
ಮರಗಳನ್ನು ಬೆಳೆಸಲು ಅರಣ್ಯ ಇಲಾಖೆಯಿಂದ 5 ಸಾವಿರ ಬೀಜದ ಉಂಡೆ ಬಿತ್ತನೆ ಪ್ರಯೋಗ
ಶ್ರೀರಂಗಪಟ್ಟಣ: ಅರಣ್ಯ ಪ್ರದೇಶದಲ್ಲಿ ನೇರವಾಗಿ ಬೀಜಗಳನ್ನು ಬಿತ್ತಿ ಕಡಿಮೆ ಖರ್ಚಿನಲ್ಲಿ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಬೀಜದ ಉಂಡೆಗಳನ್ನು ಬಿತ್ತುವ ಪ್ರಯೋಗಕ್ಕೆ ಮುಂದಾಗಿದೆ.
ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಸಸ್ಯಕ್ಷೇತ್ರ (ನರ್ಸರಿ)ದಲ್ಲಿ ಹಲಸು, ಹೊಂಗೆ, ಹುಣಸೆ, ತಾರೆ, ಹಿಪ್ಪೆ, ಕಾಡು ಮಾವು ಇತರ ಜಾತಿಯ ಬೀಜಗಳನ್ನು ಸೇರಿಸಿ ಉಂಡೆಗಳನ್ನು ಸಿದ್ಧಪಡಿಸಲಾಗಿದೆ. ತಾಲ್ಲೂಕಿನ ಕರಿಘಟ್ಟ ಅರಣ್ಯದಲ್ಲಿ ಈಗಾಗಲೇ ಒಂದು ಸಾವಿರ ಬೀಜದ ಉಂಡೆಗಳನ್ನು ಬಿತ್ತನೆ ಮಾಡಲಾಗಿದೆ.ತಾಲ್ಲೂಕಿನ ಇತರ ಕಡೆಗಳಲ್ಲಿ ಬಿತ್ತನೆ ಮಾಡಲು 5 ಸಾವಿರ ಬೀಜದ ಉಂಡೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ.
ಮಣ್ಣಿಗೆ ನೇರವಾಗಿ ಬೀಜದ ಉಂಡೆಗಳನ್ನು ಬಿತ್ತನೆ ಮಾಡುವುದರಿಂದ ಗುಂಡಿ ತೆಗೆಯುವ, ನೀರು ಹಾಕುವ ಮತ್ತು ಸಸಿಗಳ ಸಾಗಣೆಗೆ ತಗಲುವ ವೆಚ್ಚ ಉಳಿಯಲಿದೆ. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಸಾವಿರಾರು ಬೀಜದ ಉಂಡೆಗಳನ್ನು ಬಿತ್ತಬಹುದು. ಹೀಗೆ ಬಿತ್ತಿದ ಬೀಜದ ಉಂಡೆಗಳಿಂದ ಬೀಜಗಳು ಮೊಳಕೆಯೊಡೆಯುವ ಸಸಿಗೆ ಅತಿವೃಷ್ಟಿ ಮತ್ತು ಅನಾವೃಷ್ಟಿಯನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚು ಇರುತ್ತದೆ.
ತಯಾರಿಸುವ ವಿಧಾನ: ಕೆಮ್ಮಣ್ಣು, ಗೊಬ್ಬರ ಮತ್ತು ಮರಳನ್ನು ನೀರಿನಿಂದ ಕಲೆಸಿ ಹದ ಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಚೆಂಡಿನ ಗಾತ್ರಕ್ಕೆ ಮಣ್ಣಿನ ಉಂಡೆಗಳನ್ನು ಕಟ್ಟಿ ಅವುಗಳ ಮಧ್ಯೆ ಬೀಜವನ್ನು ಸೇರಿಸಬೇಕು. ಹೀಗೆ ಬೀಜ ಸೇರಿಸಿದ ಉಂಡೆಗಳನ್ನು 3ರಿಂದ 4 ತಿಂಗಳುಗಳ ಕಾಲ ಇಡಬಹುದು. ಮಳೆ ಬಿದ್ದ ಕೂಡಲೇ ಅರಣ್ಯದಲ್ಲಿ, ಅಂತರಕ್ಕೆ ಅನುಗುಣವಾಗಿ ಬಿತ್ತನೆ ಮಾಡಬಹುದು. ಬೀಜದ ಉಂಡೆಗೆ ಅಗತ್ಯ ತೇವಾಂಶ ಸಿಕ್ಕಿದರೆ ಬೀಜ ಮೊಳಕೆಯೊಡೆದು ಮಣ್ಣಿನಲ್ಲಿ ಬೇರು ಬಿಡುತ್ತದೆ. ಮೂರು ತಿಂಗಳು ಉತ್ತಮ ಮಳೆಯಾದರೆ ಸಸಿ ಬದುಕುಳಿದು ಒಂದು ವರ್ಷಕ್ಕೆ ಆಳೆತ್ತರ ಬೆಳೆಯುತ್ತದೆ.
ಬೀಜದ ಉಂಡೆ ತಯಾರಿಸಲು ಸ್ಥಳೀಯ ಕಾಡುಗಳಲ್ಲಿ ಸಿಗುವ ಮರಗಳಿಂದ ಬೀಜಗಳನ್ನು ಆಯ್ದು ತರಲಾಗುತ್ತದೆ. ಅವುಗಳಲ್ಲಿ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಿ ಮಣ್ಣಿನ ಉಂಡೆಯಲ್ಲಿ ಸೇರಿಸಲಾಗುತ್ತದೆ. ಮೈಸೂರಿನ ಇಲವಾಲದಲ್ಲಿರುವ ಅರಣ್ಯ ಇಲಾಖೆಯ ಬೀಜ ಘಟಕದಲ್ಲಿ ಕಾಡು ಜಾತಿಗೆ ಸೇರಿದ ಸಾಕಷ್ಟು ಮರಗಳ ಬೀಜಗಳು ಲಭ್ಯವಿದ್ದು, ಅಲ್ಲಿಂದಲೂ ಬೀಜಗಳನ್ನು ತರಿಸಿ ಬೀಜದ ಉಂಡೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಪ್ರಯೋಗ ಯಶಸ್ವಿ; ಮಳೆಗಾಗಿ ನಿರೀಕ್ಷೆ
‘ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಬೀಜದ ಉಂಡೆ ಬಿತ್ತನೆ ಪ್ರಯೋಗ ಯಶಸ್ವಿಯಾಗಿದೆ. ಹಾಗಾಗಿ ಈ ತಾಲ್ಲೂಕಿನಲ್ಲೂ ಅಂತಹ ಪ್ರಯೋಗ ಆರಂಭಿಸಿದ್ದೇವೆ. ಜೋರು ಮಳೆಗಾಗಿ ಕಾಯುತ್ತಿದ್ದು, ಹದವಾದ ಮಳೆ ಸುರಿದರೆ ತಾಲ್ಲೂಕಿನ ವಿವಿಧೆಡೆ ಲಭ್ಯ ಇರುವ ಅರಣ್ಯ ಪ್ರದೇಶದಲ್ಲಿ ಬೀಜದ ಉಂಡೆಗಳ ಬಿತ್ತನೆ ಕಾರ್ಯ ಆರಂಭಿಸಲಾಗುವುದು. ಈ ಬಾರಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರಿಂದ ಬೀಜದ ಉಂಡೆ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಬಿ.ಎಂ.ನಾಗರಾಜ್ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-40-42245615