ಮೈಸೂರು: ರಾಜ್‌ ಉದ್ಯಾನದಲ್ಲಿ ಟಾಂಗಾ ನಿಲ್ದಾಣ

ಮೈಸೂರು: ರಾಜ್‌ ಉದ್ಯಾನದಲ್ಲಿ ಟಾಂಗಾ ನಿಲ್ದಾಣ

ಮೈಸೂರು: ರಾಜ್‌ ಉದ್ಯಾನದಲ್ಲಿ ಟಾಂಗಾ ನಿಲ್ದಾಣ

ಮೈಸೂರು: ಇಲ್ಲಿನ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ರಾಜಕುಮಾರ್ ಉದ್ಯಾನದಲ್ಲಿ ಟಾಂಗಾ ನಿಲ್ದಾಣ ತಲೆ ಎತ್ತುತ್ತಿದೆ. ಇಲ್ಲಿ ಟಾಂಗಾ ಸವಾರಿಗೆ ಪ್ರಿಪೇಯ್ಡ್‌ ಸೇವೆ ದೊರೆಯಲಿದೆ.

ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಸ್ವದೇಶಿ ದರ್ಶನ್‌ 2.0’ ಯೋಜನೆಯಡಿ ಈ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ. ಪಾರಂಪರಿಕ ನಗರಿ ಮೈಸೂರಿನ ವಿಶೇಷಗಳಲ್ಲಿ ಒಂದಾಗಿರುವ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ‘ಟಾಂಗಾ ಸವಾರಿ’ಯ ಅನುಭವವನ್ನು ಮತ್ತಷ್ಟು ಮುದಗೊಳಿಸಲು ನಿಲ್ದಾಣಗಳ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ‘ಟಾಂಗಾ ರೈಡ್ ಎಕ್ಸ್‌ಪೀರಿಯೆನ್ಸ್‌’ (ಟಾಂಗಾ ಸವಾರಿ ಅನುಭವ) ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಪುರಭವನದ ಎದುರಿನ ಪಾದಚಾರಿ ಮಾರ್ಗದಲ್ಲಿ ಟಾಂಗಾ ನಿಲ್ದಾಣ ನಿರ್ಮಾಣಕ್ಕೆ ಯೋಜಿಸಿ, ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಇದಕ್ಕೆ ವಿವಿಧ ಸಂಘಟನೆಗಳ ವಿರೋಧ ವ್ಯಕ್ತವಾದ್ದರಿಂದ, ರಾಜಕುಮಾರ್‌ ಉದ್ಯಾನದ ಒಂದು ಭಾಗದಲ್ಲಿ ಟಾಂಗಾ ನಿಲ್ದಾಣ ನಿರ್ಮಿಸಲಾಗುತ್ತಿದೆ.

ಐದು ಕಡೆ: ನಗರದ ಐದು ಕಡೆ ಮುಂಗಡ ಪಾವತಿ (ಪ್ರಿಪೇಯ್ಡ್‌) ಟಾಂಗಾ ನಿಲ್ದಾಣ ನಿರ್ಮಿಸಲು ಯೋಜಿಸಲಾಗಿದೆ. ಅವುಗಳಲ್ಲಿ ರಾಜಕುಮಾರ್ ಉದ್ಯಾನದ್ದೂ ಒಂದು. ಟಾಂಗಾ ಟಿಕೆಟ್ ಕೌಂಟರ್, ಎಟಿಎಂ, ಕಾಫಿ ಶಾಪ್ ಹಾಗೂ ಮೈಸೂರಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿ ಕೇಂದ್ರವನ್ನು ಇದು ಒಳಗೊಂಡಿರಲಿದೆ ಎಂದು ಇಲಾಖೆ ತಿಳಿಸಿದೆ.

ಕೆಎಸ್‌ಆರ್‌ಸಿಟಿ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ಟಾಂಗಾ ಲಾಯಗಳ ಅಭಿವೃದ್ಧಿ ಹಾಗೂ ಟಿಕೆಟ್ ಕೌಂಟರ್‌ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.

‘ಕುಕ್ಕರಹಳ್ಳಿ ಕೆರೆ ಬಳಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆದರೆ, ರೈಲ್ವೆ ಅಂಡರ್‌ಪಾಸ್ ಯೋಜನೆ ಕಾರಣದಿಂದ ದೋಬಿಘಾಟ್ ಬಳಿಗೆ ಸ್ಥಳ ಬದಲಾವಣೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಕೆಲಸ ಆರಂಭಿಸುತ್ತೇವೆ’ ಎಂದು ಯೋಜನೆಯ ಸಹಾಯಕ ಎಂಜಿನಿಯರ್ ಪುನೀತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಪ್ರವಾಸೋದ್ಯಮ ಸಮಿತಿಯು ಟಾಂಗಾ ಅಸೋಸಿಯೇಷನ್‌ಗಳ ಎಲ್ಲಾ ಟಾಂಗಾ ಚಾಲಕರ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ ಹಾಗೂ ಪ್ರಯಾಣ ದರವನ್ನು ನಿಗದಿಪಡಿಸಲಿದೆ. ಈ ಬಾರಿಯ ದಸರಾ ಹೊತ್ತಿಗೆ ನಿಲ್ದಾಣ ಸಿದ್ಧಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಐದು ವರ್ಷಗಳವರೆಗೆ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಟಾಂಗಾ ಮಾಲೀಕರು ದಸರಾ ಸಮಯದಲ್ಲಿ ಪ್ರವಾಸಿಗರ ಬಳಿ ಹೆಚ್ಚಿನ ಹಣ ಕೇಳುವುದು ಕಂಡುಬರುತ್ತಿದೆ. ಇದಕ್ಕೆ, ದರ ನಿಗದಿಪಡಿಸುವುದು ಮತ್ತು ಪ್ರಿಪೇಯ್ಡ್‌ ಟಿಕೆಟ್ ವ್ಯವಸ್ಥೆಯು ಪರಿಹಾರ ಆಗಬಲ್ಲದು. ಪ್ರವಾಸಿಗರಿಗೆ ಅನಗತ್ಯ ತೊಂದರೆ ತಪ್ಪಿಸಲು ಈ ಕ್ರಮ ಅಗತ್ಯ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯೂ ಆಗುತ್ತದೆ. ವೃತ್ತದಲ್ಲಿ ವಾಹನಗಳ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಸ್ಥಳೀಯರು ಪ್ರತಿಕ್ರಿಯಿಸಿದರು.

‘ಟಾಂಗಾ ಚಾಲಕರ ಅಭಿಪ್ರಾಯ ಪಡೆಯದೇ ಪ್ರಿಪೇಯ್ಡ್‌ ಟಾಂಗಾ ನಿಲ್ದಾಣ ನಿರ್ಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಟಾಂಗಾದವರಿಗೆ ಯಾವುದೇ ಮಾಹಿತಿ ನೀಡದೆ ಯೋಜನೆ ಕೈಗೊಂಡಿದೆ. ಮೈಸೂರು ಷಾ ಪಸಂದ್ ಟಾಂಗಾ ಸ್ಟ್ಯಾಂಡ್ ಸಂಘದಿಂದ ಯಾವುದೇ ವಿರೋಧ ಇಲ್ಲ. ಆದರೆ, ಮುಂದೆ ಟಿಕೆಟ್‌ ಮೊತ್ತ ನಿರ್ಧರಿಸುವಾಗ ನಮ್ಮ ಅಭಿಪ್ರಾಯ ಪಡೆಯಬೇಕು’ ಎಂದು ಒತ್ತಾಯಿಸುತ್ತಾರೆ ಮೈಸೂರು ಷಾ ಪಸಂದ್‌ ಟಾಂಗಾ ಸ್ಟ್ಯಾಂಡ್‌ ಸಂಘದ ಅಧ್ಯಕ್ಷ ಮೊಹಮ್ಮದ್ ಫಯಾಜ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-39-2127500391

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ