
ಕಬಿನಿಯಿಂದ ಹೆಚ್ಚು ನೀರು ಬಿಡುಗಡೆ, 4 ಜಲಾಶಯದಿಂದ 24 ಸಾವಿರ ಕ್ಯುಸೆಕ್ ಹೊರಕ್ಕೆ
ಬೆಂಗಳೂರು: ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರತೆ ಇರುವ ಜತೆಗೆ, ನೀರಾವರಿಗೆ ನೀರು ಹರಿಸುವ ಕುರಿತು ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಕಾವೇರಿ ಕಣಿವೆಯ ಜಲಾಶಯಗಳಿಂದ ಹೊರ ಹರಿವಿನ ಪ್ರಮಾಣವನ್ನು ಏರಿಕೆ ಮಾಡಲಾಗಿದೆ.
ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಿಗೆ ಈಗಲೂ 13700 ಕ್ಯುಸೆಕ್ ನೀರು ಒಳಹರಿವು ಇದೆ. ಆದರೆ, ಹೊರ ಹರಿವಿನ ಪ್ರಮಾಣ 23700 ಕ್ಯುಸೆಕ್ ಗೂ ಅಧಿಕವಿದೆ. ಒಳಹರಿವಿಗಿಂತ ಸುಮಾರು 10 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.
ನಾಲ್ಕೂ ಜಲಾಶಯಗಳಲ್ಲಿ ಈಗ 86.37 ಟಿಎಂಸಿ ನೀರು ಲಭ್ಯವಿದ್ದು, ಶೇ 75ರಷ್ಟು ಭರ್ತಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 111 ಟಿಎಂಸಿ ನೀರು ಲಭ್ಯವಿತ್ತು. ಇಲ್ಲಿ 114 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.
ಅದರಲ್ಲೂ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವನ್ನು 14392 ಕ್ಯುಸೆಕ್‌ಗೆ ಏರಿಕೆ ಮಾಡಲಾಗಿದೆ. ನಿನ್ನೆಯವರೆಗೂ 13600 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿತ್ತು.
ಕಬಿನಿ ಜಲಾಶಯದಿಂದ ಸತತವಾಗಿ ನೀರು ಹೊರಹರಿಸುತ್ತಿರುವ ಕಾರಣದಿಂದಾಗಿ ಜಲಾಶಯದ ನೀರಿನ ಪ್ರಮಾಣವೂ ಕುಸಿದಿದೆ. ಸದ್ಯ ಕಬಿನಿ ಜಲಾಶಯಕ್ಕೆ 6957 ಕ್ಯುಸೆಕ್ ನೀರು ಒಳಹರಿವು ಇದೆ. ಜಲಾಶಯದ ನೀರಿನ ಮಟ್ಟವು 2276.75 ಅಡಿಗೆ ಇಳಿದಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2283.59 ಅಡಿ ನೀರು ಇತ್ತು. ಶೇ 78ರಷ್ಟು ನೀರು ಇಲ್ಲಿ ಸಂಗ್ರಹವಿದೆ. ಜಲಾಶಯದಲ್ಲಿ ಈಗ 15.23 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ 19.25 ಟಿಎಂಸಿ ನೀರಿತ್ತು. ಇಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು.
ಕಬಿನಿ ಜಲಾಶಯದಿಂದ ಕುಡಿಯುವ ನೀರು ಹಾಗೂ ನಾಲೆಗೆ ಸೇರಿದಂತೆ ಸುಮಾರು 14 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಒಳಹರಿವು ಕೂಡ 7 ಸಾವಿರ ಕ್ಯುಸೆಕ್ ನಷ್ಟಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಈಗ 2501 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4500 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಶೇ 86ರಷ್ಟು ನೀರಿದ್ದು, 32 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಮಟ್ಟವು 2916.45 ಅಡಿಯಷ್ಟಿದೆ.
ಕೊಡಗಿನ ಹಾರಂಗಿ ಜಲಾಶಯಕ್ಕೆ 2651 ಕ್ಯುಸೆಕ್ ಒಳಹರಿವು ಇದ್ದರೆ, 2500 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಶೇ 98ರಷ್ಟು ನೀರು ಸಂಗ್ರಹವಿದೆ. 8.33 ಟಿಎಂಸಿ ನೀರು ಲಭ್ಯವಿದ್ದು, 2858.51 ಅಡಿ ನೀರು ಇದೆ.