ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ: ಕಾಂಗ್ರೆಸ್ ಸದಸ್ಯರ ಕಳವಳ
ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಕಳವಳ ವ್ಯಕ್ತಪಡಿಸಿದರು.
ಸೋಮವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು, ‘ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ, ಹಲ್ಲೆ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರವು ಸರಿಯಾಗಿ ಗಮನ ಕೊಡದೆ ಇರುವುದಕ್ಕೇ ಹೀಗಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರಾಯಚೂರು ಅತ್ಯಾಚಾರ ಪ್ರಕರಣ ಕೇಳುವವರಿಲ್ಲ’
ರಾಯಚೂರಿನಲ್ಲಿ ಈಚೆಗೆ ಯುವತಿ ಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿ ದೇಹವನ್ನು ಬಾವಿಗೆ ಎಸೆದ ಪ್ರಕರಣನ್ನು ಕಾಂಗ್ರೆಸ್‌ನ ಬಸನಗೌಡ ಬಾದರ್ಲಿ ಅವರು ಪ್ರಸ್ತಾಪಿಸಿದರು.
‘ರಾಯಚೂರಿನಲ್ಲಿ ಆಗಸ್ಟ್ ತಿಂಗಳ 20 ದಿನದಲ್ಲೇ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳಿಗೆ ಸೇರಿದ ಮೂವರ ಕೊಲೆ ನಡೆದಿದೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ. ಜಿಲ್ಲೆ
ಯಲ್ಲಿ ಪರಿಶಿಷ್ಟ ಸಮುದಾಯದವರಿಗೆ ರಕ್ಷಣೆಯೇ ಇಲ್ಲದಂತಾಗಿದೆ’ ಎಂದರು.
‘ಅತ್ಯಾಚಾರದ ನಂತರ ಕೊಲೆ ಮಾಡಿ, ಶವವನ್ನು ಬಾವಿಗೆ ಎಸೆದ ಪ್ರಕರಣವು ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿಯಾಗಬೇಕಿತ್ತು. ಇಡೀ ಸಮಾಜ ಅದನ್ನು ಖಂಡಿಸಬೇಕಿತ್ತು. ಆದರೆ, ಆ ಪ್ರಕರಣ ಸದ್ದಿಲ್ಲದಂತೆಯೇ ಮುಚ್ಚಿಹೋಯಿತು. ಸಂತ್ರಸ್ತ ಕುಟುಂಬದವರು ಪ್ರತಿಭಟನೆ ನಡೆಸಿದ ನಂತರವಷ್ಟೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದರು. ಆನಂತರವಷ್ಟೇ ತನಿಖೆ ಆರಂಭವಾಗಿದ್ದು’ ಎಂದರು.
‘ದಲಿತರ ಜೀವ ಮತ್ತು ಮಾನದ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಏಕೆ ಇಂತಹ ನಿರ್ಲಕ್ಷ್ಯ. ಇಂತಹ ಪ್ರರಕಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವೂ ಕಡಿಮೆ ಇರುವ ಕಾರಣಕ್ಕೆ, ಕೃತ್ಯ ಎಸಗುವವರಿಗೆ ಪೊಲೀಸರು ಮತ್ತು ಕಾನೂನಿನ ಭಯವೇ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.
‘2023ರಿಂದ 63,447 ಪ್ರಕರಣ’
‘2023ರಿಂದ ಈವರೆಗೆ ರಾಜ್ಯದಾದ್ಯಂತ ಮಹಿಳೆಯರ ಮೇಲೆ ಎಸಗಲಾದ ಅಪರಾಧ ಕೃತ್ಯಗಳ ವಿರುದ್ಧ 63,477 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಖ್ಯೆಯನ್ನು ನೋಡಿದರೇ ಭಯವಾಗುತ್ತದೆ’ ಎಂದು ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್ ಆತಂಕ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮಹಿಳೆಯರು ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಹಿಂಬಾಲಿಸುವಿಕೆ, ಹಲ್ಲೆ, ಲೈಂಗಿಕ ದೌರ್ಜನ್ಯ, ಕೊಲೆಯಂತಹ ಕೃತ್ಯಗಳಿಗೆ ಗುರಿಯಾಗಿದ್ದಾರೆ. ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವೂ ಕಡಿಮೆ ಇದೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಹ ಸ್ಥಿತಿ ಇದೆ. ಹೆಣ್ಣುಮಕ್ಕಳು ರಸ್ತೆಯಲ್ಲಿ ಭಯವಿಲ್ಲದೇ ಓಡಾಡುವುದು ಹೇಗೆ’ ಎಂದು ಪ್ರಶ್ನಿಸಿದರು.
‘ಮಹಿಳೆಯರ ಸುರಕ್ಷತೆಗೆ ಸರ್ಕಾರವು ಸರಿಯಾದ ಕ್ರಮ ತೆಗೆದು
ಕೊಳ್ಳುತ್ತಿಲ್ಲ ಅಥವಾ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದೇ ಭಾವಿಸಬೇಕಾಗುತ್ತದೆ. ಹೀಗಾಗಿಯೇ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸರ್ಕಾರ ಕೂಡಲೇ ಗಮನಹರಿಸಿ, ಭದ್ರತೆಯನ್ನು ಹೆಚ್ಚಿಸ
ಬೇಕು. ಇಂತಹ ಗರಿಷ್ಠ ಪ್ರಕರಣಗಳಲ್ಲಿ ಶಿಕ್ಷೆಯಾಗುವಂತೆ ಎಚ್ಚರಿಕೆ
ವಹಿಸಬೇಕು’ ಎಂದು ಆಗ್ರಹಿಸಿದರು.