ಚಿಂತಾಮಣಿ 5 ವರ್ಷಗಳಲ್ಲಿ 22 ಸರ್ಕಾರಿ ಶಾಲೆಗೆ ಬೀಗ

ಚಿಂತಾಮಣಿ 5 ವರ್ಷಗಳಲ್ಲಿ 22 ಸರ್ಕಾರಿ ಶಾಲೆಗೆ ಬೀಗ

ಚಿಂತಾಮಣಿ 5 ವರ್ಷಗಳಲ್ಲಿ 22 ಸರ್ಕಾರಿ ಶಾಲೆಗೆ ಬೀಗ

ಚಿಂತಾಮಣಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆದಾಗ್ಯೂ, ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ.

2025–26ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಸೇರಿ 335 ಸರ್ಕಾರಿ ಶಾಲೆಗಳಲ್ಲಿ 11,697 ಮಕ್ಕಳು ಕಲಿಯುತ್ತಿದ್ದರು. 2026–27ನೇ ಸಾಲಿನಲ್ಲಿ 329 ಶಾಲೆಗಳಲ್ಲಿ 10,746ಕ್ಕೆ ಕುಸಿದಿದೆ. ಅದರಲ್ಲೂ ಬೆರಳೆಣಿಕೆಯಷ್ಟು ಶಾಲೆಗಳಲ್ಲಿ ಮಾತ್ರ 50 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳ ಸಂಖ್ಯೆ ಹೊಂದಿವೆ. 1ರಿಂದ 10 ಮಕ್ಕಳು ಇರುವ ಶಾಲೆಗಳ ಸಂಖ್ಯೆ ಏರಿಕೆಯಾಗಿದೆ.

ತಾಲ್ಲೂಕಿನಲ್ಲಿ 24 ಸರ್ಕಾರಿ ಪ್ರೌಢಶಾಲೆಗಳು ಹಾಗೂ 305 ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಶೂ-ಸಾಕ್ಸ್, ನೋಟ್ ಪುಸ್ತಕ, ವಿದ್ಯಾರ್ಥಿವೇತನ ವಿತರಣೆಯಂತಹ ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಅನುಷ್ಠಾನ ಮಾಡಿದೆ. ಆದರೆ, ಸರ್ಕಾರಿ ಶಾಲೆಗಳತ್ತ ಮಕ್ಕಳು ಸುಳಿಯುತ್ತಿಲ್ಲ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಾರ್ಲಹಳ್ಳಿ ಮತ್ತು ಕೊರ್ಲಹಳ್ಳಿ ಶಾಲೆಗಳಲ್ಲಿ ತಲಾ ಒಬ್ಬರು ವಿದ್ಯಾರ್ಥಿ ಕಲಿಯುತ್ತಿದ್ದಾರೆ. ಸಿಂಗನಹಳ್ಳಿ, ದೇವಗಾನಹಳ್ಳಿ, ಬೋದಗುಂಡ್ಲಹಳ್ಳಿ, ಅಗ್ರಹಾರ, ಕಾಪಲ್ಲಿ, ಎಂ.ಗೊಲ್ಲಹಳ್ಳಿ ಉರ್ದು ಶಾಲೆಯಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗಳ ಸೇವೆ ಸ್ಥಗಿತಗೊಳ್ಳುವ ಆತಂಕದಲ್ಲಿವೆ.

ಮೂವರು ವಿದ್ಯಾರ್ಥಿಗಳಿರುವ 14 ಶಾಲೆಗಳು, 4 ವಿದ್ಯಾರ್ಥಿಗಳುಳ್ಳ 8 ಶಾಲೆಗಳು, 5 ವಿದ್ಯಾರ್ಥಿಗಳು ಕಲಿಯುತ್ತಿರುವ 14 ಶಾಲೆಗಳು ಸೇರಿ ಒಟ್ಟು 45 ಶಾಲೆಗಳಲ್ಲಿ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. 6ರಿಂದ 10 ವಿದ್ಯಾರ್ಥಿಗಳಿರುವ 60 ಶಾಲೆಗಳಿವೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಕನ್ನಡ ಮತ್ತು ಉರ್ದು ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಆಪತ್ತು ಎದುರಾಗಿದೆ.

ಸರ್ಕಾರ ಹೊಸ ಹೊಸ ಚಿಂತನೆಗಳ ಮೂಲಕ ಮಕ್ಕಳ ದಾಖಲಾತಿ ಹೆಚ್ಚಿಸಲು ಯೋಜನೆಗಳನ್ನು ರೂಪಿಸುತ್ತಿದೆ. ವಿಶೇಷವಾಗಿ ಒಂದೇ ಸೂರಿನಡಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಕಲಿಯಲು ಅವಕಾಶ ಕಲ್ಪಿಸುವ ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆ.ಪಿ.ಎಸ್) ಆರಂಭಿಸಿದೆ. ಹೋಬಳಿಗೆ ಒಂದರಂತೆ ಸುಸಜ್ಜಿತ ಶಾಲೆಗಳನ್ನು ತೆರೆಯಲು ಅಥವಾ ಈಗಿರುವ ಶಾಲೆಗಳನ್ನೇ ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕೆಲವು ವರ್ಷಗಳ ಹಿಂದೆ 700–800 ವಿದ್ಯಾರ್ಥಿಗಳು ಇರುತ್ತಿದ್ದ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಇದೀಗ ವಿದ್ಯಾರ್ಥಗಳ ಸಂಖ್ಯೆ ಕೇವಲ 116ಕ್ಕೆ ಕುಸಿದಿದೆ. ಶಿಕ್ಷಕರು ಮತ್ತು ಕೊಠಡಿಗಳ ಕೊರತೆಯಿಂದ ಆವರಣದಲ್ಲಿ, ಮರಗಳ ಕೆಳಗೆ 2–3 ವಿಭಾಗಗಳನ್ನು ಒಟ್ಟುಗೂಡಿಸಿಕೊಂಡು ತರಗತಿಗಳನ್ನು ನಡೆಸಲಾಗುತ್ತಿತ್ತು. ಈಗ ಕೊಠಡಿಗಳು, ಶಿಕ್ಷಕರು ಇದ್ದರೂ ಕಲಿಯುವ ವಿದ್ಯಾರ್ಥಿಗಳೇ ಇಲ್ಲ.

ತಾಲ್ಲೂಕಿನ ಕಾಗತಿ ಪ್ರೌಢಶಾಲೆಯಲ್ಲಿ 8ರಿಂದ 10 ತರಗತಿಯಲ್ಲಿ 28, ನಂದನಹೊಸಹಳ್ಳಿ ಪ್ರೌಢಶಾಲೆಯಲ್ಲಿ 30, ಆನೂರು 39, ಸಂತೇಕಲ್ಲಹಳ್ಳಿ 39, ನಗರದ ಸೊಣ್ಣಶೆಟ್ಟಹಳ್ಳಿ ಪ್ರೌಢಶಾಲೆಯಲ್ಲಿ 45, ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ 47 ಮಂದಿ ವಿದ್ಯಾರ್ಥಿಗಳಿದ್ದಾರೆ. ಉತ್ತಮ ಶಾಲೆಗಳೆಂದು ಹೆಸರುವಾಸಿಯಾದ ಯಗವಕೋಟೆ 212, ಕೆ.ರಾಗುಟ್ಟಹಳ್ಳಿ 181, ಬಟ್ಲಹಳ್ಳಿ ಪ್ರಾಢಶಾಲೆಯಲ್ಲಿ 243 ಮಂದಿ ವಿದ್ಯಾರ್ಥಿಗಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ, ಶಿಕ್ಷಕರಿಗೆ ಬೋಧನೆಗಿಂತ ಬಾಹ್ಯ ಕೆಲಸಗಳ ಒತ್ತಡ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯದಿರುವ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಕಾರ ಯಾವುದೇ ಪರ್ಯಾಯ ಯೋಜನೆಗಳನ್ನು ಜಾರಿಗೊಳಿಸಿದರೂ ಫಲಿಸುತ್ತಿಲ್ಲ. ಆರ್ಥಿಕವಾಗಿ ತೀರಾ ಹಿಂದುಳಿದವರು, ಕೂಲಿಕಾರರು, ವಲಸಿಗರು, ಖಾಸಗಿ ಶಾಲೆಗಳ ಶುಲ್ಕ ಭರಿಸಲು ಸಾಧ್ಯವಾಗದವರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ ಮತ್ತಿತರ ಅನೇಕ ಯೋಜನೆಗಳು ಇದ್ದರೂ ಸರ್ಕಾರಿ ಶಾಲೆಗಳು ಮಕ್ಕಳು ಮತ್ತು ಪೋಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎನ್ನುತ್ತಾರೆ ಮಕ್ಕಳ ಪೋಷಕರು.

ಅನುದಾನಿತ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಕುಸಿತ

ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಖಾಸಗಿ ಅನುದಾನಿತ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಅನುದಾನಿತ ಶಾಲೆಗಳಲ್ಲಿ ದೊರೆಯುತ್ತವೆ. ಶಿಕ್ಷಕರಿಗೆ ವೇತನ, ಭತ್ಯೆ, ತುಟ್ಟಿಭತ್ಯೆ, ನಿವೃತ್ತಿ ವೇತನ ಮತ್ತಿತರ ಎಲ್ಲ ಸೌಲಭ್ಯಗಳು ದೊರೆಯುತ್ತಿರುವುದರಿಂದ ಅವರಲ್ಲಿ ಬದ್ಧತೆ ಕಡಿಮೆಯಾಗುತ್ತಿದೆ. ನೇಮಕಾತಿ ಷರತ್ತುಗಳಿಂದ ಶಿಕ್ಷಕರ ಕೊರತೆ ಇದೆ. ಹೀಗಾಗಿ ಅನುದಾನಿತ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳಿಗೂ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ ಎನ್ನುತ್ತಾರೆ ಪೋಷಕರು.

ಖಾಸಗಿ, ಇಂಗ್ಲಿಷ್ ಶಿಕ್ಷಣದ ವ್ಯಾಮೋಹ

ಮಕ್ಕಳ ದಾಖಲಾತಿ ಇಲ್ಲದ ಕಾರಣ ಶಾಲೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾದರೆ, ಮತ್ತೆ ಶಾಲೆಗಳನ್ನು ಆರಂಭಿಸಲಾಗುವುದು. ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ದಾಖಲಾತಿ ಆಂದೋಲನ, ವಿವಿಧ ಸವಲತ್ತುಗಳ ವಿವರಣೆ ನೀಡಿ ಪೋಷಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಪೋಷಕರ ಖಾಸಗಿ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿಯುುತ್ತಿದೆ.

-ಎ.ಸಿ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

ಸರ್ಕಾರಿ ಶಾಲೆಗಳ ಶಿಕ್ಷಕರ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ದಾಖಲಿಸಬೇಕು ಎಂಬ ಕಾನೂನು ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಇತರೆ ಕೆಲಸಗಳಿಗೆ ನಿಯೋಜಿಸದೆ ಬೋಧನೆಗೆ ಸೀಮಿತಗೊಳಿಸಬೇಕು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-16-1411135832

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ