ಆಗಸ್ಟ್ 15ರೊಳಗೆ ಖಾಲಿ ಇರುವ ನಿವೇಶನ ಸ್ವಚ್ಛಗೊಳಿಸದಿದ್ದರೆ ದುಬಾರಿ ಶುಲ್ಕ!

ಆಗಸ್ಟ್ 15ರೊಳಗೆ ಖಾಲಿ ಇರುವ ನಿವೇಶನ ಸ್ವಚ್ಛಗೊಳಿಸದಿದ್ದರೆ ದುಬಾರಿ ಶುಲ್ಕ!

ಆಗಸ್ಟ್ 15ರೊಳಗೆ ಖಾಲಿ ಇರುವ ನಿವೇಶನ ಸ್ವಚ್ಛಗೊಳಿಸದಿದ್ದರೆ ದುಬಾರಿ ಶುಲ್ಕ!

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಖಾಲಿ ಇರುವ ನಿವೇಶನಗಳನ್ನು ಆಗಸ್ಟ್‌ 15ರೊಳಗೆ ಸ್ವಚ್ಛಗೊಳಿಸದಿದ್ದರೆ ಮಾಲೀಕರು ದುಬಾರಿ ಶುಲ್ಕ ತೆರಬೇಕಾಗುತ್ತದೆ.

ಖಾಲಿ ನಿವೇಶನವನ್ನು ಸ್ವಚ್ಛ ಮಾಡಲು ಹಾಗೂ ತ್ಯಾಜ್ಯವನ್ನು ಸಾಗಣೆ ಮಾಡಲು ಚದರಡಿಗೆ ಅನುಗುಣವಾಗಿ ಶುಲ್ಕ ನಿಗದಿ ಮಾಡಲಾಗಿದೆ. ಕಾಂಪೌಂಡ್‌ ಇಲ್ಲದ ನಿವೇಶನದಲ್ಲಿ ಸ್ವಚ್ಛತೆಗೆ ಅಂದರೆ ಮೇಲ್ಮಟ್ಟದಿಂದ ಒಂದೂವರೆ ಅಡಿ ಆಳದವರೆಗಿನ ಕಸವನ್ನು ತೆಗೆಯಲು ₹11.16 ಶುಲ್ಕ ನಿಗದಿಪಡಿಸಲಾಗಿದೆ. ಕಾಂಪೌಂಡ್‌ ಇರುವ ನಿವೇಶನಕ್ಕೆ ಈ ಶುಲ್ಕ ₹12.83 ಆಗಲಿದೆ. ತ್ಯಾಜ್ಯ/ ಡೆಬ್ರಿಸ್‌ ಅನ್ನು ಸಾಗಣೆ ಮಾಡಲು ಪ್ರತಿ ಚದರಡಿಗೆ ₹32ರಂತೆ ವಸೂಲಿ ಮಾಡಲಾಗುತ್ತದೆ.

ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆಗಸ್ಟ್‌ 1ರಿಂದ ಆರಂಭವಾಗಿದ್ದು, ತಿಂಗಳು ಪೂರ್ತಿ ನಡೆಯಲಿದೆ. ಆಗಸ್ಟ್‌ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು. ಅದಾದ ನಂತರ ಪಾಲಿಕೆ ವತಿಯಿಂದಲೇ ಸ್ವಚ್ಛತೆ ಕೈಗೊಂಡು ಶುಲ್ಕ ವಿಧಿಸಲಾಗುತ್ತದೆ ಎಂದು ಜುಲೈ 14ರಂದು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು. ಅದರಂತೆ ಶುಲ್ಕ ನಿಗದಿ ಮಾಡಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಆಗಸ್ಟ್‌ 10ರಂದು ‘ಸಾರ್ವಜನಿಕ ಪ್ರಕಟಣೆ’ ಹೊರಡಿಸಿದ್ದಾರೆ.

ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವಾಗಿಸುವ ಉದ್ದೇಶದಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು–2020ರ 18(1)(ಬಿ)ಯಂತೆ ಖಾಲಿ ನಿವೇಶನಗಳನ್ನು ಸ್ವಚ್ಛ ಮತ್ತು ನೈರ್ಮಲ್ಯಯುತವಾಗಿ ನಿರ್ವಹಿಸುವುದು ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಲೀಕರು ತಮ್ಮ ಖಾಲಿ ನಿವೇಶನಗಳಲ್ಲಿ ಶೇಖರಣೆಯಾಗಿರುವ ತ್ಯಾಜ್ಯ/ ಡೆಬ್ರಿಸ್‌ ಅನ್ನು ಐದು ನಗರ ಪಾಲಿಕೆಗಳು ನಿಗದಿಪಡಿಸಿರುವ ಸ್ಥಳಗಳಲ್ಲಿ ಆಗಸ್ಟ್‌ 15ರೊಳಗೆ ವಿಲೇವಾರಿ ಮಾಡಬೇಕು. ಇದಕ್ಕಾಗಿ, ನಗರ ಪಾಲಿಕೆಗಳು ಅಧಿಸೂಚಿಸಿರುವ ಸೇವಾದಾರರ ಸೇವೆಯನ್ನೂ ಪಡೆಯಬಹುದು ಎಂದು ಹೇಳಲಾಗಿದೆ.

ಆಗಸ್ಟ್‌ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದರೆ, ನಗರ ಪಾಲಿಕೆ ವತಿಯಿಂದ ತ್ಯಾಜ್ಯ/ಡೆಬ್ರಿಸ್‌ ಅನ್ನು ತೆರವುಗೊಳಿಸಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ– 2024ರ ಕಲಂ 285(2) ಅನ್ವಯ ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುವುದು ಎಂದು ತಿಳಿಸಲಾಗಿದೆ.

4,000 ಚದರಡಿವರೆಗೆ ಶುಲ್ಕವನ್ನು ನಿಗದಿಪಡಿಸಿ ಪ್ರಕಟಣೆ ಹೊರಡಿಸಲಾಗಿದ್ದು, ಅದಕ್ಕೂ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಿಗೆ ಅವುಗಳ ಅಳತೆಗೆ ಅನುಗುಣವಾಗಿ ಸ್ವಚ್ಛತೆ, ಸಾಗಣೆ ವೆಚ್ಚವನ್ನು ನಿಗದಿಪಡಿಸಲಾಗುತ್ತದೆ.

ನಿವೇಶನದಲ್ಲಿರುವ ತ್ಯಾಜ್ಯ, ಕಸ, ಮಣ್ಣು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಿ, ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕರ ಆರೋಗ್ಯ ಮತ್ತು ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ನಿವೇಶನಗಳನ್ನು ತ್ಯಾಜ್ಯರಹಿತವಾಗಿಡಲು ಮಾಲೀಕರು ಸಹಕರಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಮನವಿ ಮಾಡಿದ್ದಾರೆ.

0.45 ಮೀಟರ್‌; ನಿವೇಶನದಲ್ಲಿರುವ ತ್ಯಾಜ್ಯ ತೆಗೆಯುವ ಆಳ (ಒಂದೂವರೆ ಅಡಿ)

₹11.16; ಪ್ರತಿ ಚದರಡಿಗೆ ಕಾಂಪೌಂಡ್‌ ಇಲ್ಲದ ನಿವೇಶನದ ಸ್ವಚ್ಛತೆಗೆ ಶುಲ್ಕ

₹12.83; ಪ್ರತಿ ಚದರಡಿಗೆ ಕಾಂಪೌಂಡ್‌ ಇರುವ ನಿವೇಶನದ ಸ್ವಚ್ಛತೆಗೆ ಶುಲ್ಕ

₹32; ಪ್ರತಿ ಚದರಡಿಯಲ್ಲಿರುವ ತ್ಯಾಜ್ಯ/ ಡೆಬ್ರಿಸ್‌ ಸಾಗಣೆ ಶುಲ್ಕ

ನಿವೇಶನ;ಕಾಂಪೌಂಡ್‌ ಇಲ್ಲದ ನಿವೇಶನಕ್ಕೆ; ಕಾಂಪೌಂಡ್‌ ಇರುವ ನಿವೇಶನಕ್ಕೆ;ತ್ಯಾಜ್ಯ/ಡೆಬ್ರಿಸ್‌ ಸಾಗಣೆಗೆ

20x30 ಅಡಿ (600 ಚದರಡಿ);₹6,700;₹7,700;₹19,200

30x40 ಅಡಿ (1200 ಚದರಡಿ);₹13,400;₹14,400;₹38,400

30x50 ಅಡಿ (1500 ಚದರಡಿ);₹16,750;₹17,750;₹48,000

40x60 ಅಡಿ (2400 ಚದರಡಿ);₹26,800;₹27,800;₹76,800

50x80 ಅಡಿ (4000 ಚದರಡಿ);₹46,700;₹47,700;₹1,28,000

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-4-570344496

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ