
ರಕ್ಷಾಬಂಧನದ ದಿನವೇ ಸಹೋದರನಿಗೆ ವಿಶೇಷ ಉಡುಗೊರೆ ನೀಡಿದ ನಟಿ ಸ್ಪಂದನಾ ಸೋಮಣ್ಣ
ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರು ರಕ್ಷಾ ಬಂಧನ ನಿಮಿತ್ತ ತಮ್ಮ ಸಹೋದರನಿಗೆ ಉಡುಗೊರೆವೊಂದನ್ನು ಕೊಟ್ಟಿದ್ದಾರೆ. ಮೊದಲ ಬಾರಿಗೆ ತಮ್ಮನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಅದರ ಜೊತೆಗೆ ‘ನನ್ನ ತಮ್ಮ ಈ ಉಡುಗೊರೆಗೆ ಅರ್ಹನಾಗಿದ್ದ. ನಿನಗೆ ಕಾರನ್ನು ಉಡುಗೊರೆಯಾಗಿ ಕೊಡಲು ನನಗೆ ತುಂಬಾ ಸಂತೋಷವಾಗುತ್ತಿದೆ ಚಿಂಟು’ ಎಂದಿದ್ದಾರೆ.
ತಮ್ಮನಿಗೆ ಹ್ಯುಂಡೈ ವೆನ್ಯೂ ಕಾರನ್ನು ಕೊಟ್ಟಿರುವ ಸ್ಪಂದನಾ ಅವರು, ‘ನೀನು ನನಗೆ ನೀಡಿದ ಪ್ರತಿಯೊಂದು ಉಡುಗೊರೆಗಳೂ ನನಗಿನ್ನೂ ನೆನಪಿವೆ. ನೀನು ಬಿಡಿಸಿದ ಚಿತ್ರಗಳು, ಬರೆದ ಪತ್ರಗಳು, ಆ ಪುಟಾಣಿ ಕಿವಿ ಓಲೆಗಳು ಮತ್ತು ನೀನು ಕೊಟ್ಟ ಆ ಸುಂದರ ನೆನಪುಗಳು’ ಎಂದು ಭಾವುಕರಾಗಿದ್ದಾರೆ.
‘ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಿದ್ದ ದಿನಗಳಿಂದ ಹಿಡಿದು, ಪ್ರತಿಯೊಂದನ್ನೂ ಹಂಚಿಕೊಳ್ಳುವವರೆಗೆ... ಈಗ ನೀನು ಕಾರನ್ನು ಪಡೆಯುತ್ತಿರುವುದನ್ನು ನೋಡಿದರೆ ಬದುಕು ಸಂಪೂರ್ಣಗೊಂಡಿದೆ ಎಂದು ಭಾಸವಾಗುತ್ತಿದೆ’ ಎಂದಿದ್ದಾರೆ.
‘ಪ್ರತಿ ಜನ್ಮದಲ್ಲೂ ನೀನೇ ನನ್ನ ತಮ್ಮನಾಗಿ ಹುಟ್ಟಬೇಕೆಂಬುದೇ ನನ್ನ ಆಸೆ. ಇಂದು ನೀನು ಬೆಳೆದು ನಿಂತಿರುವ ರೀತಿ ನೋಡಿ ನನಗೆ ಹೆಮ್ಮೆಯಾಗುತ್ತಿದೆ. ಏನೇ ಬಂದರೂ ನಾನು ಎಂದಿಗೂ ನಿನ್ನ ಬೆನ್ನಿಗಿರುತ್ತೇನೆ. ರಕ್ಷಾ ಬಂಧನದ ಶುಭಾಶಯಗಳು ಚಿಂಟು’ ಎಂದು ಬರೆದುಕೊಂಡಿದ್ದಾರೆ.
ನಟಿ ಸ್ಪಂದನಾ ಸೋಮಣ್ಣ ಅವರು ಕರಿಮಣಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದರು. ತಮ್ಮ ನಟನೆ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಸ್ಪಂದನಾ, ಬಿಗ್ ಬಾಸ್ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್‌ನಿಂದ ಆಚೆಬಂದ ಬಳಿಕ ನಟಿ ಹೊಸ ಧಾರಾವಾಹಿ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ.