ದೇಶಕ್ಕೆ ಬಿಜೆಪಿಯೇ ಅತಿದೊಡ್ಡ ಸಂಕಷ್ಟ, ದ್ವೇಷವೇ ಅದರ ಏಕೈಕ ಅಜೆಂಡಾ: ಅಖಿಲೇಶ್

ದೇಶಕ್ಕೆ ಬಿಜೆಪಿಯೇ ಅತಿದೊಡ್ಡ ಸಂಕಷ್ಟ, ದ್ವೇಷವೇ ಅದರ ಏಕೈಕ ಅಜೆಂಡಾ: ಅಖಿಲೇಶ್

ದೇಶಕ್ಕೆ ಬಿಜೆಪಿಯೇ ಅತಿದೊಡ್ಡ ಸಂಕಷ್ಟ, ದ್ವೇಷವೇ ಅದರ ಏಕೈಕ ಅಜೆಂಡಾ: ಅಖಿಲೇಶ್

ಇಟಾವಾ (ಉತ್ತರ ಪ್ರದೇಶ): ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಂಕಷ್ಟವೇ ‘ಬಿಜೆಪಿ’. ಬಿಜೆಪಿಗರಿಗೆ ದ್ವೇಷ ಹರಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್‌ ವಾಗ್ದಾಳಿ ನಡೆಸಿದ್ದಾರೆ.

ರಕ್ಷಾಬಂಧನ ಹಬ್ಬದ ಪ್ರಯುಕ್ತ ಇಟಾವಾ ಜಿಲ್ಲೆಯ ಸೈಫೈಗೆ ಆಗಮಿಸಿದ್ದ ಯಾದವ್, ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ.

‘ದೇಶದಲ್ಲಿ ಒಂದೇ ಒಂದು ಸಂಕಷ್ಟವಿದೆ, ಅದುವೇ ಬಿಜೆಪಿ. ಬಿಜೆಪಿ ಸ್ವತಃ ಅತಿ ದೊಡ್ಡ ಸಂಕಷ್ಟವಾಗಿದೆ. ಬಿಜೆಪಿ ತೊಲಗಿದರೆ, ಈ ಸಂಕಷ್ಟವೂ ಕೊನೆಗೊಳ್ಳುತ್ತದೆ’ ಎಂದು ಅವರು ಗುಡುಗಿದ್ದಾರೆ.

ಬಿಜೆಪಿಗರಿಗೆ ದ್ವೇಷ ಹರಡುವುದನ್ನು ಹೊರತುಪಡಿಸಿ ಬೇರೆ ಕೆಲಸವಿಲ್ಲ. ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಪರಂಪರೆಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ ಎಂದೂ ಅವರು ಕಿಡಿಕಾರಿದ್ದಾರೆ.

‘ಬಿಜೆಪಿ ಸ್ಥಾಪನೆಯಾದಾಗ, ತನ್ನನ್ನು ಸಮಾಜವಾದಿ ಪಕ್ಷ ಎಂದು ಬಿಂಬಿಸಿಕೊಳ್ಳುವ ಪ್ರಯತ್ನವಾಗಿ ಜಯಪ್ರಕಾಶ್ ನಾರಾಯಣ್ ಅವರ ಭಾವಚಿತ್ರವನ್ನು ಪ್ರದರ್ಶಿಸಿತ್ತು. ಆದರೆ, ಈಗ ಜಯಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಮಾರಾಟ ಮಾಡಿದೆ’ ಎಂದು ಆರೋಪಿಸಿದ್ದಾರೆ.

ಯಾರೂ ಬಿಜೆಪಿಯನ್ನು ಖರೀದಿಸಲು ಸಿದ್ಧರಿಲ್ಲ. ಇಲ್ಲದಿದ್ದರೆ, ಬಿಜೆಪಿ ತನ್ನನ್ನೇ ಮಾರಾಟ ಮಾಡಿಕೊಳ್ಳುತ್ತಿತ್ತು ಎಂದು ಯಾದವ್ ವ್ಯಂಗ್ಯವಾಡಿದ್ದಾರೆ.

ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತು ಮಾತನಾಡಿದ ಯಾದವ್, ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಸರ್ಕಾರವು ಅತ್ಯಗತ್ಯ ವಸ್ತುಗಳು, ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿದೆ ಎಂದೂ ದೂರಿದ್ದಾರೆ.

'ಸಕ್ಕರೆ ಬೆಲೆ ದುಬಾರಿಯಾಗಿದೆ. ಸರ್ಕಾರ ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುತ್ತಿದೆ. ಕಲಬೆರಕೆಗೆ ಸಂಬಂಧಿಸಿದಂತೆ ಕಾನೂನಿದೆ. ಅದರಂತೆ ಕಾನೂನುಬದ್ಧವಾಗಿ ಕಲಬೆರಕೆ ಮಾಡುವಂತಿಲ್ಲ. ಆದರೆ, ಅತ್ಯಂತ ಯೋಜಿತ ತಂತ್ರದ ಮೂಲಕ ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭ ಮಾಡಿಕೊಡಲು ಮತ್ತು ಚುನಾವಣಾ ದೇಣಿಗೆ ಪಡೆಯಲು ಸರ್ಕಾರವು ಉದ್ಯಮಿಗಳಿಗೆ ಮುಕ್ತ ಅವಕಾಶ ನೀಡಿದೆ’ ಎಂದಿದ್ದಾರೆ.

ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಸಕ್ಕರೆ, ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ನೀತಿಗಳಿಂದಾಗಿಯೇ ಹಣದುಬ್ಬರ ಹೆಚ್ಚುತ್ತಿದೆ ಎಂದು ಯಾದವ್ ಪ್ರತಿಪಾದಿಸಿದ್ದಾರೆ.

ಔಷಧಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆಂಬುಲೆನ್ಸ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪೊಲೀಸರು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣಕ್ಕೆ ಮೀಸಲಿಟ್ಟ ಹಣ ದುರ್ಬಳಕೆಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಮಾಧ್ಯಮಗಳ ಮೇಲಿನ ನಿರ್ಬಂಧಗಳು ಹೆಚ್ಚಾಗಿವೆ ಎಂದು ಯಾದವ್ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತ ಸ್ವತಂತ್ರಗೊಂಡ ಬಳಿಕ ಬ್ರಿಟಿಷರು ದೇಶಬಿಟ್ಟು ತೊಲಗಿದರೂ, ನಾವು ಇಂದಿಗೂ ಸಂಪೂರ್ಣ ಸ್ವತಂತ್ರರಾಗಿಲ್ಲ. ಇನ್ನೂ ಅನೇಕ ನಿರ್ಬಂಧಗಳಿವೆ. ಶಾಲೆಗಳ ದುಸ್ಥಿತಿಯನ್ನು ತೋರಿಸುವಂತಿಲ್ಲ. ಶಾಲೆಗಳ ದುಸ್ಥಿತಿಯನ್ನು ತೋರಿಸುವ ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದೂ ಅವರು ದೂರಿದ್ದಾರೆ.

ವಿದ್ಯಾವಂತರು ಪ್ರಶ್ನೆಗಳನ್ನು ಕೇಳುತ್ತಾರೆ. ಸರ್ಕಾರದೊಂದಿಗೆ ಚರ್ಚೆಯಲ್ಲಿ ತೊಡಗುತ್ತಾರೆ ಎಂಬ ಕಾರಣಕ್ಕೆ ಬಿಜೆಪಿ ಉದ್ದೇಶಪೂರ್ವಕವಾಗಿ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿಲ್ಲ ಎಂದಿದ್ದಾರೆ.

ಬಿಜೆಪಿಗರಿಗೆ ಪ್ರಶ್ನೆಗಳೆಂದರೆ ಅತ್ಯಂತ ಭಯ. ಯಾರು ಪ್ರಶ್ನೆಗಳಿಗೆ ಭಯಪಡುತ್ತಾರೋ ಅವರು ಪ್ರಜಾಪ್ರಭುತ್ವವನ್ನು ಹತೋಟಿಯಲ್ಲಿಡುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳನ್ನು ದುರ್ಬಲಗೊಳಿಸುತ್ತಾರೆ ಎಂದು ಯಾದವ್ ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ