ಸ್ವಾತಂತ್ರ್ಯ ದಿನ: ಚಾಲ್ತಿಯಲ್ಲಿ 15 ಸಾವಿರ ಬಸ್ ಖರೀದಿ ಪ್ರಕ್ರಿಯೆ: ಸಚಿವ ಸುರೇಶ್
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 15 ಸಾವಿರ ಬಸ್ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ನಗರದ ಜಿಲ್ಲಾ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 80 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಇ ಖಾತೆ ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡಿದ್ದೇನೆ. ಇ ಖಾತೆ ರೋಲ್ ಔಟ್ ಅಭಿಯಾನ ಆರಂಭಿಸಿದ್ದೇನೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ನೀರಿನ ಕೊರತೆ ಇದೆ. ಇದನ್ನು ನೀಗಿಸಿ ಜಲಸುರಕ್ಷಿತ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದರು.
ಸರ್ಕಾರದ ಯೋಜನೆಗಳು ಕಡತದಲ್ಲಿ ಉಳಿಯದೆ ಜಾರಿ ಆಗಬೇಕು. ಜಿಲ್ಲೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕತೆ ಕೆಲಸ ಮಾಡಬೇಕು ಎಂದರು.
ಪೊಲೀಸ್, ಅರಣ್ಯ, ಅಗ್ನಿ ಶಾಮಕ ಸೇರಿದಂತೆ ವಿವಿಧ ತಂಡಗಳು ಪಥ ಸಂಚಲನ ನಡೆಸಿದವು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪ್ರಭು, ಜಿ.ಪಂ ಸಿಇಒ ಡಾ.ವೈ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮತ್ತಿತರರು ಪಾಲ್ಗೊಂಡಿದ್ದರು.