
ನೇಪಾಳದಲ್ಲಿ ಭೀಕರ ಪ್ರವಾಹ: ಮೃತರ ಸಂಖ್ಯೆ 626ಕ್ಕೆ ಏರಿಕೆ, 2,000 ಜನ ನಾಪತ್ತೆ
ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಪ್ರವಾಹ ಸಂಭವಿಸಿದ ಸ್ಥಳದಲ್ಲಿ ಮಣ್ಣುಮಿಶ್ರಿತ ನೀರಿನ ಮಟ್ಟ ಏರಿಕೆಯಾಗಿದ್ದು, ಮತ್ತೊಮ್ಮೆ ಪ್ರವಾಹ ಉಂಟಾಗುವ ಅಪಾಯ ಇದೆ’ ಎಂದು ‘ರಾಷ್ಟ್ರೀಯ ವಿಪತ್ತು ಪರಿಣಾಮ ನಿಯಂತ್ರಣ ಮತ್ತು ನಿರ್ವಹಣಾ ಪ್ರಾಧಿಕಾರ’ (ಎನ್‌ಡಿಆರ್‌ಆರ್‌ಎಂಎ) ಎಚ್ಚರಿಸಿದೆ.
ನೇಪಾಳದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಯ ದಡದಲ್ಲಿರುವ ಗ್ರಾಮಗಳು ಹಾಗೂ ಪಟ್ಟಣಗಳ ಮೇಲೆ ಬುಧವಾರ ಸುನಾಮಿಯಂತೆ ಅಪ್ಪಳಿಸಿದ ಕೆಸರುಮಿಶ್ರಿತ ನೀರು ಹಲವಾರು ಕಟ್ಟಡಗಳು, ಮನೆಗಳನ್ನು ನುಂಗಿಹಾಕಿದೆ.
ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಭೂಕಂಪ ಕಾರಣವಲ್ಲ, ದೊಡ್ಡ ಪ್ರಮಾಣದಲ್ಲಿ ಹಿಮಬಂಡೆಗಳು ಕುಸಿದು ಪ್ರವಾಹ ಉಂಟಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಯುಎಸ್‌ಜಿಎಸ್) ಹೇಳಿದೆ.
ಪ್ರವಾಹದಿಂದಾಗಿ ಮನೆಗಳು, ವಾಹನಗಳು, ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಜಲವಿದ್ಯುತ್ ಯೋಜನೆಗಳಿಗೂ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.