
ಎರಡು ವರ್ಷಗಳಿಂದ ಬಾರದ ಗೌರವ ಧನ: ಜಲ ಸಂಪನ್ಮೂಲ ಇಲಾಖೆ ಮಳೆ ಮಾಪಕರ ಅಘೋಷಿತ ಮುಷ್ಕರ
ಚಿಂಚೋಳಿ: ರಾಜ್ಯದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸ್ಥಾಪಿಸಿದ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ದತ್ತಾಂಶವನ್ನು ಇಲಾಖೆಯ ಜತೆಗೆ ಹಂಚಿಕೊಳ್ಳದೇ ಮಳೆ ಮಾಪನ ಕೇಂದ್ರಗಳ ವೀಕ್ಷಕರು ಹಾಗೂ ಜಲ ಹವಾ ಮಾಪನ ಕೇಂದ್ರದ ವರದಿಗಾರರು ಮುಷ್ಕರ ನಡೆಸುತ್ತಿರುವುದರಿಂದ ಮಳೆ ಮಾಹಿತಿಗಾಗಿ ಅಧಿಕಾರಿಗಳು ಪರದಾಡುವಂತಾಗಿದೆ.
ಜಲ ಸಂಪನ್ಮೂಲ ಇಲಾಖೆಯಿಂದ ಸಾಧಾರಣ ಮಳೆ ಮಾಪನ ಕೇಂದ್ರ (ಒಆರ್‌ಜಿ ಸ್ಟೇಷನ್), ಸ್ವಯಂ ಚಾಲಿತ ಮತ್ತು ಮಳೆ ಮಾಪನ ಕೇಂದ್ರ (ಎಸ್‌ಆರ್‌ಆರ್‌ಜಿ ಸ್ಟೇಷನ್), ಜಲ ಹಾಗೂ ಹವಾಮಾನ ಕೇಂದ್ರ (ಎಚ್‌ಎಂ ಸ್ಟೇಷನ್) ಹೀಗೆ 1,073ಕ್ಕೂ ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ರಾಜ್ಯದ ತುಂಬಾ ಮಳೆ ಮಾಪನಕೇಂದ್ರಗಳ ವೀಕ್ಷಕರಿಗೆ ಮತ್ತು ಮಳೆ ವರದಿಗಾರರಿಗೆ ಎರಡು ವರ್ಷಗಳಿಂದ ಗೌರವ ಧನ ನೀಡಿಲ್ಲ. ಕೆಲವು ಕಡೆ ಒಂದೂವರೆ ವರ್ಷದಿಂದ ನೀಡಿಲ್ಲ. ಮಳೆ ಮಾಪನ ಕೇಂದ್ರಗಳ ವೀಕ್ಷಕರಿಗೆ ಮಾಸಿಕ ₹900ರಂತೆ ಇಲಾಖೆಯಿಂದಲೇ ನೇರವಾಗಿ ಗೌರವ ಧನ ಪಾವತಿಸಿದರೆ, ಜಲ ಹವಾ ಮಾಪನ ಕೇಂದ್ರಗಳ ವರದಿಗಾರರಿಗೆ ₹8,000ರಂತೆ ಮಾಸಿಕ ಗೌರವ ಧನ ಹೊರಗುತ್ತಿಗೆ ಸಂಸ್ಥೆಯ ಮೂಲಕ ಪಾವತಿಸಲಾಗುತ್ತಿತ್ತು. ಆದರೆ ಈ ಎರಡು ವರ್ಷಗಳಿಂದ ಗೌರವ ಧನವೇ ನೀಡು ತ್ತಿಲ್ಲ. ಕೇಳಿದರೆ ಸರ್ಕಾರ ದಿಂದಲೇ ಬಂದಿಲ್ಲ. ಬಂದ ಕೂಡಲೇ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಲೇ ನಮ್ಮನ್ನು 2 ವರ್ಷಗಳಿಂದ ದುಡಿಸಿಕೊಂಡಿದ್ದಾರೆ. ಇನ್ನೆಷ್ಟು ವರ್ಷ ಹಣ ಇಲ್ಲದೇ ಕೆಲಸ ಮಾಡಬೇಕು ಎಂದು ತಾಲ್ಲೂಕು ಜಲ ಹವಾಮಾಪನ ಕೇಂದ್ರದ ವರದಿಗಾರ ಶ್ರೀಮಂತ ದುಕಾನದಾರ ಪ್ರಶ್ನಿಸುತ್ತಾರೆ.
ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ದತ್ತಾಂಶವನ್ನು ವೀಕ್ಷಕರು ಪಡೆದುಕೊಂಡು ತಾಲ್ಲೂಕು ಕೇಂದ್ರದ ಜಲ ಹವಾ ಮಾಪನ ಕೇಂದ್ರದ ವರದಿಗಾರರಿಗೆ ನೀಡಬೇಕು. ಆಗ ವರದಿಗಾರರು ತಹಶೀಲ್ದಾರ್ ಕಚೇರಿಯ ಅಂಕಿ ಸಂಖ್ಯೆ ಇಲಾಖೆಗೆ ಹಾಗೂ ಜಲ ಸಂಪನ್ಮೂಲ ಇಲಾಖೆಗೆ ನೀಡಬೇಕು. ಆದರೆ ಮಳೆಮಾಪನ ಕೇಂದ್ರಗಳ ವೀಕ್ಷಕರು ಮತ್ತು ವರದಿಗಾರರು ಅಘೋಷಿತ ಮುಷ್ಕರ ಹೂಡಿದ್ದರಿಂದ ಮಳೆ ಮಾಹಿತಿಯೇ ಲಭಿಸುತ್ತಿಲ್ಲ.
ದಿನ ಬೆಳಗಾದರೆ ಬೆಳಿಗ್ಗೆ 8.30ರ ಒಳಗಾಗಿ ಮಳೆಗಾಲದಲ್ಲಿ ತಾಲ್ಲೂಕು ಕೇಂದ್ರ ಹಾಗೂ ಹೋಬಳಿ ಹಾಗೂ ಪ್ರಮುಖ ಗ್ರಾಮಗಳ ಮಳೆ ಮಾಪನ ಕೇಂದ್ರಗಳ ವರದಿ ಮೊಬೈಲ್‌ಗೆ ಬರುತ್ತಿತ್ತು. ಆದರೆ ಪ್ರಸಕ್ತ ವರ್ಷ ಇಂತಹ ವರದಿ ವೀಕ್ಷಕರು ಹಾಗೂ ವರದಿಗಾರರು ಇಲಾಖೆ ಜತೆಗೆ ಹಂಚಿಕೊಳ್ಳದೇ ಮುಷ್ಕರ ಹೂಡಿದ್ದಾರೆ.
‘ಕನಿಷ್ಠ ಗೌರವಧನಕ್ಕೆ ದುಡಿಯುವ ನಮಗೆ 2 ವರ್ಷಗಳಿಂದ ಗೌರವಧನ ನೀಡದಿರುವುದು ಇಲಾಖೆಯ ಬೇಜವಾಬ್ದಾರಿಯಾಗಿದೆ. ಸರ್ಕಾರದಿಂದ ಎರಡು ವರ್ಷಗಳಿಂದ ಬಜೆಟ್ ಬಾರದೇ ಇರು ತ್ತದೆಯೇ’ ಎಂದು ದೇವರಹಿಪ್ಪರಗಿಯ ವರದಿಗಾರ ಸಿದ್ದಲಿಂಗ ಮುರುಗಾನೂರ ಅಸಮಾಧಾನ ವ್ಯಕ್ತಪಡಿಸಿದರು.
‘ವೀಕ್ಷಕರಿಗೆ ಹಾಗೂ ವರದಿಗಾರರಿಗೆ ಗೌರವಧನ ಬಾಕಿ ಇರುವುದು ಗಮನಕ್ಕೆ ಬಂದಿದೆ. ಈಗ ಎರಡು ತಿಂಗಳ ಗೌರವಧನ ಸರ್ಕಾರದಿಂದ ಬಿಡುಗಡೆಯಾಗಿದ್ದು, ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ ಹಾಗೂ ಶಾಖಾಧಿಕಾರಿ ರಾಮಶೆಟ್ಟಿ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-34-976582734