
ಹಾವೇರಿ | ಪಡಿತರ: 8.23 ಲಕ್ಷ ಇ–ಕೆವೈಸಿ ಬಾಕಿ
ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಪಡಿತರ ಪಡೆಯುತ್ತಿರುವ ಪಡಿತರದಾರರು, 5 ವರ್ಷಕ್ಕೊಮ್ಮೆ ಇ–ಕೆವೈಸಿ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪ್ರಸಕ್ತ ವರ್ಷದಲ್ಲಿ ಇ–ಕೆವೈಸಿ ಪ್ರಕ್ರಿಯೆ ಶುರುವಾಗಿದ್ದು, ಹಾವೇರಿ ಜಿಲ್ಲೆಯ 8.23 ಲಕ್ಷ ಮಂದಿ ಇ–ಕೆವೈಸಿ ಬಾಕಿ ಉಳಿಸಿಕೊಂಡಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಸಾಮಗ್ರಿ ಪಡೆಯುತ್ತಿರುವ ಎಲ್ಲ ಫಲಾನುಭವಿಗಳ ಆಧಾರ್ ಸೀಡಿಂಗ್ ಮತ್ತು ಇ–ಕೆವೈಸಿ ಮಾಡಿಸಲು ಸೆ. 30ರವರೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ನ್ಯಾಯಬೆಲೆ ಅಂಗಡಿಗಳಿಗೆ ಖಡಕ್ ಸೂಚನೆ ನೀಡಿರುವ ಆಹಾರ ಇಲಾಖೆ, ‘ಇ–ಕೆವೈಸಿ ಮಾಡಿಸದ ಫಲಾನುಭವಿಗಳಿಗೆ ಮಾಹಿತಿ ನೀಡಿ, ಅವರಿಂದ ಇ–ಕೆವೈಸಿ ಮಾಡಿಸಿ’ ಎಂದು ಹೇಳಿದೆ.
‘ಪಡಿತರ ಚೀಟಿದಾರರು ಪ್ರತಿ 5 ವರ್ಷಕ್ಕೊಮ್ಮೆ ಇ–ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. 5 ವರ್ಷದ ಹಿಂದೆ ಇ–ಕೆವೈಸಿ ಮಾಡಿಸಿರುವ ಎಲ್ಲರೂ ಈಗ ಇ–ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ, ಪಡಿತರ ಚೀಟಿಯಿಂದ ಹೆಸರು ಅಳಿಸಿ ಹಾಕಲು ಅವಕಾಶವಿರುತ್ತದೆ’ ಎಂದು ಆಹಾಯ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಇ–ಕೆವೈಸಿ ಮಾಡಿಸುವ ಜವಾಬ್ದಾರಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗಿದೆ. ಪಡಿತರ ಚೀಟಿದಾರರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬೇಕು. ಆಧಾರ್ ಸಂಖ್ಯೆ ಹಾಗೂ ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ತಿಳಿಸಬೇಕು. ಬಯೋಮೆಟ್ರಿಕ್ ದೃಢೀಕರಣ ನೀಡುವ ಮೂಲಕ ಇ–ಕೆವೈಸಿ ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದೆ’ ಎಂದು ಹೇಳಿದರು.
3.97 ಲಕ್ಷ ಪಡಿತರ ಚೀಟಿ: ‘ಹಾವೇರಿ ಜಿಲ್ಲೆಯಲ್ಲಿ 3.97 ಲಕ್ಷ ಪಡಿತರ ಚೀಟಿಗಳಿವೆ. ಪ್ರತಿ ಕುಟುಂಬದ ಸದಸ್ಯರ ಸಂಖ್ಯೆ ಆಧರಿಸಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಚೀಟಿಗಳ ಸದಸ್ಯರ ಪೈಕಿ ಹಲವರು ಈಗಾಗಲೇ ಇ–ಕೆವೈಸಿ ಮಾಡಿಸಿದ್ದಾರೆ. ಈಗ 8.23 ಲಕ್ಷ ಮಂದಿ ಮಾತ್ರ ಇ–ಕೆವೈಸಿ ಮಾಡಿಸುವುದು ಬಾಕಿಯಿದೆ’ ಎಂದು ಮಂಜುನಾಥ್ ಹೇಳಿದರು.
‘ಹಲವು ಪಡಿತರ ಚೀಟಿದಾರರು ಮೂಲ ವಿಳಾಸದಿಂದ ಸ್ಥಳಾಂತರಗೊಂಡಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಅರ್ಹರಲ್ಲದವರ ಹೆಸರು ಚೀಟಿಯಲ್ಲಿದೆ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ, ಅರ್ಹರಿಗೆ ಪಡಿತರ ನೀಡುವ ಉದ್ದೇಶದಿಂದ ಇ–ಕೆವೈಸಿ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದರು.
‘ಇ–ಕೆವೈಸಿ ಮಾಡಿಸಿದವರಿಗೆ ಮಾತ್ರ ಮುಂದಿನ ದಿನಗಳಲ್ಲಿ ಪಡಿತರ ಸಿಗಲಿದೆ. ಬಾಕಿ ಉಳಿಸಿಕೊಂಡವರನ್ನು ಅನರ್ಹರೆಂದು ತೀರ್ಮಾನಿಸಿ, ಚೀಟಿಯಿಂದ ಹೆಸರು ತೆಗೆಯಲು ಅವಕಾಶವಿರುತ್ತದೆ’ ಎಂದು ಹೇಳಿದರು.
ರಾಣೆಬೆನ್ನೂರಿನಲ್ಲಿ ಹೆಚ್ಚು ಬಾಕಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಪಡಿತರದಾರರು ಇ–ಕೆವೈಸಿ ಮಾಡಿಸುವುದು ಬಾಕಿಯಿದೆ. ಹಾವೇರಿ, ಹಾನಗಲ್, ಶಿಗ್ಗಾವಿ, ಬ್ಯಾಡಗಿ, ಸವಣೂರು, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕುಗಳು ನಂತರದ ಸ್ಥಾನದಲ್ಲಿವೆ. ಇ–ಕೆವೈಸಿ ಬಾಕಿ ಇರುವ ಪಡಿತರದಾರರ ತಾಲ್ಲೂಕುವಾರು ಪಟ್ಟಿ ಸಿದ್ಧಪಡಿಸಲಾಗಿದೆ. ಅದರನ್ವಯ, ನ್ಯಾಯಬೆಲೆ ಅಂಗಡಿ ಮೂಲಕ ಇ–ಕೆವೈಸಿ ಮಾಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಮಂಜುನಾಥ್ ಹೇಳಿದರು.
ತಾಲ್ಲೂಕುವಾರು ಕೆವೈಸಿ ಬಾಕಿ ಇರುವ ಸಂಖ್ಯೆ
ರಾಣೆಬೆನ್ನೂರು; 1,72,960
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-22-1624038013