
AUS vs BAN | ಮಿಂಚಿದ ಆಸೀಸ್ ವೇಗಿಗಳು; 64 ರನ್‌ಗಳಿಗೆ ಬಾಂಗ್ಲಾ ಆಲೌಟ್
ಮ್ಯಾಕೆ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ಬಾಂಗ್ಲಾದೇಶ ತಂಡವು, ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ 64 ರನ್‌ಗೆ ಆಲೌಟ್ ಆಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ಬ್ಯಾಟರ್‌ಗಳು ಅನುಭವಿ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆತಗಳನ್ನು ಎದುರಿಸಲು ಪರದಾಡಿದರು.
ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಬಾಂಗ್ಲಾ ಬ್ಯಾಟರ್‌ಗಳು, ಎರಡನೇ ಟೆಸ್ಟ್‌ನಲ್ಲಿ ಫೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕ ಆಟಗಾರರಾದ ಶಾದ್ಮಾನ್ ಇಸ್ಲಾಂ, ತಂಝಿದ್ ಹಸನ್ ತಮೀಮ್ ಖಾತೆ ತೆರೆಯಲು ಕೂಡ ವಿಫಲರಾದರು.
ನಾಯಕ ನಜ್ಮುಲ್ ಹೊಸೇನ್ ಶಾಂಟೊ, ಅನುಭವಿ ಆಟಗಾರ ಲಿಟನ್ ದಾಸ್ ಕೂಡ ಶೂನ್ಯಕ್ಕೆ ಔಟಾದರು. ಮೊಮಿನುಲ್ ಹಕ್ 9 ರನ್‌ಗಳಿಸಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್, ಮುಷ್ಫಿಕುರ್ ರಹೀಮ್(5 ರನ್), ಮೆಹಿದಿ ಹಸನ್ ಮಿರಾಜ್(11 ರನ್) ತಸ್ಕಿನ್ ಅಹ್ಮದ್(1 ರನ್) ಅವರ ವಿಕೆಟ್ ಕಬಳಿಸಿದರು.
11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶೋರಿಫುಲ್ ಇಸ್ಲಾಂ ಅವರು 14 ರನ್ ಗಳಿಸಿದ್ದು ಬಾಂಗ್ಲಾ ಪರ ದೊಡ್ಡ ಮೊತ್ತವಾಗಿದೆ.
ಆಸ್ಟ್ರೇಲಿಯಾ ಪರ ಸ್ಟಾರ್ಕ್ 6 ವಿಕೆಟ್, ಕಮಿನ್ಸ್ 3 ವಿಕೆಟ್ ಹಾಗೂ ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಕಬಳಿಸಿದರು.