ರಾಜೀನಾಮೆ ನೀಡಿ 7 ವರ್ಷವಾಯಿತು, ಈಗಲಾದರೂ ಅಂಗೀಕರಿಸಿ: ಮೋದಿಗೆ IAS ಅಧಿಕಾರಿ ಮನವಿ

ರಾಜೀನಾಮೆ ನೀಡಿ 7 ವರ್ಷವಾಯಿತು, ಈಗಲಾದರೂ ಅಂಗೀಕರಿಸಿ: ಮೋದಿಗೆ IAS ಅಧಿಕಾರಿ ಮನವಿ

ರಾಜೀನಾಮೆ ನೀಡಿ 7 ವರ್ಷವಾಯಿತು, ಈಗಲಾದರೂ ಅಂಗೀಕರಿಸಿ: ಮೋದಿಗೆ IAS ಅಧಿಕಾರಿ ಮನವಿ

ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ. ಇದರ ಬೆನ್ನಲ್ಲೇ, ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಹಂಚಿಕೊಂಡಿರುವ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಏಳು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದೇನೆ ಎಂಬುದನ್ನು ನೆನಪಿಸಿರುವ ಕಣ್ಣನ್‌, ಪ್ರಧಾನಿ ಅವರ ಕಾಲೆಳೆಯುವ ಪ್ರಯತ್ನವನ್ನೂ ಮಾಡಿದ್ದಾರೆ.

ಜುಲೈ 27ರಂದು ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ‘ಪ್ರೀತಿಯ ನರೇಂದ್ರ ಮೋದಿ ಅವರೇ, ನೀವು ಈಗ ರಾಜೀನಾಮೆ ಸ್ವೀಕರಿಸುವುದನ್ನು ಆರಂಭಿಸಿದ್ದೀರಿ. ದಯವಿಟ್ಟು ನನ್ನ ರಾಜೀನಾಮೆಯನ್ನೂ ಅಂಗೀಕರಿಸಿ. ಏಳು ವರ್ಷಗಳಾದವು’ ಎಂದು ಬರೆದುಕೊಂಡು, ವ್ಯಂಗ್ಯವಾಗಿ ತಿವಿದಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ‘ನೀವು 2019ರಲ್ಲೇ ಸಲ್ಲಿಸಿರುವ ರಾಜೀನಾಮೆಯನ್ನು ಸರ್ಕಾರ ಇನ್ನೂ ಸ್ವೀಕರಿಸದಿದ್ದರೆ, ನೀವು ವೇತನ ಪಡೆಯುತ್ತಿರಬೇಕು. ಆದರೆ, ಅದನ್ನೂ ಮಾಡುತ್ತಿಲ್ಲವೆಂದು ಭಾವಿಸುತ್ತೇನೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಣ್ಣನ್‌, ‘ಇಲ್ಲ. ವೇತನವೂ ಇಲ್ಲ, ಅಮಾನತೂ ಇಲ್ಲ, ಏನೂ ಇಲ್ಲ. ಹಾಗೇಯೇ ಬಾಕಿ ಇಟ್ಟಿದ್ದಾರೆ; ಬೇರೆಲ್ಲ ವಿಚಾರಗಳಂತೆಯೇ’ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಿ ಎಂದು ಇನ್ನೊಬ್ಬ ವೀಕ್ಷಕರು ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಅವರನ್ನು ವ್ಯಂಗ್ಯ ಮಾಡಿರುವ ಕಣ್ಣನ್‌, ‘ಕ್ಯಾಮೆರಾ ಆ್ಯಂಗಲ್ ಸರಿ ಮಾಡಿಕೊಳ್ಳುತ್ತಿದ್ದೇನೆ.. ಹೊಸ ಟೆಲಿಪ್ರಾಂಪ್ಟರ್ ಖರೀದಿಸುತ್ತಿರುವೆ’ ಎಂದಿದ್ದಾರೆ.

ಅದಕ್ಕೆ ಇನ್ನೊಬ್ಬರು, ಮೇಕಪ್‌ ಕಲಾವಿದರನ್ನು ವ್ಯವಸ್ಥೆ ಮಾಡಿಕೊಳ್ಳಿ ಎಂದು ಕಿಚಾಯಿಸಿದ್ದಾರೆ. ಅದಕ್ಕೂ ಪ್ರತಿಕ್ರಿಯಿಸಿರುವ ಕಣ್ಣನ್‌, ‘ಅವರೆಲ್ಲ ರಾಜೀನಾಮೆ ಕೊಟ್ಟಿದ್ದಾರೆ’ ಎಂದು ಕಿಚಾಯಿಸಿದ್ದಾರೆ.

ಕಣ್ಣನ್ ರಾಜೀನಾಮೆ ನೀಡಿದ್ದು ಏಕೆ?

AGMUT (ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಹಾಗೂ ಕೇಂದ್ರಾಡಳಿತ ಪ್ರದೇಶ) ಕೇಡರ್‌ನ 2012ರನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಕಣ್ಣನ್‌, 2019ರಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ ಎಂದು ಈ ನಿರ್ಧಾರ ಕೈಗೊಂಡಿದ್ದರು.

2025ರಲ್ಲಿ ಕಾಂಗ್ರೆಸ್‌ ಸೇರಿದ್ದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದೇ ತಮ್ಮ ರಾಜೀನಾಮೆಗೆ ಕಾರಣವಾಯಿತು ಎಂದು ಹೇಳಿಕೊಂಡಿದ್ದರು.

‘ವಿಶೇಷ ಸ್ಥಾನಮಾನ ರದ್ದು ಮಾಡುವುದು ಸರ್ಕಾರದ ನಿರ್ಧಾರವೇ ಅಗಿದ್ದರೂ, ಒಂದು ಇಡೀ ರಾಜ್ಯವನ್ನು ಬಂದ್‌ ಮಾಡಿ, ಪತ್ರಕರ್ತರು, ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳನ್ನೆಲ್ಲ ಜೈಲಿಗೆ ಹಾಕಿ, ಸಾರಿಗೆ, ಸಂವಹನ ಮತ್ತು ಅಂತರ್ಜಾಲ ಸ್ಥಗಿತಗೊಳಿಸುವುದು ಸರಿಯೇ?’ ಎಂದು ಕೇಳಿದ್ದರು.

ಕೇರಳದಲ್ಲಿ 2018ರಲ್ಲಿ ಸಂಭವಿಸಿದ ಪ್ರವಾಹದ ವೇಳೆ ಸ್ವಯಂಸೇವಕರಾಗಿ ಕೆಲಸ ಮಾಡುವ ಮೂಲಕ, ನಂತರದ ದಿನಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಟೀಕೆ ಮಾಡಿಯೂ ಸುದ್ದಿಯಾಗಿದ್ದವರು.

ರಾಜೀನಾಮೆ ಅಂಗೀಕಾರವಾಗಿಲ್ಲ ಏಕೆ?

ಕಣ್ಣನ್‌ ಅವರು 2019ರಲ್ಲೇ ರಾಜೀನಾಮೆ ನೀಡಿದ್ದರೂ, ಅವರ ರಾಜೀನಾಮೆ ಈವರೆಗೆ ಅಂಗೀಕಾರವಾಗಿಲ್ಲ. ರಾಜೀನಾಮೆ ವಿಚಾರವು ಗೃಹ ಸಚಿವಾಲಯದಲ್ಲೇ ಬಾಕಿಯಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಕಳುಹಿಸಿಲ್ಲ ಎಂದು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಸೇರಿದಂತೆ ಹಲವು ಮಾಧ್ಯಮಗಳು ಈ ಹಿಂದೆಯೇ ವರದಿ ಮಾಡಿವೆ.

ರಾಜೀನಾಮೆ ಬಳಿಕ ತಮ್ಮ ವಿರುದ್ಧ ಕೈಗೊಂಡಿದ್ದ ಎಲ್ಲ ಶಿಸ್ತು ಕ್ರಮಗಳೂ ಈಗಾಗಲೇ ಮುಗಿದಿವೆ ಎಂದು ಕಣ್ಣನ್‌ 2025ರಲ್ಲಿ ಹೇಳಿಕೊಂಡಿದ್ದರು.

‘ತಾಂತ್ರಿಕವಾಗಿ ಆಡಳಿತದ ಭಾಗವೇ ಆಗಿದ್ದರೂ, ನೀವು ಸರ್ಕಾರವನ್ನು ಟೀಕಿಸಿದ್ದೀರಿ ಎಂದು ಹೇಳಿದ್ದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ವೇತನ ಶ್ರೇಣಿ ಕಡಿತಗೊಳಿಸುವುದಾಗಿ ತಿಳಿಸಿತ್ತು. ನಾನು ವೇತನವನ್ನೇ ಪಡೆಯುತ್ತಿಲ್ಲ ಎಂದಾದ ಮೇಲೆ, ಯಾವ ಶ್ರೇಣಿಯನ್ನು ಕಡಿತಗೊಳಿಸಲಾಗುತ್ತದೆ’ ಎಂದು ಪ್ರಶ್ನಿಸಿದ್ದರು.

‘ನಾನು ನೀಡಿದಾಗಲೇ ರಾಜೀನಾಮೆ ನೀಡಿರುವ ಹಲವರಿಗೆ ಅಂಗೀಕಾರ ಸಿಕ್ಕಿದೆ’ ಎಂದೂ ಹೇಳಿದ್ದರು.

ಫೇಸಲ್‌ ರಾಜೀನಾಮೆ ವಾಪಸ್‌

ಕಣ್ಣನ್‌ ಅವರ ಪ್ರಕರಣವನ್ನು ಮಾಜಿ ಐಎಎಸ್‌ ಅಧಿಕಾರಿ ಶಾ ಫೇಸಲ್‌ ಅವರ ಪ್ರಕರಣದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಅದಾಗಲೇ ರಾಜೀನಾಮೆ ಸಲ್ಲಿಸಿದ್ದ ಶಾ ಅವರಿಗೆ ಅಂಗೀಕಾರ ದೊರೆತಿರಲಿಲ್ಲ. ಆದರೆ, 2022ರಲ್ಲಿ ಅವರು ಮೋದಿ ಸರ್ಕಾರದ ಪರ ಹೇಳಿಕೆಗಳನ್ನು ನೀಡಿದ ನಂತರ, ರಾಜೀನಾಮೆ ಹಿಂಪಡೆದು ಸೇವೆಗೆ ಮರಳಿದ್ದರು.

ಐಪಿಎಸ್‌ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅವರು ತಮ್ಮ ಹುದ್ದೆಗೆ 2019ರಲ್ಲಿ ರಾಜೀನಾಮೆ ನೀಡಿ, 2020ರಲ್ಲಿ ರಾಜಕೀಯ ಪ್ರವೇಶಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ