
ಭಾರತ ಮಹಿಳಾ ಹಾಕಿ ತಂಡಕ್ಕೆ ₹50 ಲಕ್ಷ ಬಹುಮಾನ ಘೋಷಣೆ
ನವದೆಹಲಿ: ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಐತಿಹಾಸಿಕ ಐದನೇ ಸ್ಥಾನ ಗಳಿಸಿದ ಭಾರತ ಮಹಿಳೆಯರ ತಂಡಕ್ಕೆ ಹಾಕಿ ಇಂಡಿಯಾ ₹50 ಲಕ್ಷ ಬಹುಮಾನ ಘೋಷಿಸಿದೆ.
ಸಲೀಮಾ ಟೆಟೆ ನಾಯಕತ್ವದ ಭಾರತ ತಂಡವು ಗುರುವಾರ ಆಮ್‌ಸ್ಟೆಲ್ವೀನ್‌ನಲ್ಲಿ ನಡೆದ ಪಂದ್ಯದಲ್ಲಿ 3–1 ಗೋಲುಗಳಿಂದ ವಿಶ್ವದ ಐದನೇ ಕ್ರಮಾಂಕದ ಜರ್ಮನಿ ತಂಡಕ್ಕೆ ಆಘಾತ ನೀಡಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. ಇದು 1974ರ ಚೊಚ್ಚಲ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ವಿಶ್ವಕಪ್‌ನಲ್ಲಿ ಭಾರತ ವನಿತೆಯರ ಅತ್ಯುತ್ತಮ ಸಾಧನೆಯಾಗಿದೆ.
ಶೋರ್ಡ್ ಮರಿನ್ ಮಾರ್ಗದರ್ಶನದ ತಂಡವು ಕೇವಲ ಒಂದು ಸೋಲಿನೊಂದಿಗೆ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿತ್ತು. ಬಲಿಷ್ಠ ಚೀನಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಿ ಗಮನ ಸೆಳೆದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ 6-1 ಅಂತರದ ಗೆಲುವು ದಾಖಲಿಸಿತ್ತು.
‘ಭಾರತ ಮಹಿಳಾ ಹಾಕಿಗೆ ಇದು ಐತಿಹಾಸಿಕ ಫಲಿತಾಂಶವಾಗಿದೆ. 52 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಐದನೇ ಸ್ಥಾನ ಗಳಿಸುವುದು ಟೂರ್ನಿಯುದ್ದಕ್ಕೂ ಆಟಗಾರ್ತಿಯರು ತೋರಿಸಿರುವ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಹೋರಾಟದ ಮನೋಭಾವಕ್ಕೆ ಸಾಕ್ಷಿಯಾಗಿದೆ. ನಮ್ಮ ಮೆಚ್ಚುಗೆಯ ಸಂಕೇತವಾಗಿ ತಂಡಕ್ಕೆ ₹50 ಲಕ್ಷ ಬಹುಮಾನ ಘೋಷಿಸಿದ್ದೇನೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಹೇಳಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-51-1787092415