
ಮಧುಗಿರಿ ತಾಲ್ಲೂಕಿನ 37 ಕೆರೆಗಳ ಅಭಿವೃದ್ಧಿಗೆ ₹268 ಕೋಟಿ ವೆಚ್ಚ
ಕೊಡಿಗೇನಹಳ್ಳಿ: ಸಣ್ಣ ನೀರಾವರಿ ಇಲಾಖೆಯಿಂದ ₹268 ಕೋಟಿ ವೆಚ್ಚದಲ್ಲಿ ಮಧುಗಿರಿ ತಾಲ್ಲೂಕಿನ 37 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿರುವುದು ತಾಲ್ಲೂಕಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಆಯ್ದ 37 ಕೆರೆಗಳಲ್ಲಿ ಕೆರೆ ಏರಿ, ತೂಬು, ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಈ ಕೆರೆಗಳಲ್ಲಿ ಎತ್ತಿಹೊಳೆ ನೀರಿನ ಜೊತೆಗೆ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಏರಲಿದೆ. ಬರಗಾಲದಲ್ಲೂ ಜಾನುವಾರು ಮತ್ತು ಕೃಷಿಗೆ ನೀರು ಲಭ್ಯವಾಗಲಿದೆ ಎನ್ನುವುದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ.
ಇದು ಕೇವಲ ಕೆರೆ ಅಭಿವೃದ್ಧಿಯಷ್ಟೇ ಅಲ್ಲ. ಎತ್ತಿನಹೊಳೆ ಯೋಜನೆಯಡಿ ಮಧುಗಿರಿ ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿಗೂ ಅನುಕೂಲವಾಗಲಿದೆ. ಕೆರೆಗಳಿಗೆ ನೀರು ಹರಿಸುವುದರಿಂದ ಕುಡಿಯುವ ನೀರು ಮತ್ತು ನೀರಾವರಿ ಎರಡೂ ಸಮಸ್ಯೆಗಳಿಗೂ ಒಂದೇ ಬಾರಿಗೆ ಪರಿಹಾರ ದೊರಕಿದಂತಾಗಲಿದೆ ಎನ್ನುವುದು ಈ ಭಾಗದ ರೈತರ ನಂಬಿಕೆ.
‘ಈ ಭಾಗದ ಜೀವನಾಡಿಯಾಗಿದ್ದ ಕೆರೆಗಳು ಬರಗಾಲದಿಂದಾಗಿ ಹೊಳಪು ಕಳೆದುಕೊಂಡರೆ, ತಲಪರಿಗೆಗಳು ಒತ್ತುವರಿಯಿಂದಾಗಿ ಕಣ್ಮರೆಯಾಗಿದ್ದವು. ಈಗ ಸರ್ಕಾರದ ಮಹತ್ವಾಕಾಂಕ್ಷಿಯ ಈ ಯೋಜನೆ ತ್ವರಿತಗತಿಯಲ್ಲಿ ಸಾಗುತ್ತಿರುವುದು ಬಯಲುಸೀಮೆಯ ಭೂಮಿಯನ್ನು ಮತ್ತೆ ಹಸಿರಾಗಿಸುವ ಭರವಸೆ ನೀಡಿವೆ’ ಎನ್ನುತ್ತಾರೆ ಪುರವರದ ಪಿ.ಕೆ. ರಂಗಸ್ವಾಮಿ.
‘ಇಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಹಾಗೂ ಕೈಗಾರಿಕೆಗಳಿಲ್ಲದೆ ಈ ಭಾಗ ಆರ್ಥಿಕವಾಗಿ ಹಿಂದುಳಿದಿತ್ತು. ಈಗ ಎತ್ತಿನಹೊಳೆ ಯೋಜನೆ ನೀರು ಹರಿಸಲು ಪೈಪ್‌ಲೈನ್ ಹಾಗೂ ಕೆರೆಗಳ ಅಭಿವೃದ್ಧಿ ಒಂದು ಆಶಾದಾಯಕ ಸಂಗತಿ’ ಎನ್ನುವುದು ಗಂಗಾಧರ್ ಅವರ ಅಭಿಪ್ರಾಯ.
‘ನೀರಿನ ಕೊರತೆಯಿಂದ ಈ ಭಾಗದ ಸಾಕಷ್ಟು ರೈತರು ಕೃಷಿ ಬಿಟ್ಟು ಪಟ್ಟಣಗಳತ್ತ ಗುಳೆ ಹೊರಟಿದ್ದರು. ಇಂತಹ ಸಂದರ್ಭದಲ್ಲಿ ಕೆರೆಗಳನ್ನು ತುಂಬಿಸಲು ಕೈಗೊಂಡಿರುವ ಯೋಜನೆ ವರದಾನವಾಗಲಿದೆ’ ಎನ್ನುತ್ತಾರೆ ವೀರನಾಗೇನಹಳ್ಳಿಯ ರೈತ ನಾಗರಾಜು.
ಎರಡನೇ ಹಂತದ ಡಿಪಿಆರ್ ಸಿದ್ಧ
ಮಧುಗಿರಿ ತಾಲ್ಲೂಕಿನ 45 ಕೆರೆಗಳಲ್ಲಿ ಮೊದಲ ಹಂತದಲ್ಲಿ ₹268 ಕೋಟಿ ವೆಚ್ಚದಲ್ಲಿ 37 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದೊಡ್ಡೇರಿ ಹೋಬಳಿಯ ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧವಾಗಿದೆ. ಮಳೆಗಾಲ ಆರಂಭಕ್ಕೆ ಮೊದಲೇ ತಾಲ್ಲೂಕಿನ ಎಲ್ಲ ಕೆರೆಗಳಿಗೆ ಪೈಪ್‌ಲೈನ್ ಹಾಗೂ ಕೆರೆಗಳ ಅಭಿವೃದ್ಧಿ ಕಾಮಗಾರಿ ಮುಗಿಸಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಸೂಚಿಸಿದ್ದಾರೆ.
ಮಂಜುಕಿರಣ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-17-2049176872