
Bengaluru Parking System: ಜಯನಗರದಲ್ಲಿ ನೂತನ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ರಸ್ತೆ ಬದಿಯ ಪಾರ್ಕಿಂಗ್ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಲು ಮುಂದಾಗಿದೆ. ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸಲು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 'ಸ್ಮಾರ್ಟ್ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ'ಯನ್ನು ಜಾರಿಗೆ ತರಲಾಗಿದೆ. ಹೀಗೆ ಹಂತ ಹಂತವಾಗಿ ಜಿಬಿಎ ನಗರಾದ್ಯಂತ ಈ ಹೊಸ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 1215 ರಸ್ತೆಗಳ ಒಟ್ಟಾರೆ ಉದ್ದ 281 ಕಿ.ಮೀ. ಗಳಾಗಿರುತ್ತವೆ. ಈ ಪೈಕಿ ಸಮಗ್ರ ಅಧ್ಯಯನ ಹಾಗೂ ಸಂಚಾರಿ ಪೊಲೀಸರ ಅನುಮತಿ ಮೇರೆಗೆ, ಒಟ್ಟು 31.65 ಕಿ.ಮೀ. ಉದ್ದದ ಪ್ರಮುಖ 42 ವಾಣಿಜ್ಯ ರಸ್ತೆಗಳನ್ನು ಮಾತ್ರ ಈ ಪಾರ್ಕಿಂಗ್ ಯೋಜನೆಗಾಗಿ ಬಳಸಿಕೊಳ್ಳಲಾಗುವುದು ಎಂದು ಆಯುಕ್ತ ಕೆ.ಎನ್. ರಮೇಶ್ ರವರು ತಿಳಿಸಿದರು.
ಮೊಬೈಲ್ ಆ್ಯಪ್ ಮೂಲಕ ಪಾರ್ಕಿಂಗ್ ಸ್ಲಾಟ್‌ಗಳ ನಿಗದಿ
ಗುರುತಿಸಲಾದ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನೊಳಗೊಂಡ ಒಟ್ಟು 4,749 ಪಾರ್ಕಿಂಗ್ ಸ್ಲಾಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ದ್ವಿಚಕ್ರ ವಾಹನಗಳಿಗೆ ಸುಮಾರು 3,800 ಹಾಗೂ ಕಾರುಗಳಿಗೆ 900ಕ್ಕೂ ಅಧಿಕ ಸ್ಲಾಟ್‌ಗಳು ಇರಲಿದ್ದು, ಆಟೋರಿಕ್ಷಾ, ಸೈಕಲ್‌ಗಳಿಗೆ ಪ್ರತ್ಯೇಕ ಸ್ಥಳ ಹಾಗೂ ಪ್ರಯಾಣಿಕರ ಪಿಕ್-ಅಪ್ ಮತ್ತು ಡ್ರಾಪ್-ಆಫ್‌ಗೆ ಪ್ರತ್ಯೇಕ ಜಾಗವನ್ನು ಕಲ್ಪಿಸಲಾಗಿದೆ. ವಾಹನ ಸವಾರರು ಮೊಬೈಲ್ ಆ್ಯಪ್, ವೆಬ್‌ಸೈಟ್ ಹಾಗೂ ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ಗಳ ಮೂಲಕ ಲಭ್ಯವಿರುವ ಸ್ಥಳಗಳನ್ನು ಪರಿಶೀಲಿಸಿ, ಯುಪಿಐ ಮತ್ತು ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ಮಾಡಬಹುದಾಗಿದೆ.
ರಾತ್ರಿ ವೇಳೆ ಉಚಿತ ಪಾರ್ಕಿಂಗ್ ಸೌಲಭ್ಯ
ಸಾರ್ವಜನಿಕರ ಹಾಗೂ ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ರಾತ್ರಿ 12:00 ಗಂಟೆಯಿಂದ ಬೆಳಿಗ್ಗೆ 09:00 ಗಂಟೆಯವರೆಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ವಾಹನಗಳನ್ನು ಯಾವುದೇ ಶುಲ್ಕವಿಲ್ಲದೆ ನಿಗದಿತ ಸ್ಲಾಟ್‌ಗಳಲ್ಲಿ ಪಾರ್ಕ್ ಮಾಡಲು ಅವಕಾಶ ನೀಡಲಾಗಿದೆ. ಎಂದು ಆಯುಕ್ತರು ಹೇಳಿದರು.
400 ಕ್ಕೂ ಅಧಿಕ ಕೃತಕ ಬುದ್ಧಿಮತ್ತೆ (AI) ಕ್ಯಾಮೆರಾಗಳ ಕಣ್ಗಾವಲು
ಬೆಳಿಗ್ಗೆ 9 ರಿಂದ ರಾತ್ರಿ 12ರವರೆಗೆ ಆರಂಭಿಕವಾಗಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ ₹15 ಹಾಗೂ ಕಾರುಗಳಿಗೆ ₹30 ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗಿದೆ. ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ಪಾಲಿಕೆಯ ನಿಯಮಾವಳಿಗಳ ಅನ್ವಯ ಪಾಸ್‌ಗಳನ್ನು ಪಡೆಯಲು ಅವಕಾಶವಿರುತ್ತದೆ. ಪಾರ್ಕಿಂಗ್ ಉಲ್ಲಂಘನೆಗಳನ್ನು ಪತ್ತೆಹಚ್ಚಲು AI ಆಧಾರಿತ 400 ಕ್ಕೂ ಅಧಿಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ನಿಗದಿತ ಸಮಯ ಮೀರಿದ ವಾಹನಗಳು, ಡಬಲ್ ಪಾರ್ಕಿಂಗ್ ಹಾಗೂ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳ ವಿರುದ್ಧ ಕ್ಲ್ಯಾಂಪಿಂಗ್, ಟೋಯಿಂಗ್ ಮತ್ತು ದಂಡ ವಿಧಿಸಲಾಗುತ್ತದೆ.
ಪಾಲಿಕೆ ಇತರೆ ಕಡೆಗಳಲ್ಲಿ ವ್ಯವಸ್ಥೆ ಜಾರಿ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ನ ಮುಕ್ತ ಟೆಂಡರ್ ಮೂಲಕ 'ಮೆ ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯನ್ನು 5 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಆಯ್ಕೆ ಮಾಡಲಾಗಿದೆ. ಪಾರ್ಕಿಂಗ್ ಶುಲ್ಕ ಹಾಗೂ ಕ್ಲ್ಯಾಂಪಿಂಗ್, ಟೋಯಿಂಗ್ ದಂಡ ಸಂಗ್ರಹಕ್ಕೆ ಪ್ರತ್ಯೇಕವಾದ ಖಾತೆ ತೆರೆದಿದ್ದು, ಅದರಲ್ಲಿ ಸಂಗ್ರಹವಾದ ಮೊತ್ತವನ್ನು ಪಾಲಿಕೆ ಮತ್ತು ಸಂಚಾರ ಪೊಲೀಸ್ ಇಲಾಖೆ ನಡುವೆ ಹಂಚಿಕೆಯಾಗಲಿದೆ.
ಪಾಲಿಕೆಯ ಭಾಗವು ರಸ್ತೆ ಸುರಕ್ಷತೆ ಹಾಗೂ ಪಾದಚಾರಿ ಮಾರ್ಗಗಳಿಗಾಗಿ ಪುನರ್ವಿನಿಯೋಗಗೊಳ್ಳಲಿದೆ. ಮುಂಬರುವ 4 ರಿಂದ 5 ತಿಂಗಳಲ್ಲಿ ಹಂತ-ಹಂತವಾಗಿ ಈ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ನಗರದ ಇತರ ಕ್ಷೇತ್ರಗಳಿಗೂ ವಿಸ್ತರಿಸಲಾಗುವುದು ಎಂದರು.
ಪಾಲಿಕೆ ಹಾಗೂ ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಕಂಪನಿ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಆಯುಕ್ತರಾದ ಕೆ.ಎನ್.ರಮೇಶ್ ರವರ ಸಮ್ಮುಖದಲ್ಲಿ ಪಾಲಿಕೆಯ ಟ್ರಾಫಿಕ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಟೆಂಡರ್ ಮೂಲಕ ಆಯ್ಕೆಗೊಂಡ ಸಂಸ್ಥೆಯು ಜಯನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಲಿದೆ.