
ಪ್ರಕೃತಿ ಸಂರಕ್ಷಣೆ, ಅಭಿವೃದ್ಧಿಗೆ ಆದ್ಯತೆ: ಸಚಿವ ಪಿ.ಎಂ. ನರೇಂದ್ರಸ್ವಾಮಿ
ಮಡಿಕೇರಿ: ಕೊಡಗಿನ ಪ್ರಕೃತಿಯನ್ನು ಸಂರಕ್ಷಿಸುತ್ತಲೇ ಪ್ರವಾಸೋದ್ಯಮ, ಕೃಷಿ, ಕಾಫಿ, ತೋಟಗಾರಿಕೆ ಮತ್ತು ಸ್ಥಳೀಯ ಉದ್ಯೋಗಗಳನ್ನು ಬೆಳೆಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಇಲ್ಲಿನ ಕೋಟೆ ಆವರಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮ ಗುರಿ ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಲ್ಲ. ಪರಿಸರ ಸ್ನೇಹಿ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಕಾಫಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಗಳನ್ನು ಸಮಗ್ರವಾಗಿ ಬೆಳೆಸಬೇಕು ಎನ್ನುವುದು ನನ್ನ ಗುರಿ. ಪ್ರವಾಸೋದ್ಯಮದಿಂದ ಸ್ಥಳೀಯ ಯುವಕರಿಗೆ, ಹೋಂಸ್ಟೇ, ಸಾರಿಗೆ, ಆಹಾರ, ಕೈಗಾರಿಕೆ, ಕೃಷಿ ಉತ್ಪನ್ನಗಳ ಮಾರಾಟ ಸೇರಿದಂತೆ ಸಾವಿರಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಪ್ರವಾಸಿಗರು ಕೊಡಗಿಗೆ ಬಂದು ಕೇವಲ ಬೆಟ್ಟ-ಜಲಪಾತಗಳನ್ನು ನೋಡಿ ಹಿಂದಿರುಗಬಾರದು; ಕೊಡಗಿನ ಸಂಸ್ಕೃತಿ, ವೀರ ಪರಂಪರೆ, ಕಾಫಿ, ಆಹಾರ, ಸಂಗೀತ, ದೇವಾಲಯಗಳು ಮತ್ತು ಜನಜೀವನವನ್ನು ಅನುಭವಿಸಿ ಹೋಗಬೇಕು ಎಂದರು.
ಕೊಡಗಿನ ಅರಣ್ಯಗಳು ಕರ್ನಾಟಕದಷ್ಟೇ ಅಲ್ಲ, ಇಡೀ ದೇಶದ ಅಮೂಲ್ಯ ನೈಸರ್ಗಿಕ ಸಂಪತ್ತು. ನಾಗರಹೊಳೆ, ಬ್ರಹ್ಮಗಿರಿ ಮತ್ತು ಇತರ ಅರಣ್ಯ ಪ್ರದೇಶಗಳು ನಮ್ಮ ಜೀವವೈವಿಧ್ಯದ ಕಾವಲುಗಾರರು. ಆದರೆ ಅರಣ್ಯದ ಸಂರಕ್ಷಣೆಯ ಜೊತೆಗೆ ಅರಣ್ಯದ ಅಂಚಿನಲ್ಲಿ ಬದುಕುತ್ತಿರುವ ಜನರ ಸುರಕ್ಷತೆ ಮತ್ತು ಜೀವನೋಪಾಯವೂ ನಮ್ಮ ಆದ್ಯತೆ ಆಗಿದೆ ಎಂದು ಹೇಳಿದರು.
ಅರಣ್ಯವೂ ಉಳಿಯಬೇಕು, ಅರಣ್ಯದಂಚಿನ ಜನರೂ ನೆಮ್ಮದಿಯಿಂದ ಬದುಕಬೇಕು ಎಂದು ತಿಳಿಸಿದರು.