
ಬೆಂಗಳೂರಲ್ಲಿ ಐಷಾರಾಮಿ ಕಟ್ಟಡಗಳ ಹೆಚ್ಚಳ: ಮಧ್ಯಮ ವರ್ಗದವರಿಗೆ ಕೈಗೆಟುಕದ ಮನೆಗಳು!
ಬೆಂಗಳೂರು: ನಗರದಲ್ಲಿ ಆಸ್ತಿ ಬೆಲೆ ಸ್ಥಿರವಾಗಿ ಏರುತ್ತಿದ್ದಂತೆ, ಮಧ್ಯಮ ವರ್ಗದವರು ಕೈಗೆಟುಕುವ ಬೆಲೆಯ ಮನೆಗಳನ್ನು ಕೊಂಡುಕೊಳ್ಳಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ, ಆರ್ಥಿಕವಾಗಿ ದುರ್ಬಲ ವರ್ಗಗಳು (ಇಡಬ್ಲ್ಯುಎಸ್) ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಕಡಿಮೆ ಬೆಲೆಯ ನಿರೀಕ್ಷೆಯಲ್ಲಿ ಅನೇಕ ಕುಟುಂಬಗಳು ನಗರದ ಹೊರವಲಯಕ್ಕೆ ಸ್ಥಳಾಂತರಗೊಳ್ಳುತ್ತಿವೆಯಾದರೂ, ಕಳೆದ ಐದು ವರ್ಷದಲ್ಲಿ ಅಲ್ಲಿಯೂ ಆಸ್ತಿ ಬೆಲೆ ಗಣನೀಯವಾಗಿ ಹೆಚ್ಚಾಗಿದೆ.
ಮೆಟ್ರೊ ಸಂಪರ್ಕ ವಿಸ್ತರಣೆಯು ಕೆಲವು ಪ್ರದೇಶಗಳಲ್ಲಿ ಬೆಲೆ ಏರಿಕೆಗೆ ಕಾರಣವಾಗಿದ್ದರೆ, ಐಟಿ ಕಂಪನಿಗಳ ಬೆಳವಣಿಗೆ ಮತ್ತು ಟೆಕ್ ಕ್ಯಾರಿಡಾರ್‌ಗಳು ನಗರದಾದ್ಯಂತ ರಿಯಲ್ ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸಿವೆ.
‘ನಮ್ಮ ಬಜೆಟ್ ₹60 ಲಕ್ಷ ಇತ್ತು. ಆದರೆ, ಆ ಬೆಲೆಗೆ ಸ್ವತಂತ್ರ ಮನೆ ಅಥವಾ ನಿವೇಶನ (ಪ್ಲಾಟ್) ಪಡೆಯುವುದು ಅಸಾಧ್ಯ ಎಂದು ನಮಗೆ ಅರಿವಾಯಿತು. ನಾವು ಫ್ಲಾಟ್ ಖರೀದಿಸಲು ಸಿದ್ಧರಿದ್ದರೂ, ಹೊರವಲಯದಲ್ಲೂ ಬೆಲೆ ಎಷ್ಟೊಂದು ಹೆಚ್ಚಾಗಿದೆ ಎಂದರೆ ಉತ್ತಮವಾದ ಮನೆ ಸಿಗುವುದು ಕಷ್ಟವಾಗಿತ್ತು. ಅಂತಿಮವಾಗಿ ನಾವು ದೇವನಹಳ್ಳಿಗೆ ಸ್ಥಳಾಂತರಗೊಳ್ಳಬೇಕಾಯಿತು’ ಎನ್ನುತ್ತಾರೆ ಈಚೆಗೆ ಫ್ಲಾಟ್ ಖರೀದಿಸಿರುವ ಸೂರಜ್.
ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮನೆ ಖರೀದಿದಾರರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಿಂದ ಹೊರಬಂದು, ಗ್ರಾಮ ಪಂಚಾಯತಿ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಡ್ ನಂತರ ಬೆಂಗಳೂರಿನಲ್ಲಿ ದೊಡ್ಡ ಮನೆಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಪ್ರೇರಿತರಾದ ಡೆವಲಪರ್‌ಗಳು ಪ್ರೀಮಿಯಂ ಮತ್ತು ವಿಲಾಸಿ (ಐಷಾರಾಮಿ) ವಿಭಾಗಗಳಲ್ಲಿ ಯೋಜನೆಗಳನ್ನು ಆರಂಭಿಸಲು ಮುಂದಾದರು ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ.
ಮನೆಗಳನ್ನು ಒದಗಿಸುವ ನಿರೀಕ್ಷೆಯಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ (ಬಿಡಿಎ) ಹೊಸ ಬಡಾವಣೆಗಳನ್ನು (ಲೇಔಟ್) ಅಭಿವೃದ್ಧಿಪಡಿಸಿಲ್ಲ. 2016ರಲ್ಲಿ ಬಿಡಿಎ ಕೊನೆಯದಾಗಿ ಸಾರ್ವಜನಿಕರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಅದಾದ ನಂತರ ಡಾ. ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದ್ದು, ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ.
2023ರಲ್ಲಿ ಈ ಬಡಾವಣೆಯಲ್ಲಿ 30x40 ಅಡಿ ನಿವೇಶನದ ಬೆಲೆಯನ್ನು ₹60 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಪ್ರಸ್ತುತ ಅದು ₹72 ಲಕ್ಷಕ್ಕೆ ತಲುಪಿದೆ.
‘2000ರಲ್ಲಿ ಬಿಡಿಎ ಐದು ವರ್ಷಗಳ ಅವಧಿಯಲ್ಲಿ 50,000ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಸಾರ್ವಜನಿಕರ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಬಿಡಿಎ ಶ್ರಮಿಸಬೇಕು. ಬಿಡಿಎ ಸರಿಯಾಗಿ ಕಾರ್ಯನಿರ್ವಹಿಸಿದರೆ, ಮಾರುಕಟ್ಟೆ ಬೆಲೆಗಳೂ ನಿಯಂತ್ರಣದಲ್ಲಿರುತ್ತವೆ. ಹೊಸ ಲೇಔಟ್ ಅಭಿವೃದ್ಧಿಪಡಿಸುವಲ್ಲಿ ಅದರ ವೈಫಲ್ಯವೇ ಇಂದಿನ ಮಾರುಕಟ್ಟೆ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಬಿಡಿಎ ನಿವೃತ್ತ ಆಯುಕ್ತಯೊಬ್ಬರು ಹೇಳಿದ್ದಾರೆ.
ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಿಂತಲೂ ನಮ್ಮ ದರ ಕಡಿಮೆ ಇದೆ ಎಂದು ಪ್ರತಿಪಾದಿಸಿದ ಬಿಡಿಎ ಬೆಲೆ ಏರಿಕೆ ಮಾಡಿದೆ.
‘ನಾವು ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ನಿವೇಶನ ಹಂಚಿಕೆ ಆರಂಭಿಸುವುದಕ್ಕಾಗಿ ಕಾಯುತ್ತಿದ್ದೇವೆ. 2023ರಲ್ಲಿ ₹60 ಲಕ್ಷ ನೀಡಲು ನಾವು ಸಿದ್ಧರಿದ್ದೆವು. ಆದರೆ, ಬಿಡಿಎ ಮುಂದೆ ಬರಲಿಲ್ಲ. ನ್ಯಾಯಯುತ ಬೆಲೆಯಲ್ಲಿ ಯಾವುದೇ ಕಾನೂನು ತಕರಾರಿಲ್ಲದ (ಲಿಟಿಗೇಷನ್-ಫ್ರೀ) ನಿವೇಶನ ಪಡೆಯಲು ನಮಗಿರುವ ಏಕೈಕ ಆಯ್ಕೆ ಬಿಡಿಎ. ಆದರೆ, ವಿಳಂಬದ ನೆಪವೊಡ್ಡಿ ಸಾರ್ವಜನಿಕರಿಂದ ಹೆಚ್ಚಿನ ದರ ವಸೂಲಿ ಮಾಡುವುದು ಸ್ವೀಕಾರಾರ್ಹವಲ್ಲ’ ಎಂದು ಉತ್ತರ ಬೆಂಗಳೂರಿನ ನಿವಾಸಿ ಸಂದೀಪ್ ಬೇಸರ ಹೊರಹಾಕಿದ್ದಾರೆ.
ಆದಾಗ್ಯೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಧ್ಯಮ ವರ್ಗದ ಅಗತ್ಯತೆಗಳನ್ನು ಪೂರೈಸಲು ಅಪಾರ್ಟ್‌ಮೆಂಟ್ ಸಮುಚ್ಚಯಗಳನ್ನು ನಿರ್ಮಿಸಿದ್ದು, ಈ ಯೋಜನೆಗಳಿಗೆ ಸಾರ್ವಜನಿಕರಿಂದ ಕ್ರಮೇಣ ಉತ್ತಮ ಸ್ಪಂದನೆ ಸಿಗುತ್ತಿದೆ.
ಡೆವಲಪರ್‌ಗಳು ಸ್ವತಃ ಒತ್ತಡದಲ್ಲಿರುವುದರಿಂದ ಮಧ್ಯಮ ವರ್ಗದವರ ನೆರವಿಗೆ ಸರ್ಕಾರವೇ ಮುಂದಾಗಬೇಕು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ನಿರ್ಮಾಣ ವೆಚ್ಚ ಮತ್ತು ರಿಯಲ್ ಎಸ್ಟೇಟ್ ಬೆಲೆ ಹೆಚ್ಚಿರುವುದರಿಂದ ಡೆವಲಪರ್‌ಗಳಿಗೆ ಕಡಿಮೆ ದರದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನೀಡುವುದು ಕಷ್ಟಕರವಾಗಿದೆ. ಕಳೆದ ಆರು ತಿಂಗಳಲ್ಲಿ ನಿರ್ಮಾಣ ವೆಚ್ಚ ಶೇಕಡ 25ರಷ್ಟು ಹೆಚ್ಚಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 (ಪಿಎಂಎವೈ) ಯೋಜನೆಯ ಅಡಿಯಲ್ಲಿ ಕೈಗೆಟುಕುವ ಗೃಹ ನಿರ್ಮಾಣ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಬಹುದು. ತೆರಿಗೆ ಕಡಿಮೆ ಇರುತ್ತದೆ. ಆದರೆ, ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಇದರಿಂದಾಗಿ ಅದರ ಪ್ರಯೋಜನ ಸೀಮಿತವಾಗಿದೆ. ಸರ್ಕಾರ ಶೀಘ್ರವೇ ನಿಯಮಗಳನ್ನು ರೂಪಿಸಿ ಯೋಜನೆಯನ್ನು ಜಾರಿಗೊಳಿಸಬೇಕು’ ಎಂದು ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಒತ್ತಾಯಿಸಿದ್ದಾರೆ.