
ಕಸ್ತೂರಿರಂಗನ್ ವರದಿ: ಉನ್ನತ ಮಟ್ಟದ ಸಮಿತಿ ರಚನೆಗೆ ಸಂಸದ ಕಾಗೇರಿ ಆಗ್ರಹ
ಶಿರಸಿ: 'ಕಸ್ತೂರಿರಂಗನ್ ವರದಿ ವಿರೋಧಿಸಿ ರಾಜ್ಯ ಸರ್ಕಾರವು ಅಧಿವೇಶನದಲ್ಲಿ ಒಂದು ಸಾಲಿನ ನಿರ್ಣಯ ಮಾಡುವ ಬದಲು, ಉನ್ನತ ಮಟ್ಟದ ಸಮಿತಿ ರಚಿಸಬೇಕು. ಅದರ ಮೂಲಕ ಪ್ರತಿ ಗ್ರಾಮದ ತಳಮಟ್ಟದ ಸಮೀಕ್ಷೆ ನಡೆಸಿ, ಆ ವರದಿಯನ್ನು ಕೇಂದ್ರ ಸರ್ಕಾರದ ಮೂಲಕ ಸುಪ್ರೀಂ ಕೋರ್ಟ್‌ನ ಹಸಿರು ನ್ಯಾಯಪೀಠಕ್ಕೆ ಸಲ್ಲಿಸುವ ಕಾರ್ಯ ಮಾಡಬೇಕು' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, 'ಪರಿಸರ ಸಂರಕ್ಷಣೆಯ ನೆಪದಲ್ಲಿ ಮಲೆನಾಡು ಹಾಗೂ ಕರಾವಳಿ ಜನರ ಸಾಂಪ್ರದಾಯಿಕ ಜೀವನೋಪಾಯ ಮತ್ತು ಹಕ್ಕುಗಳನ್ನು ಕಡೆಗಣಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ವರದಿಯನ್ನು ಈಗಾಗಲೇ 6 ಬಾರಿ ತಿರಸ್ಕರಿಸಿದ್ದರೂ, ಸುಪ್ರೀಂ ಕೋರ್ಟ್‌ನ ಹಸಿರು ಪೀಠ ಮತ್ತೆ ಸ್ಪಷ್ಟೀಕರಣ ಕೇಳಿರುವುದು 7ನೇ ಬಾರಿಗೆ ಜನರ ಆತಂಕಕ್ಕೆ ಕಾರಣವಾಗಿದೆ. ಹಿಂದೆ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಬಂದ ಈ ವರದಿಗಳು ಜನರ ಪಾಲಿಗೆ ಸದಾ ತೂಗುಗತ್ತಿಯಾಗಿವೆ.
ಈಗಾಗಲೇ 1978, 1980ರ ಅರಣ್ಯ ಕಾಯ್ದೆ ಸೇರಿದಂತೆ ಹಲವು ಕಟ್ಟುನಿಟ್ಟಿನ ಕಾನೂನುಗಳಿದ್ದು, ಜಿಪಿಎಸ್ ಸಮೀಕ್ಷೆ ಸರಿಯಾಗದೆ ರೈತರು ತಮ್ಮ ಜಮೀನಿನಲ್ಲಿ ಶೌಚಾಲಯ, ರಸ್ತೆ ಅಥವಾ ಪೈಪ್‌ಲೈನ್ ನಿರ್ಮಿಸಲೂ ಕಿರುಕುಳ ಅನುಭವಿಸುತ್ತಿದ್ದಾರೆ. ವರದಿಯನ್ವಯ ರಾಜ್ಯದ 1,576 ಗ್ರಾಮಗಳು ಸೂಕ್ಷ್ಮ ವಲಯಕ್ಕೆ ಸೇರಲಿದ್ದು, ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 426 ಗ್ರಾಮಗಳು ಒಳಗೊಳ್ಳಲಿವೆ. ಉಪಗ್ರಹ ದತ್ತಾಂಶ ಆಧರಿಸಿ ಕೃಷಿ ಕ್ಷೇತ್ರವನ್ನೂ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿರುವುದು ಅವೈಜ್ಞಾನಿಕವಾಗಿದೆ.
ರಾಜ್ಯ ಸರ್ಕಾರವು ಕೇರಳ ಮಾದರಿಯಲ್ಲಿ ನೈಸರ್ಗಿಕ ಅರಣ್ಯ ಹಾಗೂ ಮಾನವ ವಸತಿ, ಕೃಷಿ ಭೂಮಿಯನ್ನು ವಿಂಗಡಿಸಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ, ಕೃಷಿ ಭೂಮಿಯನ್ನು ಸೂಕ್ಷ್ಮ ವಲಯದಿಂದ ಹೊರಗಿಡಲು ಗಂಭೀರ ಹೋರಾಟ ನಡೆಸಬೇಕು' ಎಂದು ಆಗ್ರಹಿಸಿದರು