
₹55.80 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 39 ಡ್ರಗ್ ಪೆಡ್ಲರ್‌ಗಳ ಬಂಧನ
ಬೆಂಗಳೂರು: ಮಾದಕ ವಸ್ತುಗಳ ಮಾರಾಟ, ಪೂರೈಕೆಯ ವಿರುದ್ಧ ನಗರದ ಪೊಲೀಸರು ಕೈಗೊಂಡಿರುವ ‘ಆಪರೇಷನ್ ರೈಸ್’ ಹಾಗೂ ‘ಬೇಡ ಬ್ರೊ’ ಕಾರ್ಯಾಚರಣೆ ಚುರುಕುಗೊಳಿಸಿದ್ದು, 39 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಅವರಿಂದ ₹55.80 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಮೃತಹಳ್ಳಿ, ಗಿರಿನಗರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ, ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮಿ ಲೇಔಟ್, ಬೇಗೂರು, ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಕೊತ್ತನೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿದೇಶದ ಎಂಟು, ಹೊರ ರಾಜ್ಯಗಳ 21 ಹಾಗೂ ಸ್ಥಳೀಯ 10 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
ಅಮೃತಹಳ್ಳಿ ಠಾಣೆಯ ಪೊಲೀಸರು ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ ಜಪ್ತಿ ಮಾಡಿದ್ದಾರೆ. ಒಟ್ಟು ₹28.8 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ದೆಹಲಿಯ ಆಮ್ನಿಸಿಂಗ್ ಮತ್ತು ನೈಜೀರಿಯಾದ ಓಬಮ್ ಎಂಬ ಪೆಡ್ಲರ್‌ಗಳನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು, ದೆಹಲಿಯಲ್ಲಿ ಮಾದಕವಸ್ತು ತಯಾರಿಸಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಕಳೆದ ಹತ್ತು ದಿನಗಳಿಂದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈಶಾನ್ಯ ವಿಭಾಗದ ಕೊತ್ತನೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಒಡಿಶಾದ ಆರೋಪಿಯನ್ನು ಬಂಧಿಸಿ ₹3.45 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ಒಂದು ಬ್ಯಾಗ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಯಲಹಂಕ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಮಿಜೋರಾಂ ರಾಜ್ಯದ ಜಸ್ಟಿನ್ ಲಾಲ್‌ರೊಹ್ಲುವಾ, ತೇನ್ಜಿನ್ ಹಾಗೂ ಬೆಂಗಳೂರಿನ ಶಿವಾಜಿನಗರದ ನಿವಾಸಿಗಳಾದ ಅರಾಫತ್ ಪಾಷಾ, ಶೇಕ್ ಸಕ್ಲೆನ್ ಎಂಬುವರನ್ನು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳು ಹೊರ ರಾಜ್ಯಗಳಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 794 ಗ್ರಾಂ ಎಂಡಿಎಂಎ, ಐ–ಫೋನ್, ಒಂದು ತೂಕದ ಯಂತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಇನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರದ ರಾಕೇಶ್ ಅಗರ್‌ವಾಲ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಯಿಂದ ₹3 ಕೋಟಿ ಮೌಲ್ಯದ 3 ಕೆ.ಜಿ ಹೈಡ್ರೊ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ವಿದೇಶದಿಂದ ವಿಮಾನದ ಮೂಲಕ ಹೈಡ್ರೊ ಗಾಂಜಾವನ್ನು ತಂದು ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳು ಹಾಗೂ ಪೇಯಿಂಗ್ ಗೆಸ್ಟ್‌ನಲ್ಲಿ ನೆಲಸಿದ್ದವರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಹೊರ ರಾಜ್ಯಗಳಿಂದ ನಗರಕ್ಕೆ ಮಾದಕ ವಸ್ತುಗಳನ್ನು ತರುತ್ತಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ರಾಜ್‌ಕುಮಾರ್(32) ಅವರನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಾರ್ಫಿನ್ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೋರಮಂಗಲದ ಹಸೀನಾ ಬೇಗಂ (28) ಹಾಗೂ ಸದಿಯುಲ್ ಆಲೋಂ ಎಂಬುವರನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹2.50 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
16 ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆ (ಪೊಲೀಸ್ ಠಾಣೆ;ವಶಕ್ಕೆ ಪಡೆದ ಮಾದಕ ವಸ್ತುಗಳ ಮೌಲ್ಯ)
ಅಮೃತಹಳ್ಳಿ;₹28.88 ಕೋಟಿ
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ(ಮೂರು ಪ್ರಕರಣ);₹8.88 ಕೋಟಿ
ಯಶವಂತಪುರ (ಎರಡು ಪ್ರಕರಣ);₹1.71 ಕೋಟಿ
ನಂದಿನಿಲೇಔಟ್;₹30 ಲಕ್ಷ
ಗೋವಿಂದಪುರ;₹11.27 ಲಕ್ಷ
ಬಾಗಲೂರು(ಎರಡು ಪ್ರಕರಣ);₹10.78 ಲಕ್ಷ
ಮಹಾಲಕ್ಷ್ಮಿ ಲೇಔಟ್;₹10.65 ಲಕ್ಷ
ವಶಕ್ಕೆ ಪಡೆದಿದ್ದು ಏನೇನು?
ಬಂಧಿತರಿಂದ 21 ಕೆ.ಜಿ 641 ಗ್ರಾಂ ಎಂಡಿಎಂಎ 738 ಗ್ರಾಂ ಕೊಕೇನ್ 4 ಕೆ.ಜಿ 493 ಗ್ರಾಂ ಹೈಡ್ರೊಗಾಂಜಾ 184 ಕೆ.ಜಿ 625 ಗ್ರಾಂ ಗಾಂಜಾ 25 ಗ್ರಾಂ ಮಾರ್ಫಿನ್ ₹17 ಲಕ್ಷ ನಗದು 22 ಮೊಬೈಲ್ ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಮಾಹಿತಿ ನೀಡಿದರು.