
ಅಲ್ಲು ಅರ್ಜುನ್ ತಂದೆಯ 3 ವರ್ಷದ ಹಿಂದಿನ ಹೇಳಿಕೆಗೆ ಯಶ್ ತಾಯಿ ಪುಷ್ಪ ತಿರುಗೇಟು
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದ ‘ಟಾಕ್ಸಿಕ್’, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ನಡುವೆ ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ಅವರು, ನಿರ್ಮಾಪಕ ಅಲ್ಲು ಅರವಿಂದ್ ಈ ಹಿಂದೆ ನೀಡಿದ್ದ ಹೇಳಿಕೆಯೊಂದನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ‘ಟಾಕ್ಸಿಕ್’ ಸಿನಿಮಾ ಹಾಗೂ ಅದರ ಬಗ್ಗೆ ಹರಡುತ್ತಿರುವ ಅಪಪ್ರಚಾರದ ಬಗ್ಗೆ ಮಾತನಾಡಿರುವ ಅವರು, ಅಲ್ಲು ಅರವಿಂದ್ ಅವರ ಹೆಸರನ್ನು ಉಲ್ಲೇಖಿಸದೆ, 3 ವರ್ಷದ ಹಿಂದೆ ಅವರು ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.
‘ಕೆಜಿಎಫ್ ಸಿನಿಮಾದಿಂದ ಯಶ್ ಹೆಚ್ಚು ಜನಪ್ರಿಯಗೊಂಡರು ಎಂದು ಕೆಲವರು ಹೇಳುತ್ತಾರೆ. ಆದರೆ ಅದಕ್ಕೂ ಮುನ್ನ, ಯಶ್ ಸತತ ಐದು ಹಿಟ್ ಸಿನಿಮಾಗಳನ್ನು ನೀಡಿದ್ದರು. ಯಶ್ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವನಲ್ಲ. ಅವನು ಸ್ವಂತ ಶ್ರಮದಿಂದ ಬೆಳೆದವನು. ಒಬ್ಬ ತಾಯಿಯಾಗಿ, ನಾನು ನನ್ನ ಮಗನ ಬಗ್ಗೆ ಹೆಮ್ಮೆಪಡುತ್ತೇನೆ’ ಎಂದು ಪುಷ್ಪ ಅರುಣ್‌ಕುಮಾರ್ ಹೇಳಿದ್ದಾರೆ.
ಅಲ್ಲು ಅರವಿಂದ್ ಹೇಳಿದ್ದೇನು?
2023ರಲ್ಲಿ ತೆಲುಗಿನ ಹಿರಿಯ ನಿರ್ಮಾಪಕ ಹಾಗೂ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಕೆಜಿಎಫ್ ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ‘ಕೆಜಿಎಫ್‌ಗೆ ಮುನ್ನ ಯಶ್ ಯಾರು, ಕೆಜಿಎಫ್‌ನಿಂದಾಗಿ ಅವರು ಜನಪ್ರಿಯತೆ ಪಡೆದುಕೊಂಡರು’ ಎಂದಿದ್ದರು.
‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನ ಯಶ್ ಅವರು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ನಿರೂಪಕರು ಈ ಬಗ್ಗೆ ಯಶ್ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಯಶ್, ‘ಒಂದು ಸಿನಿಮಾ, ನಿರ್ಮಾಪಕರಿಗೆ ಮಾತ್ರ ಸೇರಿದ್ದಲ್ಲ. ಅನೇಕರು ಸಿನಿಮಾದಲ್ಲಿ ಕೆಲಸ ಮಾಡುತ್ತಾರೆ. ಆದರೆ ನಟನಿಗೆ ಹೆಚ್ಚಿನ ಕ್ರೆಡಿಟ್ ಸಿಗುತ್ತದೆ. ಸಿನಿಮಾ ಯಶಸ್ವಿಯಾಗಲು ಪ್ರತಿಯೊಬ್ಬರ ಪರಿಶ್ರಮವಿರುತ್ತದೆ. ಒಂದು ವೇಳೆ ನಟನು ಪಾತ್ರವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಸಿನಿಮಾ ತಲುಪಿಸಲು ಸಾಧ್ಯವಾಗದಿರಬಹುದು’ ಎಂದು ಹೇಳಿದ್ದರು.
‘ಟಾಕ್ಸಿಕ್’ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ₹285.20 ಕೋಟಿ ಗಳಿಸಿದೆ. ಭಾರತದಲ್ಲಿ ₹255.95 ಕೋಟಿ ಗಳಿಸಿದೆ.