
ದಾವಣಗೆರೆ 65 ಗ್ರಾಮಗಳಿಗೆ 24 ಗಂಟೆ ಕುಡಿಯುವ ನೀರು ಪೂರೈಕೆ
ದಾವಣಗೆರೆ: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಜಿಲ್ಲೆಯ 65 ಗ್ರಾಮಗಳು ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಸೌಲಭ್ಯ ಪಡೆದಿದ್ದು, ಗ್ರಾಮೀಣ ಪ್ರದೇಶಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡುವಲ್ಲಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ.
ಜೆಜೆಎಂ ಪರಿಣಾಮಕಾರಿ ಅನುಷ್ಠಾನ ಮಾಡಿದ ಜಿಲ್ಲಾ ಪಂಚಾಯಿತಿಯು ಹಳ್ಳಿಯ ‘ಮನೆ ಮನೆಗೆ ಗಂಗೆ’ಯನ್ನು ಕರೆತಂದಿದೆ. ಜಿಲ್ಲೆಯ 75 ಗ್ರಾಮಗಳಿಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದ್ದು, ಇನ್ನೂ 9 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
ಚನ್ನಗಿರಿ, ದಾವಣಗೆರೆ ತಾಲ್ಲೂಕುಗಳ ತಲಾ 14, ನ್ಯಾಮತಿಯ 12, ಹೊನ್ನಾಳಿ, ಜಗಳೂರಿನ ತಲಾ 10 ಹಾಗೂ ಹರಿಹರ ತಾಲ್ಲೂಕಿನ 5 ಗ್ರಾಮಗಳು ಈ ಸೌಲಭ್ಯ ಪಡೆದಿವೆ. ಕೆಲವೇ ದಿನಗಳಲ್ಲಿ ಇನ್ನಷ್ಟು ಗ್ರಾಮಗಳು ಈ ಸೌಲಭ್ಯ ಪಡೆಯಲಿವೆ. ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗುವ ಆತಂಕವಿದ್ದರೂ, ಈ ಯೋಜನೆಯಡಿ ನೀರು ಪೂರೈಸಲು ಯಾವುದೇ ಅಡ್ಡಿಯಾಗದು. ಸುಸ್ಥಿರ ಜಲಮೂಲಗಳ ಮೂಲಕ ನೀರು ಪೂರೈಕೆಗೆ ಒತ್ತು ನೀಡಲಾಗುತ್ತಿದೆ.
‘ನಿರಂತರ ನೀರು ಪೂರೈಕೆ ಮಾಡುವುದರಿಂದ ಜಲಸಂರಕ್ಷಣೆ ಆಗುತ್ತಿದೆ. ದಿನ ಬಿಟ್ಟು ದಿನ ಅಥವಾ ಹಲವು ದಿನಗಳ ಅಂತರದಲ್ಲಿ ನೀರು ಒದಗಿಸುತ್ತಿದ್ದಾಗ ನೀರಿಗೆ ಅಧಿಕ ಬೇಡಿಕೆ ಇತ್ತು. ನಿರಂತರ ನೀರು ಸರಬರಾಜಿನ ಬಳಿಕ ಬೇಡಿಕೆ ತಗ್ಗಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
₹ 31 ಕೋಟಿ ತೆರಿಗೆ ಸಂಗ್ರಹ: 2025–26ನೇ ಆರ್ಥಿಕ ವರ್ಷದಲ್ಲಿ ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳು ₹ 31.64 ಕೋಟಿ ತೆರಿಗೆ ಸಂಗ್ರಹಿಸಿ ಐತಿಹಾಸಿಕ ಸಾಧನೆ ತೋರಿವೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಈ ಪ್ರಮಾಣದ ತೆರಿಗೆ ಸಂಗ್ರಹವಾಗಿದ್ದು, 120 ಗ್ರಾಮ ಪಂಚಾಯಿತಿಗಳು ಶೇ 100ರಷ್ಟು ತೆರಿಗೆ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿವೆ.
ಜಿಲ್ಲಾ ಪಂಚಾಯಿತಿ ಸಿಇಒ ಹಳ್ಳಿಗಳಿಗೆ ಭೇಟಿ ನೀಡುತ್ತಿರುವುದೂ ತೆರಿಗೆ ಸಂಗ್ರಹಕ್ಕೆ ಸಹಕಾರಿಯಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಶೇ 70ರಷ್ಟು ತೆರಿಗೆ ಸಂಗ್ರಹವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗಿತ್ತೆ ಮಾಧವ ವಿಠ್ಠಲರಾಲ್ ಅವರು ನಿರಂತರ ಕ್ಷೇತ್ರ ಭೇಟಿ, ಸ್ಥಳದಲ್ಲಿಯೇ ಪರಿಶೀಲನಾ ಸಭೆ ನಡೆಸಿದರು. ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿಪಡಿಸಿ ನಿರಂತರ ಮೇಲ್ವಿಚಾರಣೆ ನಡೆಸಿದರು. ಇದರಿಂದ ಗ್ರಾಮ ಪಂಚಾಯಿತಿಗಳ ತೆರಿಗೆ ವಸೂಲಾತಿ ಕಾರ್ಯಕ್ಕೆ ವೇಗ ದೊರೆಯಿತು ಎಂದು ಅಧಿಕಾರಿಗಳು ಹೇಳಿದರು.
‘ತೆರಿಗೆ ವಸೂಲಾತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲು, ಸ್ವಚ್ಛತೆ, ಕುಡಿಯುವ ನೀರು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಕಾರಿಯಾಗಿದೆ’ ಎಂದು ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದರು.
‘ವಿಬಿ–ಜಿರಾಮ್‌ಜಿ’: 3ನೇ ಸ್ಥಾನ
ದೇಶದಾದ್ಯಂತ ಜುಲೈ 1ರಿಂದ ಅನುಷ್ಠಾನಗೊಂಡಿರುವ ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ–ಜಿರಾಮ್‌ಜಿ) ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ 3ನೇ ಸ್ಥಾನದಲ್ಲಿದೆ.
ಒಂದೂವರೆ ತಿಂಗಳಲ್ಲಿ 1.4 ಲಕ್ಷ ಮಾನವ ದಿನಗಳು ಜಿಲ್ಲೆಯಲ್ಲಿ ಸೃಜನೆಯಾಗಿವೆ. 32 ಲಕ್ಷ ಮಾನವ ದಿನ ಸೃಜಿಸುವ ಗುರಿ ಹೊಂದಿರುವ ಜಿಲ್ಲೆಯ ಪ್ರಗತಿ ಆಶಾದಾಯಕವಾಗಿದೆ. ಮಳೆ ಕೊರತೆಯಿಂದ ಬರ ಎದುರಾಗುವ ಆತಂಕದಲ್ಲಿರುವ ಜಿಲ್ಲೆಯ ಜನರನ್ನು ‘ವಿಬಿ–ಜಿರಾಮ್‌ಜಿ’ ಕೈಹಿಡಿದಿದೆ.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಬದಲಿಗೆ ಕೇಂದ್ರ ಸರ್ಕಾರವು ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ–ಜಿರಾಮ್‌ಜಿ) ಯೋಜನೆ ರೂಪಿಸಿದೆ. ಕೆಲಸದ ಅವಧಿಯನ್ನು 100 ದಿನಗಳ ಬದಲಿಗೆ 125 ದಿನಗಳಿಗೆ ವಿಸ್ತರಿಸಿದ ನೂತನ ಯೋಜನೆಯ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲಾಗಿದೆ.
ಕಾಲುವೆ, ಗೋಕಟ್ಟೆಗಳ ಅಭಿವೃದ್ಧಿ, ಕೆರೆಗಳ ಹೂಳೆತ್ತುವುದು, ದನದ ಕೊಟ್ಟಿಗೆ, ಕೃಷಿ ಹೊಂಡ ನಿರ್ಮಾಣ ಸೇರಿ 318 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಲಭದ್ರತೆ ಕಲ್ಪಿಸುವ 107, ಗ್ರಾಮೀಣ ಮೂಲಸೌಕರ್ಯ ಒದಗಿಸುವ 90, ಜೀವನೋಪಾಯಕ್ಕೆ ಸಂಬಂಧಿಸಿದ 86 ಕಾಮಗಾರಿಗಳನ್ನು ಇದು ಒಳಗೊಂಡಿದೆ.
623 ಹಳ್ಳಿಗೆ ಸಿಇಒ ಭೇಟಿ
‘ಬೆಳಗಿನ ನಡೆ ಹಳ್ಳಿ ಕಡೆ’ ಎಂಬ ವಿನೂತನ ಕಾರ್ಯಕ್ರಮ ಪರಿಚಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಒಂದು ವರ್ಷದಲ್ಲಿ 623 ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಜನರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಗ್ರಾಮೀಣ ಪ್ರದೇಶದ ಆಡಳಿತ ಸುಧಾರಣೆಗೆ ಶ್ರಮಿಸುತ್ತಿರುವ ಈ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.
ಅವರು ನಿತ್ಯ ಬೆಳಿಗ್ಗೆ 6ರಿಂದ 10 ಗಂಟೆಯ ಸಮಯವನ್ನು ಈ ಅಭಿಯಾನಕ್ಕೆ ಮೀಸಲಿಟ್ಟಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಎಂಜಿನಿಯರುಗಳೊಂದಿಗೆ ಹಳ್ಳಿಗಳಿಗೆ ತೆರಳಿ ಪರಿಶೀಲಿಸುತ್ತಿದ್ದಾರೆ.
‘ಜೆಜೆಎಂ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಅಂಗನವಾಡಿ ಕೇಂದ್ರ, ಶಾಲೆಗಳಿಗೆ ಭೇಟಿ ನೀಡಿ ಮೂಲಸೌಲಭ್ಯ ವೀಕ್ಷಿಸಿದ್ದೇನೆ. ಘನತ್ಯಾಜ್ಯ ನಿರ್ವಹಣೆ, ಸ್ವಚ್ಛತೆ, ಇ-ಸ್ವತ್ತು ಸಮಸ್ಯೆಯ ಇತ್ಯರ್ಥ ಹಾಗೂ ಆರೋಗ್ಯ ಸೇವೆಗಳಲ್ಲಿ ಸುಧಾರಣೆ ತರಲು ಇದರಿಂದ ಸಾಧ್ಯವಾಗಿದೆ’ ಎನ್ನುತ್ತಾರೆ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್.
ಹಾಸ್ಟೆಲ್ ವಿದ್ಯಾರ್ಥಿಗಳ ಸುರಕ್ಷತೆಗಾಗಿ ‘ಆರೋಗ್ಯ ಬಂಧು ಕಾರ್ಡ್’ ರೂಪಿಸಲಾಗಿದೆ. ವೈದ್ಯರು ವಿದ್ಯಾರ್ಥಿಗಳ ಆರೋಗ್ಯವನ್ನು ತಿಂಗಳಿಗೊಮ್ಮ ಪರೀಕ್ಷಿಸುತ್ತಿದ್ದಾರೆ
ಗಿತ್ತೆ ಮಾಧವ ವಿಠ್ಠಲ ರಾವ್, ಸಿಇಒ, ಜಿಲ್ಲಾ ಪಂಚಾಯಿತಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-43-1850922913