
ಮೈಸೂರು: ಹೆಗ್ಗುರುತುಗಳಲ್ಲಿ ಒಂದಾದ ಚಿಕ್ಕ ಗಡಿಯಾರದ ಮುಳ್ಳು ಸ್ತಬ್ಧ
ಮೈಸೂರು: ನಗರದ ಪಾರಂಪರಿಕ ಹೆಗ್ಗುರುತುಗಳಲ್ಲಿ ಒಂದಾದ ಚಿಕ್ಕ ಗಡಿಯಾರದ ಸಮಯದ ಮುಳ್ಳು ತಿರುಗುವುದನ್ನು ನಿಲ್ಲಿಸಿ ಬಹುದಿನಗಳೇ ಕಳೆದಿವೆ.
ಸುತ್ತಲಿನ ಒತ್ತುವರಿಯನ್ನು ತೆರವುಗೊಳಿಸಿ ಸುತ್ತ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆಯಾದರೂ ಗಡಿಯಾರವೇ ನಡೆಯದೆ ಮಂಕಾಗಿದೆ. ಇದರಿಂದ ತಲೆಎತ್ತಿ ಗೋಪುರ ನೋಡಿದವರು ಸಮಯ ನೋಡಿ ಗಲಿಬಿಲಿಗೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರೂ ಇದರ ದುಃಸ್ಥಿತಿ ಕಂಡು ಬೇಸರಿಸುತ್ತಿದ್ದಾರೆ.
ಹೆಗ್ಗುರುತು: ನಗರದ ಹೃದಯ ಭಾಗದಲ್ಲಿರುವ ದೊಡ್ಡ ಗಡಿಯಾರ ಹಾಗೂ ದೇವರಾಜ ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ ಚಿಕ್ಕ ಗಡಿಯಾರಗಳು ಮೈಸೂರು ಅರಸರ ಕೊಡುಗೆ.
ಪುರಭವನದ ಎದುರಿನ ದೊಡ್ಡ ಗಡಿಯಾರದ ಗೋಪುರವನ್ನು 1927ರಲ್ಲಿ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ರಜತ ಮಹೋತ್ಸವದ ನೆನಪಿಗಾಗಿ ನಿರ್ಮಿಸಲಾಗಿತ್ತು. ಇಂಡೋ–ಸಾರ್ಸೆನಿಕ್ ಶೈಲಿಯ ಈ ಗೋಪುರ ‘ಸಿಲ್ವರ್ ಜ್ಯೂಬಿಲಿ ಟವರ್’ ಎಂದೂ ಹೆಸರುವಾಸಿ.
‘ಡಫರಿನ್ ಕ್ಲಾಕ್ ಟವರ್’ ಎಂದೂ ಗುರುತಿಸಲ್ಪಡುವ ಚಿಕ್ಕ ಗಡಿಯಾರವನ್ನು 1884–1888ರ ಅವಧಿಯಲ್ಲಿ ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಡಫರಿನ್ ಗೌರವಾರ್ಥ 1886ರಲ್ಲಿ ನಿರ್ಮಿಸಲಾಗಿತ್ತು. ಸುತ್ತ ಒತ್ತುವರಿಗೆ ಒಳಗಾಗಿದ್ದ ಈ ಸ್ಥಳವನ್ನು ಪಾಲಿಕೆಯು 2012ರಲ್ಲಿ ತೆರವುಗೊಳಿಸಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಿತ್ತು. ಆದರೆ ಕೆಟ್ಟು ನಿಂತ ಗಡಿಯಾರದ ದುರಸ್ತಿ ಮಾತ್ರ ಸಾಧ್ಯವಾಗುತ್ತಿಲ್ಲ.
ನಾಜೂಕಿನ ಕೆಲಸ: ‘ಚಿಕ್ಕಗಡಿಯಾರವು ಶತಮಾನಕ್ಕೂ ಹಳೆಯದಾದ ಪಾರಂಪರಿಕ ನಿರ್ಮಾಣವಾಗಿದೆ. ಇದರ ನಿರ್ವಹಣೆ ಹಾಗೂ ದುರಸ್ತಿ ತುಂಬ ಸೂಕ್ಷ್ಮದ ಕೆಲಸ. ಒಳಗಿನಿಂದ ತೆರಳಿ ರಿಪೇರಿ ಮಾಡಬೇಕಿದೆ. ಅಲ್ಲದೆ, ಇದರ ಬಿಡಿಭಾಗಗಳು ಸಿಗುವುದು ಕಷ್ಟವಾಗಿದೆ. ನಾಲ್ಕಾರು ಮಂದಿ ವೀಕ್ಷಿಸಿ ಹೋಗಿದ್ದರೂ ಇನ್ನೂ ಯಾರೂ ದುರಸ್ತಿಗೆ ಬರುತ್ತಿಲ್ಲ’ ಎನ್ನುತ್ತಾರೆ ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ.
ದೊಡ್ಡ ಗಡಿಯಾರವೂ ಆಗಾಗ ಬಂದ್: ದೊಡ್ಡ ಗಡಿಯಾರವು ಸದ್ಯ ಚಟುವಟಿಕೆಯಿಂದ ಇದೆಯಾದರೂ ಆಗಾಗ್ಗೆ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಇದನ್ನು ನಿರ್ವಹಣೆ ಮಾಡುವ ಗುತ್ತಿಗೆದಾರರ ಅವಧಿ ಮುಗಿದಿದ್ದು, ಸದ್ಯ ಅವರನ್ನೇ ಮುಂದುವರಿಸಲಾಗಿದೆ. ನಿರ್ವಹಣೆಗೆಂದೇ ಪಾಲಿಕೆ ತಿಂಗಳಿಗೆ ಇಂತಿಷ್ಟು ಸಾವಿರ ಹಣ ನೀಡುತ್ತಿದೆ. 2023–24ರಲ್ಲಿ ಪಾಲಿಕೆಯು ಸುಮಾರು ₹38 ಲಕ್ಷ ವೆಚ್ಚದಲ್ಲಿ ಇದರ ದುರಸ್ತಿ ಕಾಮಗಾರಿ ನಡೆಸಿತ್ತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-39-25138743