾನಗಳನ್ನು ಕಲಿಯುತ್ತಿದ್ದರು. ನೈಸರ್ಗಿಕ ಕೃಷಿಯ
ಪ್ರತಿಪಾದಕರಾದ ಸುಭಾಷ್ ಪಾಳೇಕರ್ ವಿಚಾರಗಳು ಅವರ ಮೇಲೆ ಪ್ರಭಾವ ಬೀರಿದವು. ನಿರಂತರ ಕಲಿಕೆಯ ಗುಣವೇ ಯಶಸ್ಸಿನ ಗುಟ್ಟು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿದ್ದಾರೆ.
ಸವಾಲಿನ ಬೆಳೆಗಳೆಂದರೆ ಕೃಷ್ಣಾಬಾಯಿ ಅವರಿಗೆ ವಿಶೇಷ ಆಸಕ್ತಿ. ಇದೇ ಕಾರಣಕ್ಕೆ ಈ ವರ್ಷ ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯಲು ನಿರ್ಧರಿಸಿದರು. ರೋಗ-ಕೀಟಗಳ ಹಾವಳಿ ಹೆಚ್ಚಿರುವುದರಿಂದ ಅನೇಕರು ಈ ಬೆಳೆ ಕೈಬಿಡುವಂತೆ ಸಲಹೆ ನೀಡಿದರೂ, ತಮ್ಮ ಅನುಭವದ ಮೇಲೆ ನಂಬಿಕೆ ಇಟ್ಟು ಮುಂದುವರಿದರು.
‘ಉತ್ತಮ ಬೆಳೆ, ಭೂಮಿ ಸಿದ್ಧತೆಯಿಂದಲೇ ಆರಂಭವಾಗುತ್ತದೆ’ ಎಂಬ ನಂಬಿಕೆಯೊಂದಿಗೆ ಹಿಂದಿನ ಹತ್ತಿ ಬೆಳೆಯ ಕಾಂಡ, ಎಲೆ ಮತ್ತು ಅವಶೇಷಗಳನ್ನು ರೂಟಾವೇಟರ್ ಮೂಲಕ ಮಣ್ಣಿನಲ್ಲೇ ಮಿಶ್ರಣ ಮಾಡಿದರು. ಬಳಿಕ ಸುಮಾರು 15 ಟನ್ ಕೊಟ್ಟಿಗೆ ಮತ್ತು ಕುರಿಗೊಬ್ಬರ ಸೇರಿಸಿ ಭೂಮಿಯನ್ನು ಫಲವತ್ತಾಗಿಸಿದರು. ಮೂಲಗೊಬ್ಬರ ನೀಡಿ ಪೂರ್ವ–ಪಶ್ಚಿಮ ದಿಕ್ಕಿನಲ್ಲಿ ಸಾಲು ಸಿದ್ಧಪಡಿಸಿದರು.
ಮಹಾರಾಷ್ಟ್ರದ ಸಾಂಗ್ಲಿಯಿಂದ ತರಿಸಿದ ‘ಸಿಜೆಂಟಾ–153’ ತಳಿಯ ಸುಮಾರು 20 ಸಾವಿರ ಮೆಣಸಿನಕಾಯಿ ಸಸಿಗಳನ್ನು ಐದು ಅಡಿ ಸಾಲಿನ ಅಂತರ ಹಾಗೂ ಒಂದು ಅಡಿ ಸಸಿ ಅಂತರದಲ್ಲಿ ನಾಟಿ ಮಾಡಿದರು.
ಪೂರ್ವ–ಪಶ್ಚಿಮ ದಿಕ್ಕಿನ ನಾಟಿಯಿಂದ ಸೂರ್ಯನ ಬೆಳಕು ಸಮವಾಗಿ ದೊರೆತು ದ್ಯುತಿಸಂಶ್ಲೇಷಣೆ ಉತ್ತಮವಾಗುತ್ತದೆ ಹಾಗೂ ರೋಗದ ಹಾವಳಿ ಕಡಿಮೆಯಾಗುತ್ತದೆ ಎಂಬ ಅನುಭವವನ್ನು ಅಳವಡಿಸಿಕೊಂಡರು.
ಮಣ್ಣಿನ ಆರೋಗ್ಯಕ್ಕೂ ಅವರು ಆದ್ಯತೆ ನೀಡಿದರು. ಕಳೆನಾಶಕ ಬಳಸದೆ ಕಬ್ಬಿನ ರವದಿಯಿಂದ ಮಲ್ಚಿಂಗ್ ಮಾಡಿ ಕಳೆ ನಿಯಂತ್ರಣದ ಜೊತೆಗೆ ತೇವಾಂಶ ಉಳಿಸಿಕೊಂಡರು. ಜೀವಾಮೃತವನ್ನು ಮೂರು ಬಾರಿ ಬಳಸಿ ಮಣ್ಣಿನ ಜೈವಿಕ ಚಟುವಟಿಕೆ ಹೆಚ್ಚಿಸಿದರು. ಕರಿಬೆಲ್ಲ, ಗೋಮೂತ್ರ, ಗೋಮಯ, ಶುದ್ಧ ಮಣ್ಣು, ಸಾಸಿವೆ ಹಾಗೂ ಅಮೃತಬಳ್ಳಿಯಿಂದ ಜೀವಾಮೃತ ತಯಾರಿಸಿದರು. ಉತ್ತಮ ಪರಾಗಸ್ಪರ್ಶಕ್ಕಾಗಿ ಹೊಲದ ಅಲ್ಲಲ್ಲಿ ಚೆಂಡು ಹೂವಿನ ಗಿಡಗಳನ್ನೂ ಬೆಳೆಸಿದರು.
ಬರಗಾಲದಂತಹ ವಾತಾವರಣದಲ್ಲಿಯೂ ಬೆಳೆ ನಿರ್ವಹಣೆಯಲ್ಲಿ ಎಚ್ಚರ ವಹಿಸಿದರು. ಎಲೆಚುಕ್ಕೆ ರೋಗ, ಹೂವು ಮತ್ತು ಕಾಯಿ ಉದುರುವ ಸಮಸ್ಯೆ ಕಾಣಿಸಿಕೊಂಡಾಗ ಅಗತ್ಯ ಪ್ರಮಾಣದಲ್ಲಿ ಮಾತ್ರ ಔಷಧ ಸಿಂಪಡಿಸಿ ಬೆಳೆ ಉಳಿಸಿಕೊಂಡರು. ರಾಸಾಯನಿಕ ಬಳಕೆಯನ್ನು ಮಿತಿಗೊಳಿಸಿದರು.
ಇದರ ಫಲವಾಗಿ ಸಾಮಾನ್ಯವಾಗಿ ನಾಲ್ಕೈದು ಅಡಿ ಬೆಳೆಯುವ ಮೆಣಸಿನ ಗಿಡಗಳು ಅವರ ಹೊಲದಲ್ಲಿ ಸುಮಾರು ಎಂಟು ಅಡಿ ಎತ್ತರಕ್ಕೆ ಬೆಳೆದವು. ದಟ್ಟವಾದ ಬೆಳವಣಿಗೆ, ಸಮೃದ್ಧ ಕಾಯಿ ಹಿಡಿತವನ್ನು ನೋಡಲು ರೈತರು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ-ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಬೆಳೆಗೆ ಸಸಿಗಳು, ಶೇಡ್‌ನೆಟ್, ಡ್ರಿಪ್, ಬಿದಿರು, ತಂತಿ, ಗೊಬ್ಬರ, ಜೀವಾಮೃತ, ರಸಗೊಬ್ಬರ, ಕೀಟನಾಶಕ ಹಾಗೂ ಕಾರ್ಮಿಕ ವೆಚ್ಚ ಸೇರಿ ಸುಮಾರು ₹6 ಲಕ್ಷ ಹೂಡಿಕೆ ಮಾಡಿದ್ದಾರೆ. ಈಗಾಗಲೇ 11 ಟನ್ ಹಸಿರು ಹಾಗೂ ನಾಲ್ಕು ಟನ್ ಕೆಂಪು ಮೆಣಸಿನಕಾಯಿ ಮಾರಾಟ ಮಾಡಿ ಸುಮಾರು ₹6 ಲಕ್ಷ ಆದಾಯ ಗಳಿಸಿದ್ದಾರೆ. ಇನ್ನೂ ಸುಮಾರು 16 ಟನ್ ಇಳುವರಿ ನಿರೀಕ್ಷೆಯಿದ್ದು, ₹6 ಲಕ್ಷ ಆದಾಯ ಬರುವ ವಿಶ್ವಾಸದಲ್ಲಿದ್ದಾರೆ. ಗುಣಮಟ್ಟದ ಬೆಳೆಯಾಗಿರುವುದರಿಂದ ವ್ಯಾಪಾರಿಗಳು ಹೊಲಕ್ಕೇ ಬಂದು ಖರೀದಿಸುತ್ತಿದ್ದಾರೆ.
ನವೆಂಬರ್ ನಂತರ ಇದೇ ಹೊಲದಲ್ಲಿ ಹಾಗಲಕಾಯಿ, ಹೀರೇಕಾಯಿ ಹಾಗೂ ಕಲ್ಲಂಗಡಿ ಬೆಳೆಯಲು ಯೋಜಿಸಿದ್ದಾರೆ. ಈಗಿರುವ ಶೇಡ್‌ನೆಟ್, ಡ್ರಿಪ್, ಬಿದಿರು ಹಾಗೂ ತಂತಿ ವ್ಯವಸ್ಥೆಯನ್ನು ಮುಂದಿನ ಬೆಳೆಗಳಿಗೂ ಬಳಸಿಕೊಂಡು ವೆಚ್ಚ ಕಡಿಮೆ ಮಾಡುವ ಉದ್ದೇಶ ಅವರದು. ಕೃಷಿಯನ್ನು ಅವರು ಕೇವಲ ಒಂದು ಬೆಳೆ ಎಂದು ನೋಡುವುದಿಲ್ಲ; ದೀರ್ಘಕಾಲಿಕ ಯೋಜನೆ ಮತ್ತು ಸಂಪನ್ಮೂಲಗಳ ಸಮರ್ಥ ನಿರ್ವಹಣೆ ಎಂದು ಪರಿಗಣಿಸುತ್ತಾರೆ.
ಇಂದು ಕೃಷ್ಣಾಬಾಯಿ ಅವರ ಹೊಲ ಉತ್ಪಾದನೆಯ ಕೇಂದ್ರವಷ್ಟೇ ಅಲ್ಲ, ಕಲಿಕೆಯ ತಾಣವೂ ಆಗಿದೆ. ಅನೇಕ ರೈತರು ಬೆಳೆ ನಿರ್ವಹಣೆ ತಿಳಿಯಲು ಹೊಲಕ್ಕೆ ಭೇಟಿ ನೀಡುತ್ತಿದ್ದಾರೆ. ಕೃಷಿ ವಿಜ್ಞಾನಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂ ಭೇಟಿ ನೀಡಿ ಮೆಚ್ಚುಕೊಂಡಿದ್ದಾರೆ.
ಒಂದು ಕಾಲದಲ್ಲಿ ಪತಿಯ ಅನಾರೋಗ್ಯ, ಮಕ್ಕಳಿಲ್ಲದ ನೋವು ಮತ್ತು ಏಕಾಂಗಿ ಬದುಕಿನ ನಡುವೆ ನಿಂತಿದ್ದ ಈ ಮಹಿಳೆ, ಇಂದು ರೈತರಿಗೆ ಪ್ರೇರಣೆಯಾಗಿದ್ದಾರೆ. ಎಂಟು ಅಡಿ ಎತ್ತರಕ್ಕೆ ಬೆಳೆದಿರುವ ಮೆಣಸಿನ ಗಿಡಗಳು ಕೇವಲ ಕೃಷಿಯ ಯಶಸ್ಸಿನ ಸಂಕೇತಗಳಲ್ಲ; ಆತ್ಮವಿಶ್ವಾಸ, ಶ್ರಮ ಮತ್ತು ಧೈರ್ಯ ಒಂದಾದರೆ ಬದುಕು ಎಷ್ಟೇ ಕಠಿಣವಾಗಿದ್ದರೂ ಹೊಸ ಇತಿಹಾಸ ಬರೆಯಬಹುದು ಎಂಬುದಕ್ಕೆ ಜೀವಂತ ಸಾಕ್ಷಿ.