ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಗೆ ವಿಶೇಷ ಯೋಜನೆ ಅಧಿಸೂಚನೆ

ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಗೆ ವಿಶೇಷ ಯೋಜನೆ ಅಧಿಸೂಚನೆ

ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಗೆ ವಿಶೇಷ ಯೋಜನೆ ಅಧಿಸೂಚನೆ

ಕಾರವಾರ: ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಯನ್ನು ಸಾರ್ವಜನಿಕ ಉದ್ದೇಶಕ್ಕೆ ರಾಷ್ಟ್ರೀಯ ಮೂಲಸೌಕರ್ಯ ಒದಗಿಸಲು ‘ವಿಶೇಷ ರೈಲ್ವೆ ಯೋಜನೆ’ ಎಂದು ರೈಲ್ವೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬಹುನಿರೀಕ್ಷಿತ ಯೋಜನೆ ಕಾರ್ಯಗತಗೊಳಿಸುವ ಪ್ರಯತ್ನಗಳು ಬಲಗೊಂಡಿವೆ.

ಹುಬ್ಬಳ್ಳಿಯಿಂದ ಅಂಕೋಲಾ ತಾಲ್ಲೂಕಿನ ಬಾಳೆಗುಳಿವರೆಗಿನ 163 ಕಿ.ಮೀ ಉದ್ದವನ್ನು ಸಂಪರ್ಕಿಸಲು ವಿದ್ಯುದೀಕರಣ ಸಹಿತ ಬ್ರಾಡ್ ಗೇಜ್ ದ್ವಿಪಥ ರೈಲು ಮಾರ್ಗ ಸ್ಥಾಪನೆಗೆ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ 69 ಗ್ರಾಮಗಳ ವ್ಯಾಪ್ತಿ ಯೋಜನೆಗೆ ಒಳಪಡಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಜಿಲ್ಲೆಯ 40 ಗ್ರಾಮಗಳು ಸೇರಿದ್ದು, ಯಲ್ಲಾಪುರದ 24 ಮತ್ತು ಅಂಕೋಲಾದ 16 ಗ್ರಾಮಗಳಿವೆ.

1998ರಲ್ಲೇ ಚಾಲನೆ ದೊರೆತಿದ್ದ ಯೋಜನೆಗೆ ಪರಿಸರ ನಾಶದ ಕಾರಣ ಮುಂದಿಟ್ಟು ಪರಿಸರವಾದಿಗಳು ನಡೆಸಿದ ಹೋರಾಟ ಅಡ್ಡಿಯಾಗಿತ್ತು. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವನ್ಯಜೀವಿ ಮಂಡಳಿ ಸಲಹೆಯೊಂದಿಗೆ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು 2024ರಲ್ಲಿ ಹೈಕೋರ್ಟ್ ಒಪ್ಪಿಗೆ ಸೂಚಿಸಿದ ಬಳಿಕ, ನೈರುತ್ಯ ರೈಲ್ವೆ 2025ರಲ್ಲಿ ₹16,435 ಕೋಟಿ ವೆಚ್ಚದ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ, 2026ರ ಫೆ.17ರಂದು ರೈಲ್ವೆ ಮಂಡಳಿಗೆ ಸಲ್ಲಿಸಿತ್ತು. ಇದಕ್ಕೆ ಈಗ ಒಪ್ಪಿಗೆ ಸಿಕ್ಕಿದೆ.

ಉದ್ದೇಶಿತ ರೈಲು ಮಾರ್ಗ ಹಾದುಹೋಗಲಿರುವ ವ್ಯಾಪ್ತಿಯ ಗ್ರಾಮಗಳನ್ನು ಪಟ್ಟಿ ಮಾಡಿರುವ ನೈರುತ್ಯ ರೈಲ್ವೆಯ ನಿರ್ಮಾಣ ವಿಭಾಗವು ಪ್ರತಿ ಗ್ರಾಮಗಳ ಹೆಸರಿನೊಂದಿಗೆ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಯಲ್ಲಾಪುರದ ಹೊಸಳ್ಳಿ ಗ್ರಾಮದಿಂದ ಆರಂಭಗೊಳ್ಳುವ ಮಾರ್ಗವು ಅಂಕೋಲಾ ಗ್ರಾಮದಲ್ಲಿ ಕೊನೆಗೊಳ್ಳಲಿದೆ.

‘ವಿಶೇಷ ರೈಲು ಯೋಜನೆ ಘೋಷಿಸಿ ರೈಲು ಮಾರ್ಗ ಹಾದುಹೋಗಲಿರುವ ಗ್ರಾಮಗಳ ಪಟ್ಟಿಯೊಂದಿಗೆ ರೈಲ್ವೆ ಸಚಿವಾಲಯ ಹೊರಡಿಸಿದ ಅಧಿಸೂಚನೆ ಪ್ರಾಥಮಿಕ ಹಂತವಾಗಿದೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿ ಯೋಜನೆಗೆ ಅಗತ್ಯವಿರುವ ಖಾಸಗಿ, ಸರ್ಕಾರಿ ಭೂಮಿಗಳ ಸ್ವಾಧೀನ ಪ್ರಕ್ರಿಯೆಗೆ ಮುಂದಿನ ಹಂತದಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘ಪರಿಷ್ಕೃತ ಡಿಪಿಆರ್ ಪ್ರಕಾರ 167 ಕಿ.ಮೀ ವ್ಯಾಪ್ತಿಯ ಪೈಕಿ 97 ಕಿ.ಮೀ ಉದ್ದದ ಮಾರ್ಗವು ಅರಣ್ಯ ಪ್ರದೇಶದಲ್ಲಿ ಹಾದುಹೋಗಲಿದೆ. ದಟ್ಟ ಅರಣ್ಯ ಹಾದುಹೋಗಿರುವ ಯಲ್ಲಾಪುರದಿಂದ ಸುಂಕಸಾಳವರೆಗೆ ಅರಣ್ಯ ನಾಶ ಕಡಿಮೆ ಮಾಡಲು 57 ಕಡೆಗಳಲ್ಲಿ ಸುರಂಗ ನಿರ್ಮಿಸಲಾಗುತ್ತಿದೆ. 13.89 ಕಿ.ಮೀ ಉದ್ದದಷ್ಟು ಮೇಲ್ಸೇತುವೆಯನ್ನೂ ನಿರ್ಮಿಸಲಾಗುತ್ತಿದೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಸ್ವಾಧೀನಾಧಿಕಾರಿ ನೇಮಕ

‘ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಉತ್ತರ ಕನ್ನಡ, ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ವಿಶೇಷ ಭೂಸ್ವಾಧೀನಾಧಿಕಾರಿ ನೇಮಿಸಲು ನೈರುತ್ಯ ರೈಲ್ವೆಯ ಮುಖ್ಯ ಎಂಜಿನಿಯರ್ ಈಚೆಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ವಿಶೇಷ ಭೂಸ್ವಾಧೀನಾಧಿಕಾರಿ ನೇಮಕಕ್ಕೂ ಆದೇಶವಾಗಿದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಕೆಲ ವರ್ಷಗಳಿಂದ ಬಾಗಿಲು ಮುಚ್ಚಿದ್ದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉದ್ದೇಶಿತ ರೈಲ್ವೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಕಾರ್ಯಾರಂಭಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-20-575746187

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ