ಮಣ್ಣಿನ ಋಣ ತೀರಿಸಿದ ಮೇಲೂರು ಭೀಮಣ್ಣ

ಮಣ್ಣಿನ ಋಣ ತೀರಿಸಿದ ಮೇಲೂರು ಭೀಮಣ್ಣ

ಮಣ್ಣಿನ ಋಣ ತೀರಿಸಿದ ಮೇಲೂರು ಭೀಮಣ್ಣ

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ಪುಟ್ಟ ಗ್ರಾಮವೊಂದು ಆಲೂಗಡ್ಡೆ ಕೃಷಿಯ ಚರಿತ್ರೆಯಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದ ಕಥೆ ಇದು.

ಮೇಲೂರು, ಸ್ವಾತಂತ್ರ್ಯಪೂರ್ವದಿಂದಲೂ ಕೋಲಾರ ಜಿಲ್ಲೆಯಲ್ಲಿಯೇ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಿದ ಗ್ರಾಮಗಳಲ್ಲಿ ಒಂದಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಈ ಗ್ರಾಮಕ್ಕೆ ಪ್ರಗತಿಪರತೆಯ ವಿಶಿಷ್ಟ ಚರಿತ್ರೆ ಇದೆ. ಆ ಚರಿತ್ರೆಯ ಕೇಂದ್ರಬಿಂದುವಾಗಿ ನಿಲ್ಲುವ ಬಿ. ಮುನಿಶಾಮಯ್ಯ ಅವರು ಮೇಲೂರು ಭೀಮಣ್ಣ ಎಂದೇ ಜನಪ್ರಿಯರಾಗಿದ್ದಾರೆ. 

ಗ್ರಾಮದ ಆರ್ಥಿಕತೆಯ ಬೆನ್ನೆಲುಬು: 1940ರ ದಶಕದಲ್ಲಿ ಆಲೂಗಡ್ಡೆ, ಈರುಳ್ಳಿ ಮತ್ತು ರೇಷ್ಮೆ ವ್ಯಾಪಾರ ನಡೆಸಿದ್ದ ಭೀಮಣ್ಣ, ವ್ಯಾಪಾರಕ್ಕಷ್ಟೇ ಸೀಮಿತವಾಗದೆ ಗ್ರಾಮ ಮತ್ತು ತಾಲ್ಲೂಕಿನ ಆರ್ಥಿಕತೆಗೆ ಪೂರಕವಾದ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

ಮೇಲೂರು ಮತ್ತು ಭಕ್ತರಹಳ್ಳಿ ಗ್ರಾಮಗಳ ನಡುವೆ ಒಂದು ಹೊಳೆ ಹರಿಯುತ್ತಿದ್ದು, ಮಳೆಗಾಲದಲ್ಲಿ ಎರಡೂ ಕಡೆಯ ಜನರಿಗೆ ಓಡಾಟ ಕಷ್ಟಸಾಧ್ಯವಾಗಿತ್ತು. ಇದನ್ನು ಮನಗಂಡ ಭೀಮಣ್ಣ ಸ್ವಂತ ಹಣದಲ್ಲಿ ಸಣ್ಣ ಪ್ರಮಾಣದ ಕಲ್ಲಿನ ಸೇತುವೆ ಕಟ್ಟಿಸಿದರು. ಗಾತ್ರದಲ್ಲಿ ಚಿಕ್ಕದಾದರೂ, ಈ ಸೇತುವೆ ಸ್ಥಳೀಯರ ಪಾಲಿಗೆ ಜೀವನಾಡಿಯಾಯಿತು. ಇದರಿಂದ ಭೀಮಣ್ಣನ ತೋಟಕ್ಕೆ ಬರುತ್ತಿದ್ದ ಕೂಲಿಕಾರರು ಹಾಗೂ ಭಕ್ತರಹಳ್ಳಿ ಗ್ರಾಮಸ್ಥರು ಸಂತೆಗೆ ಹೋಗಿ ಬರಲು ಅನುಕೂಲವಾಯಿತು. ಆರು ದಶಕಗಳ ನಂತರವೂ ಈ ಸೇತುವೆ ಸುಸ್ಥಿತಿಯಲ್ಲಿದೆ.

ಪಂಚಾಯಿತಿ ಅಧ್ಯಕ್ಷ ಆಗಿದ್ದಾಗ ಸರ್ಕಾರಿ ಆಸ್ಪತ್ರೆ ಉದ್ಘಾಟನೆಗೆ ಮೈಸೂರು ಮಹಾರಾಜರನ್ನು ಕರೆಸಿದ್ದ ಸಂಗತಿಯನ್ನು ಗ್ರಾಮದ ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಸಂತೆ ನಾರಾಯಣಸ್ವಾಮಿ ಪ್ರಕಾರ, ಆಗ ಕಾಚಹಳ್ಳಿಯಿಂದ ಮೇಲೂರಿನವರೆಗಿನ ದಾರಿಗೆ ಚಪ್ಪರ ಹಾಕಿಸಿ ಸ್ವಾಗತ ಕೋರಲಾಗಿತ್ತು.

‘ಬೆಳೆ ಬಂದ ಮೇಲೆ ಹಣ ಕೊಡಿ’:  1960ರ ದಶಕದಲ್ಲಿ ಆಲೂಗಡ್ಡೆ ಬೆಳೆಗಾರರು ಗುಣಮಟ್ಟದ ಬಿತ್ತನೆ ಗಡ್ಡೆಗಳ ಕೊರತೆಯನ್ನು ದೊಡ್ಡ ಮಟ್ಟದಲ್ಲಿ ಎದುರಿಸುತ್ತಿದ್ದರು. ಇದನ್ನು ನೀಗಿಸಲು ಭೀಮಣ್ಣ ಬಿತ್ತನೆ ಹಂಗಾಮು ಶುರುವಾಗುವುದಕ್ಕೂ ಮುಂಚಿತವಾಗಿ ಗುಣಮಟ್ಟದ ಆಲೂಗೆಡ್ಡೆ ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಿದರು.

ಹೊರರಾಜ್ಯದಿಂದ ತರಿಸಿದ ‘ಕುಫ್ರಿ’ ಸರಣಿಯ ಆರಂಭಿಕ ತಳಿಗಳನ್ನು ತಾಲ್ಲೂಕು ಮತ್ತು ಹಳ್ಳಿಗಳಿಗೆ ತಲುಪಿಸುವ ಜಾಲ ರೂಪಿಸಿದರು. ಬಿತ್ತನೆ ಗಡ್ಡೆಯ ವೆಚ್ಚ ಭರಿಸಲಾಗದ ಬಡ ರೈತರಿಗೆ ‘ಫಸಲು ಬಂದ ನಂತರ ಹಣ ಪಾವತಿಸಿ’ ಎಂಬ ನೀತಿಯನ್ನು ಜಾರಿಗೆ ತಂದರು. ಈ ನಿರ್ಧಾರ ಈ ಭಾಗದಲ್ಲಿ ಆಲೂಗಡ್ಡೆ ಕೃಷಿಯ ವಿಸ್ತೀರ್ಣ ಹೆಚ್ಚಲು ಕೊಡುಗೆ ನೀಡಿತು.

ಅವರ ಕೆಲಸವು ಬಿತ್ತನೆ ಗಡ್ಡೆ ವಿತರಣೆಗೆ ಸೀಮಿತವಾಗಲಿಲ್ಲ. ಬದಲಿಗೆ ಉತ್ತರ ಭಾರತದ ವಿಜ್ಞಾನಿಗಳು ಮತ್ತು ತಜ್ಞರ ಜೊತೆ ಸಂಪರ್ಕ ಸಾಧಿಸಿ, ಚಿಕ್ಕಬಳ್ಳಾಪುರದ ಒಣ ಹವಾಮಾನಕ್ಕೆ ಸೂಕ್ತವಾದ ತಳಿ ಯಾವುದು, ರೋಗ ತಡೆಗಟ್ಟುವುದು ಹೇಗೆ ಎಂಬ ಮಾಹಿತಿಯನ್ನು ಸ್ಥಳೀಯ ರೈತರಿಗೆ ತಲುಪಿಸುವ ಕೆಲಸವನ್ನೂ ಅವರು ಮಾಡಿದರು.

ಶಿಡ್ಲಘಟ್ಟದಿಂದ ಇಡೀ ಚಿಕ್ಕಬಳ್ಳಾಪುರದವರೆಗೆ:  ಭೀಮಣ್ಣ ಅವರ ಈ ಕೃಷಿ ಕಾಳಜಿಯ ಫಲ ಒಂದೇ ಗ್ರಾಮಕ್ಕೆ ಸೀಮಿತವಾಗಲಿಲ್ಲ. ಶಿಡ್ಲಘಟ್ಟ, ವಿಜಯಪುರ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ರೈತರ ಆರ್ಥಿಕ ಸುಧಾರಣೆಗೆ ಇವರ ಶ್ರಮ ಕಾರಣವಾಗಿದೆ.

ಶತಮಾನಗಳ ಹಿಂದೆ ಕರ್ನಲ್ ಕುಪ್ಪೇಜ್ ಅವರಿಂದ ಆರಂಭವಾದ ಆಲೂಗಡ್ಡೆ ಕೃಷಿ, ಇಂದಿಗೂ ಈ ಭಾಗದಲ್ಲಿ ಜೀವಂತವಾಗಿ ಉಳಿದಿರುವುದಕ್ಕೆ ಭೀಮಣ್ಣನಂತಹ ಸ್ಥಳೀಯರ ಶ್ರಮವೂ ಕಾರಣ ಎಂಬುದನ್ನು ಮರೆಯುವಂತಿಲ್ಲ.

ಕರ್ನಲ್ ಕುಪ್ಪೇಜ್ ಎಂಬ ಮೊದಲ ಹೆಜ್ಜೆ

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೃಷಿ ಚರಿತ್ರೆಯಲ್ಲಿ ಆಲೂಗಡ್ಡೆಗೆ ವಿಶೇಷ ಸ್ಥಾನವಿದೆ. ಸುಮಾರು 1800ರ ಆಸುಪಾಸಿನಲ್ಲಿ ಬ್ರಿಟಿಷ್ ಅಧಿಕಾರಿ ಕರ್ನಲ್ ಕುಪ್ಪೇಜ್ ಅವರು ನಂದಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯನ್ನು ಮೊದಲ ಬಾರಿಗೆ ಪರಿಚಯಿಸಿದರು. ಬರಗಾಲ ಮತ್ತು ಆಹಾರದ ಅಭಾವಕ್ಕೆ ಪರ್ಯಾಯವಾಗಿ ತಂದ ಈ ಬೆಳೆ ಮುಂದೆ ಪ್ರಾಂತ್ಯದ ರೈತರ ಬದುಕಿನ ಮೇಲೆ ಪರಿಣಾಮ ಬೀರಿತು. ಬೆಂಗಳೂರಿನ ಸರ್ಕಾರಿ ತೋಟ (ನಂತರದಲ್ಲಿ ಅದು ಲಾಲ್‌ಬಾಗ್ ಆಯಿತು) ದಲ್ಲಿ ಆಲೂಗಡ್ಡೆ ಬೆಳೆ ಪ್ರಸಾರವನ್ನು ಡಾ. ಬೆಂಜಮಿನ್ ಹೇನ್ ಮುಂದುವರಿಸಿದ ಬಗ್ಗೆ 1802-05ರ ಈಸ್ಟ್ ಇಂಡಿಯಾ ಕಂಪನಿ ದಾಖಲೆಗಳಲ್ಲೂ ಉಲ್ಲೇಖವಿದೆ. ಈ ಇತಿಹಾಸ ಪುಸ್ತಕದ ಪುಟಗಳಿಗಷ್ಟೇ ಸೀಮಿತವಾಗಲಿಲ್ಲ. ಒಂದೂವರೆ ಶತಮಾನದ ನಂತರ ಅದೇ ಬೆಳೆಯನ್ನು ಸ್ಥಳೀಯ ನೆಲದಲ್ಲಿ ಮುಂದುವರಿಸಿದವರು ಮೇಲೂರಿನ ಭೀಮಣ್ಣ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ