
ನಾವು ಭಾರತೀಯರು, ಚೀನಾದವರಲ್ಲ: ಅರುಣಾಚಲ ಬಾಲಕಿಯ ಖಡಕ್ ಉತ್ತರ
ಇಟಾನಗರ: ‘ನೀವು ಚೀನಾದವರೇ?’ ಎಂಬ ಪ್ರಶ್ನೆಗೆ ಅರುಣಾಚಲ ಪ್ರದೇಶದ ಪುಟ್ಟ ಬಾಲಕಿಯೊಬ್ಬಳು ನೀಡಿದ ಖಡಕ್ ಉತ್ತರದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಬಾಲಕಿಗೆ ‘ನೀವು ಚೀನಾದವರೇ?’ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯಿಂದ ಅಸಮಾಧಾನಗೊಂಡ ಬಾಲಕಿ, ಇಂತಹ ಪ್ರಶ್ನೆಗಳು ನಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ ಎಂದು ಹೇಳಿದ್ದಾಳೆ.
‘ನಾವು ಭಾರತದಿಂದ ಬಂದವರು. ನೀವು ನಮ್ಮನ್ನು ಚೀನೀಯರು ಎಂದು ಕರೆದಾಗ ನಮಗೆ ತುಂಬಾ ಕೋಪ ಬರುತ್ತದೆ. ಅದು ನಮಗೆ ಬೇಸರವನ್ನೂ ಉಂಟುಮಾಡುತ್ತದೆ. ನಮ್ಮನ್ನು ಭಾರತೀಯರೆಂದು ಕರೆಯಿರಿ. ನಾವು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ವಾಸಿಸುತ್ತಿದ್ದೇವೆ’ ಎಂದು ಬಾಲಕಿ ಹೇಳಿರುವುದು ವಿಡಿಯೊದಲ್ಲಿ ಕಾಣಬಹುದು.
ಬಾಲಕಿಯ ಆತ್ಮವಿಶ್ವಾಸದ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಶಾನ್ಯ ಭಾರತದ ಜನರನ್ನು ಅವರ ಮುಖಚಹರೆ ಆಧರಿಸಿ ‘ಚೀನಾದವರು’ ಎಂದು ಗುರುತಿಸುವ ಮನೋಭಾವದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.